
ನವದೆಹಲಿ, 26 ಅಕ್ಟೋಬರ್ (ಹಿ.ಸ.):
ಕಾಂಗ್ರೆಸ್ನಲ್ಲಿ ರಾಹುಲ್ ಗಾಂಧಿ ಒಬ್ಬರೇ ಅಪ್ರಬುದ್ಧ ನಾಯಕರೆಂದು ಭಾವಿಸಿದ್ದೆವು. ಆದರೆ, ಅವರ ಸಹವಾಸದಿಂದಾಗಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಬಹುತೇಕ ಎಲ್ಲ ನಾಯಕರೂ ಅಪ್ರಬುದ್ಧರಾಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದ್ದಾರೆ.
ದೆಹಲಿಯಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಹತಾಶೆಯಿಂದ ಅಸಭ್ಯ ಹಾಗೂ ಕೀಳುಮಟ್ಟದ ಭಾಷೆ ಬಳಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ದಿವಂಗತ ತಂದೆ-ತಾಯಿಯವರನ್ನೂ ರಾಜಕೀಯ ಚರ್ಚೆಗೆ ಎಳೆದು ತರುತ್ತಿರುವುದು ಕಾಂಗ್ರೆಸ್ ನಾಯಕರ ರಾಜಕೀಯ ಅಪ್ರಬುದ್ಧತೆಯನ್ನು ತೋರಿಸುತ್ತದೆ ಎಂದು ಖಂಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಪೋಷಕರು ಅತ್ಯಂತ ಬಡ ಕುಟುಂಬದಿಂದ ಬಂದವರು. ಅವರು ಈಗ ನಮ್ಮ ನಡುವೆ ಇಲ್ಲದಿರುವಾಗ, ಅವರ ಹೆಸರು ಉಲ್ಲೇಖಿಸಿ ಸಲ್ಲದ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ ಅಪಕ್ವ ಮನೋಭಾವದಿಂದ ಮಾತನಾಡುತ್ತಿರುವುದು ವಿಷಾದನೀಯ ಎಂದರು.
ರಾಹುಲ್ ಗಾಂಧಿ ಅವರ ಪ್ರಭಾವದಿಂದ ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷರಿಂದ ಹಿಡಿದು ರಾಜ್ಯ ಮಟ್ಟದ ನಾಯಕರವರೆಗೂ ಕೆಳಮಟ್ಟದ ಭಾಷೆ ಬಳಕೆಯಾಗುತ್ತಿದೆ. ಇದು ಪಕ್ಷದ ಸಂಸ್ಕೃತಿ ಮತ್ತು ಹತಾಶ ಮನೋಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಟೀಕಿಸಿದರು.
ಹಿಂದೆ ಸೋನಿಯಾ ಗಾಂಧಿ ಅವರು ಅನುಸರಿಸುತ್ತಿದ್ದ ಇದೇ ರೀತಿಯ ವರ್ತನೆಯನ್ನು ಈಗ ರಾಹುಲ್ ಗಾಂಧಿ ಮುಂದುವರಿಸುತ್ತಿದ್ದಾರೆ. ಚುನಾವಣೆಗಳಲ್ಲಿ ಗೆಲ್ಲಬೇಕೆಂದರೆ ಕಾಂಗ್ರೆಸ್ ನಾಯಕರು ಮೊದಲು ಅಸಭ್ಯ ಮತ್ತು ಕೀಳುಮಟ್ಟದ ಭಾಷೆ ಬಳಕೆಯನ್ನು ನಿಲ್ಲಿಸಬೇಕು. ಇಂತಹ ಭಾಷೆ ಎಂದಿಗೂ ಚುನಾವಣೆಯಲ್ಲಿ ಯಶಸ್ಸು ತಂದುಕೊಡುವುದಿಲ್ಲ ಎಂಬುದನ್ನು ಅವರು ಅರಿತುಕೊಳ್ಳಬೇಕು ಎಂದು ಜೋಶಿ ಹೇಳಿದರು.
ದೇಶದಾದ್ಯಂತ ಕಾಂಗ್ರೆಸ್ ಈಗಾಗಲೇ ಹಿನ್ನಡೆ ಅನುಭವಿಸಿದೆ. ಇದೇ ರೀತಿಯ ವರ್ತನೆಯನ್ನು ಮುಂದುವರಿಸಿದರೆ ಜನರು ಪಕ್ಷವನ್ನು ಇನ್ನಷ್ಟು ಹೀನಾಯವಾಗಿ ಸೋಲಿಸಲಿದ್ದಾರೆ ಎಂದು ಎಚ್ಚರಿಸಿದರು.
ವಯಸ್ಸು ಮತ್ತು ಅನುಭವದಲ್ಲಿ ಹಿರಿಯರಾಗಿರುವ, ಕರ್ನಾಟಕದವರೂ ಆಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಈ ಮಟ್ಟಕ್ಕೆ ಇಳಿದಿರುವುದು ದುರದೃಷ್ಟಕರ ಮತ್ತು ತೀವ್ರ ವಿಷಾದನೀಯ ಎಂದು ಪ್ರಲ್ಹಾದ ಜೋಶಿ ಬೇಸರ ವ್ಯಕ್ತಪಡಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.