ರೈತರಿಗೆ ಘೋಷಿಸಿದ ₹2,500 ಪರಿಹಾರವೂ ತಲುಪಿಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ
ಬೆಂಗಳೂರು, 26 ಅಕ್ಟೋಬರ್ (ಹಿ.ಸ.): ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ಘೋಷಿಸಿದ ₹2,500 ಪರಿಹಾರದ ಹಣವನ್ನೂ ಇನ್ನೂ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿರುವ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್, ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ
ಅಶೋಕ ಸಂಗ್ರಹ ಚಿತ್ರ


ಬೆಂಗಳೂರು, 26 ಅಕ್ಟೋಬರ್ (ಹಿ.ಸ.):

ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ಘೋಷಿಸಿದ ₹2,500 ಪರಿಹಾರದ ಹಣವನ್ನೂ ಇನ್ನೂ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿರುವ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್, ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹೇಳಿಕೆ ನೀಡಿರುವ ಅವರು, ವಿಶೇಷ ಅಧಿವೇಶನ ಕರೆದು ರೈತರಿಗೆ ಕೇವಲ ₹2,500 ಪರಿಹಾರ ಘೋಷಿಸಿ ಅವಮಾನ ಮಾಡಲಾಗಿದೆ. ಅಧಿವೇಶನ ಮುಗಿದು ತಿಂಗಳು ಕಳೆದರೂ ಆ ಹಣ ರೈತರ ಖಾತೆಗಳಿಗೆ ತಲುಪಿಲ್ಲ ಎಂದು ಆರೋಪಿಸಿದ್ದಾರೆ.

ಈ ವಿಚಾರವನ್ನು ಪ್ರತಿಪಕ್ಷಗಳು ಮಾತ್ರ ಪ್ರಸ್ತಾಪಿಸುತ್ತಿಲ್ಲ. ಸ್ವತಃ ಸರ್ಕಾರದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರೇ ಆರ್ಥಿಕ ಇಲಾಖೆ ಮತ್ತು ಸರ್ಕಾರದ ಕಾರ್ಯವೈಖರಿ ಬಗ್ಗೆ ಬೇಸರ ಹಾಗೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಅಶೋಕ್ ಹೇಳಿದ್ದಾರೆ.

ವಿಧಾನಮಂಡಲದಲ್ಲಿ 224 ಚುನಾಯಿತ ಜನಪ್ರತಿನಿಧಿಗಳ ಎದುರು ಘೋಷಿಸಿದ ಹಣವನ್ನೂ ಬಿಡುಗಡೆ ಮಾಡಲು ಸಾಧ್ಯವಾಗದ ಸರ್ಕಾರ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಹೊಂದಿದೆಯೇ ಎಂದು ಪ್ರಶ್ನಿಸಿದ್ದಾರೆ.

ಒಂದೆಡೆ ರೈತರಿಗೆ ಘೋಷಿಸಿದ ಪರಿಹಾರ ನೀಡದೆ ವಂಚಿಸಲಾಗುತ್ತಿದೆ. ಮತ್ತೊಂದೆಡೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಗೆ ರಾಜ್ಯ ಸರ್ಕಾರ ಪಾವತಿಸಬೇಕಾದ ಪಾಲಿನ ವಿಮಾ ಕಂತಿನ ಹಣವನ್ನೂ ಪಾವತಿಸದೆ, ರೈತರಿಗೆ ವಿಮಾ ಪರಿಹಾರ ಸಿಗದಂತೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಸ್ವತಃ ಉಪಮುಖ್ಯಮಂತ್ರಿಗಳು ಮತ್ತು ಸಚಿವರಿಗೇ ನಂಬಿಕೆ ಉಳಿದಿಲ್ಲದಿದ್ದರೆ, ಜನಸಾಮಾನ್ಯರು ಸರ್ಕಾರವನ್ನು ಹೇಗೆ ನಂಬಬೇಕು ಎಂದು ಅಶೋಕ್ ಪ್ರಶ್ನಿಸಿದ್ದಾರೆ.

ಘೋಷಣೆ ಮಾಡುವಾಗ ಪ್ರಚಾರ ಪಡೆಯುವುದು, ಅನುಷ್ಠಾನದ ಸಂದರ್ಭದಲ್ಲಿ ಖಜಾನೆ ಖಾಲಿಯಾಗಿದೆ ಎಂದು ಕೈಚೆಲ್ಲುವುದು ರೈತಪರ ಆಡಳಿತವೇ ಎಂದು ಟೀಕಿಸಿರುವ ಅವರು, ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ಕೂಡಲೇ ಪರಿಹಾರದ ಹಣ ಹಾಗೂ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ರಾಜ್ಯ ಸರ್ಕಾರದ ಪಾಲಿನ ವಿಮಾ ಕಂತನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ರೈತರ ಆಕ್ರೋಶಕ್ಕೆ ಕಾಂಗ್ರೆಸ್ ಸರ್ಕಾರ ತುತ್ತಾಗಲಿದೆ ಎಂದು ಎಚ್ಚರಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande