ರಸ್ತೆ ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡರೆ ಕ್ರಮ: ನಿತಿನ್ ಗಡ್ಕರಿ ಎಚ್ಚರಿಕೆ
ನವದೆಹಲಿ, 27 ಅಕ್ಟೋಬರ್ (ಹಿ.ಸ.): ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಪ್ರತಿಯೊಂದು ಗುಂಡಿಯನ್ನೂ ಗುರುತಿಸಿ, ಅದಕ್ಕೆ ಹೊಣೆಗಾರರನ್ನು ನಿರ್ಧರಿಸಲಾಗುವುದು. ರಸ್ತೆ ನಿರ್ಮಾಣದ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವ ಕಂಪನಿಗಳು, ಗುತ್ತಿಗೆದಾರರು, ಸಲಹೆಗಾರರು ಮತ್ತು ಅಧಿಕಾರಿಗಳಿಗೆ ದಂಡ ವಿಧಿಸುವುದರ ಜತೆಗೆ
नई दिल्ली में मंगलवार को सीआईआई के राष्ट्रीय राजमार्ग सम्मेलन को संबोधित करते केंद्रीय सड़क परिवहन एवं राजमार्ग मंत्री नितिन गडकरी।


ನವದೆಹಲಿ, 27 ಅಕ್ಟೋಬರ್ (ಹಿ.ಸ.):

ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಪ್ರತಿಯೊಂದು ಗುಂಡಿಯನ್ನೂ ಗುರುತಿಸಿ, ಅದಕ್ಕೆ ಹೊಣೆಗಾರರನ್ನು ನಿರ್ಧರಿಸಲಾಗುವುದು. ರಸ್ತೆ ನಿರ್ಮಾಣದ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವ ಕಂಪನಿಗಳು, ಗುತ್ತಿಗೆದಾರರು, ಸಲಹೆಗಾರರು ಮತ್ತು ಅಧಿಕಾರಿಗಳಿಗೆ ದಂಡ ವಿಧಿಸುವುದರ ಜತೆಗೆ ಕಪ್ಪುಪಟ್ಟಿಗೆ ಸೇರಿಸುವ ಕ್ರಮವನ್ನೂ ಕೈಗೊಳ್ಳಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ಇಲ್ಲಿ ಭಾರತೀಯ ಕೈಗಾರಿಕಾ ಒಕ್ಕೂಟ ಆಯೋಜಿಸಿದ್ದ ‘ಭಾರತದ ಭವಿಷ್ಯದ ಹೆದ್ದಾರಿಗಳು: ಸ್ಮಾರ್ಟ್, ಸುರಕ್ಷಿತ ಮತ್ತು ಸುಸ್ಥಿರ’ ಎಂಬ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಕಳೆದ ಕೆಲವು ತಿಂಗಳುಗಳಿಂದ ತಾವೇ ರಸ್ತೆ ಯೋಜನೆಗಳ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಈ ಅವಧಿಯಲ್ಲಿ ಗುಣಮಟ್ಟಕ್ಕೆ ಸಂಬಂಧಿಸಿದ ಸಮಸ್ಯೆಗಳು ಶೇ. 30ರಷ್ಟು ಕಡಿಮೆಯಾಗಿವೆ. ಮುಂದಿನ ಎರಡು ವರ್ಷಗಳಲ್ಲಿ ಉಳಿದ ಸಮಸ್ಯೆಗಳನ್ನೂ ಪರಿಹರಿಸುವ ವಿಶ್ವಾಸವಿದೆ ಎಂದು ಹೇಳಿದರು.

ಸಮ್ಮೇಳನದಲ್ಲಿ ರಸ್ತೆ ನಿರ್ಮಾಣದ ಗುಣಮಟ್ಟ, ರಸ್ತೆ ಸುರಕ್ಷತೆ, ಸಾಗಣೆ ವೆಚ್ಚ, ಹೊಸ ತಂತ್ರಜ್ಞಾನ, ಸುಸ್ಥಿರ ಮೂಲಸೌಕರ್ಯ ಮತ್ತು ಪರ್ಯಾಯ ಇಂಧನಗಳ ಬಳಕೆ ಕುರಿತು ಚರ್ಚೆ ನಡೆಯಿತು. ಭಾರತೀಯ ಕೈಗಾರಿಕಾ ಒಕ್ಕೂಟದ ರಾಷ್ಟ್ರೀಯ ರಸ್ತೆ ಮತ್ತು ಹೆದ್ದಾರಿ ಸಮಿತಿ ಅಧ್ಯಕ್ಷ ಎಂ.ವಿ. ಸತೀಶ್, ರಸ್ತೆ ಸುರಕ್ಷತೆಯ ರಾಷ್ಟ್ರೀಯ ಕಾರ್ಯಪಡೆಯ ಸಹ-ಅಧ್ಯಕ್ಷ ಹಾಗೂ ಇಂಡಿಯಾ ಐಟಿಎಸ್ ವೇದಿಕೆಯ ಅಧ್ಯಕ್ಷ ಅಖಿಲೇಶ್ ಶ್ರೀವಾಸ್ತವ ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನ ಸಾಂಸ್ಥಿಕ ವ್ಯವಹಾರಗಳ ಮುಖ್ಯಸ್ಥ ಜಾನ್ ಪ್ರಸಾದ್ ಕಂದಂಪರಂಬಿಲ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಹಂಚಿಕೊಳ್ಳುವ ದೂರುಗಳು ರಸ್ತೆ ದೋಷಗಳನ್ನು ಗುರುತಿಸಲು ನೆರವಾಗುತ್ತಿವೆ ಎಂದು ಗಡ್ಕರಿ ತಿಳಿಸಿದರು. ರಸ್ತೆಗಳಲ್ಲಿ ಗುಂಡಿಗಳು ಅಥವಾ ಇತರ ಗುಣಮಟ್ಟದ ಸಮಸ್ಯೆಗಳು ಕಂಡುಬಂದರೆ ಅವುಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಳ್ಳುವಂತೆ ಜನರಿಗೆ ಮನವಿ ಮಾಡಿದರು.

ರಸ್ತೆ ಸೇತುವೆಗಳಲ್ಲಿ ಬಳಸುವ ಬೇರಿಂಗ್‌ಗಳು ಮತ್ತು ವಿಸ್ತರಣಾ ಜೋಡಣೆಗಳನ್ನು ತಯಾರಿಸುವ ಹಲವು ಕಂಪನಿಗಳನ್ನು ಗುಣಮಟ್ಟದ ಕೊರತೆಯ ಹಿನ್ನೆಲೆಯಲ್ಲಿ ಈಗಾಗಲೇ ಕಪ್ಪುಪಟ್ಟಿಗೆ ಸೇರಿಸಲಾಗಿದೆ. ರಸ್ತೆ ನಿರ್ಮಾಣದ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವ ಪ್ರಕರಣಗಳ ಬಗ್ಗೆ ಸಚಿವಾಲಯ ಶೂನ್ಯ ಸಹಿಷ್ಣುತೆಯ ನೀತಿ ಅನುಸರಿಸುತ್ತಿದೆ ಎಂದು ಹೇಳಿದರು.

ರಸ್ತೆಗಳ ಸ್ಥಿತಿಗತಿಯನ್ನು ಪರಿಶೀಲಿಸಲು ಜಾಲ ಮೇಲ್ವಿಚಾರಣಾ ವಾಹನಗಳನ್ನು ಬಳಸಲಾಗುತ್ತಿದೆ. ಈ ವಾಹನಗಳು ಸಂಚರಿಸುತ್ತಲೇ ರಸ್ತೆಯ ಸ್ಥಿತಿ ಮತ್ತು ಮೇಲ್ಮೈಯ ಗುಣಮಟ್ಟವನ್ನು ಅಳೆಯುವ ತಂತ್ರಜ್ಞಾನ ಹೊಂದಿವೆ. ಗಂಟೆಗೆ 40ರಿಂದ 80 ಕಿ.ಮೀ. ವೇಗದಲ್ಲಿ ರಸ್ತೆಗಳನ್ನು ಪರಿಶೀಲಿಸಲು ಇವುಗಳಿಗೆ ಸಾಧ್ಯವಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಸೂಚನೆಯಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ತಂತ್ರಜ್ಞಾನವನ್ನು ಬಳಸುತ್ತಿದೆ ಎಂದು ವಿವರಿಸಿದರು.

ಈ ವ್ಯವಸ್ಥೆಯಿಂದ ರಸ್ತೆ ಗುಣಮಟ್ಟದ ಮೇಲ್ವಿಚಾರಣೆ, ದುರಸ್ತಿ ಕಾರ್ಯಗಳ ಯೋಜನೆ ಮತ್ತು ಸಂಗ್ರಹಿಸಿದ ಮಾಹಿತಿಯನ್ನು ಕೃತಕ ಬುದ್ಧಿಮತ್ತೆ ಆಧಾರಿತ ಅಂತರ್ಜಾಲ ತಾಣದಲ್ಲಿ ಲಭ್ಯವಾಗುವಂತೆ ಮಾಡಲು ನೆರವಾಗುತ್ತದೆ ಎಂದರು.

ಭಾರತವನ್ನು ಐದು ಲಕ್ಷ ಕೋಟಿ ಡಾಲರ್‌ ಮೌಲ್ಯದ ಆರ್ಥಿಕತೆಯನ್ನಾಗಿ ರೂಪಿಸಲು ಬಲಿಷ್ಠ ಮೂಲಸೌಕರ್ಯ ಅಗತ್ಯವಾಗಿದೆ ಎಂದು ಗಡ್ಕರಿ ಹೇಳಿದರು. ಜಲ, ವಿದ್ಯುತ್, ಸಾರಿಗೆ ಮತ್ತು ಸಂಪರ್ಕ ಕ್ಷೇತ್ರಗಳ ಅಭಿವೃದ್ಧಿಯು ಕೈಗಾರಿಕಾ ಬೆಳವಣಿಗೆ, ವ್ಯಾಪಾರ ಮತ್ತು ಹೂಡಿಕೆಗೆ ನಿರ್ಣಾಯಕವಾಗಿದೆ. ಮೂಲಸೌಕರ್ಯಕ್ಕೆ 100 ರೂಪಾಯಿ ಹೂಡಿಕೆ ಮಾಡಿದಾಗ ಆರ್ಥಿಕತೆಯ ಮೇಲೆ 325 ರೂಪಾಯಿಗಳಷ್ಟು ಪರಿಣಾಮ ಉಂಟಾಗುತ್ತದೆ. ಹೀಗಾಗಿ ಉತ್ತಮ ಗುಣಮಟ್ಟದ ರಸ್ತೆಗಳ ನಿರ್ಮಾಣಕ್ಕೆ ಸರ್ಕಾರ ಅತ್ಯುನ್ನತ ಆದ್ಯತೆ ನೀಡುತ್ತಿದೆ ಎಂದು ತಿಳಿಸಿದರು.

ಬಿಹಾರದಲ್ಲಿ ನದಿಗಳ ಹೂಳೆತ್ತುವ ಕಾರ್ಯವನ್ನು ಹೆದ್ದಾರಿ ನಿರ್ಮಾಣಕ್ಕೆ ಬಳಸಿಕೊಳ್ಳುವ ಯೋಜನೆಯ ಬಗ್ಗೆಯೂ ಅವರು ಮಾಹಿತಿ ನೀಡಿದರು. ಈ ಸಂಬಂಧ ಬಿಹಾರ ಮುಖ್ಯಮಂತ್ರಿ ಅವರೊಂದಿಗೆ ಶೀಘ್ರದಲ್ಲೇ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲು ಮಾತುಕತೆ ನಡೆಸಲಾಗುತ್ತಿದೆ. ಯೋಜನೆಯಡಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಯಾವುದೇ ಶುಲ್ಕವಿಲ್ಲದೆ ನದಿಗಳ ಹೂಳೆತ್ತಲಿದೆ. ಹೊರತೆಗೆದ ಹೂಳನ್ನು ಹೆದ್ದಾರಿ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುತ್ತದೆ. ಇದರಿಂದ ಬಿಹಾರದಲ್ಲಿ ಪ್ರವಾಹದ ಅಪಾಯವನ್ನು ಕಡಿಮೆ ಮಾಡಲು ನೆರವಾಗಲಿದೆ ಎಂದು ಹೇಳಿದರು.

ಸಮ್ಮೇಳನದಲ್ಲಿ ಮಾತನಾಡಿದ ಭಾರತೀಯ ಕೈಗಾರಿಕಾ ಒಕ್ಕೂಟದ ರಾಷ್ಟ್ರೀಯ ರಸ್ತೆ ಮತ್ತು ಹೆದ್ದಾರಿ ಸಮಿತಿ ಅಧ್ಯಕ್ಷ ಎಂ.ವಿ. ಸತೀಶ್, ರಸ್ತೆಗಳು ಕೇವಲ ವ್ಯಾಪಾರದ ಮಾರ್ಗಗಳಲ್ಲ; ಅವು ವಿಚಾರಗಳು, ನಾವೀನ್ಯತೆ, ಸಂಸ್ಕೃತಿ ಮತ್ತು ಸಮೃದ್ಧಿಯ ಪ್ರಸರಣಕ್ಕೂ ನೆರವಾಗುತ್ತವೆ ಎಂದರು. ಭಾರತವು ವಿಶ್ವದ ಅತಿದೊಡ್ಡ ರಸ್ತೆ ಜಾಲಗಳಲ್ಲಿ ಒಂದನ್ನು ಹೊಂದಿದೆ. ಭವಿಷ್ಯದಲ್ಲಿ ರಸ್ತೆ ಸಂಪರ್ಕವನ್ನು ವೇಗಗೊಳಿಸುವುದರ ಜತೆಗೆ ಅದನ್ನು ಸುಸ್ಥಿರ, ಸಂಪನ್ಮೂಲ ದಕ್ಷ, ಪರಿಸರ ಸ್ನೇಹಿ ಮತ್ತು ಸುರಕ್ಷಿತವಾಗಿಸುವುದು ಅಗತ್ಯವಾಗಿದೆ ಎಂದು ಹೇಳಿದರು.

ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನ ಸಾಂಸ್ಥಿಕ ವ್ಯವಹಾರಗಳ ಮುಖ್ಯಸ್ಥ ಜಾನ್ ಪ್ರಸಾದ್ ಕಂದಂಪರಂಬಿಲ್ ಮಾತನಾಡಿ, ಮೂಲಸೌಕರ್ಯದಲ್ಲಿನ ಹೂಡಿಕೆಯು ದೀರ್ಘಕಾಲೀನ ಉದ್ಯಮ ಬೆಳವಣಿಗೆಗೆ ಪ್ರಮುಖ ಆಧಾರವಾಗಿದೆ ಎಂದರು. ರಸ್ತೆ ನಿರ್ಮಾಣವು ಕೇವಲ ಡಾಂಬರಿಗೆ ಸೀಮಿತವಾಗಿಲ್ಲ. ಜಲ್ಲಿ, ಇಂಧನ, ಡಾಂಬರು ಮತ್ತು ಸುಧಾರಿತ ನಿರ್ಮಾಣ ಸಾಮಗ್ರಿಗಳು ಸೇರಿದಂತೆ ಹಲವು ಕ್ಷೇತ್ರಗಳು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande