
ನವದೆಹಲಿ, 26 ಅಕ್ಟೋಬರ್ (ಹಿ.ಸ.):
ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ‘ಅರ್ನಬ್’ ಚಂಡಮಾರುತವು ಅ. 28ರಂದು ಅತ್ಯಂತ ತೀವ್ರ ಚಂಡಮಾರುತವಾಗಿ ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸೋಮವಾರ ಚಂಡಮಾರುತ ಎದುರಿಸಲು ಕೈಗೊಂಡಿರುವ ಸಿದ್ಧತೆಗಳನ್ನು ಪರಿಶೀಲಿಸಿದ್ದು, ಜೀವಹಾನಿ ಮತ್ತು ಆಸ್ತಿಪಾಸ್ತಿ ನಷ್ಟವನ್ನು ಕನಿಷ್ಠ ಮಟ್ಟಕ್ಕೆ ತಗ್ಗಿಸುವಂತೆ ಪೀಡಿತ ರಾಜ್ಯಗಳಿಗೆ ಸೂಚನೆ ನೀಡಿದೆ.
ಕೇಂದ್ರ ಸಚಿವ ಸಂಪುಟದ ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿ ಸಭೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಿದ್ಧತೆಗಳನ್ನು ಪರಿಶೀಲಿಸಲಾಯಿತು. ಯಾವುದೇ ಜೀವಹಾನಿ ಸಂಭವಿಸದಂತೆ ನೋಡಿಕೊಳ್ಳುವುದು ಮೊದಲ ಆದ್ಯತೆಯಾಗಬೇಕು. ಆಸ್ತಿಪಾಸ್ತಿ ಹಾಗೂ ಮೂಲಸೌಕರ್ಯಗಳಿಗೆ ಉಂಟಾಗುವ ಹಾನಿಯನ್ನು ಕಡಿಮೆಗೊಳಿಸಬೇಕು. ಹಾನಿ ಸಂಭವಿಸಿದಲ್ಲಿ ಅಗತ್ಯ ಸೇವೆಗಳನ್ನು ಸಾಧ್ಯವಾದಷ್ಟು ಬೇಗ ಪುನಃ ಆರಂಭಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಯಿತು.
ಭಾರತೀಯ ಹವಾಮಾನ ಇಲಾಖೆ ಮಹಾನಿರ್ದೇಶಕರು ಸಭೆಯಲ್ಲಿ ಮಾಹಿತಿ ನೀಡಿ, ಬಂಗಾಳ ಕೊಲ್ಲಿಯ ಪೂರ್ವ-ಮಧ್ಯ ಮತ್ತು ಅದಕ್ಕೆ ಹೊಂದಿಕೊಂಡ ಆಗ್ನೇಯ ಭಾಗದಲ್ಲಿ ರೂಪುಗೊಂಡಿದ್ದ ತೀವ್ರ ವಾಯುಭಾರ ಕುಸಿತವು ಪಶ್ಚಿಮದತ್ತ ಚಲಿಸಿ ‘ಅರ್ನಬ್’ ಚಂಡಮಾರುತವಾಗಿ ಬದಲಾಗಿದೆ ಎಂದು ತಿಳಿಸಿದರು. ಸೋಮವಾರ ಬೆಳಿಗ್ಗೆ 5.30ರ ವೇಳೆಗೆ ಚಂಡಮಾರುತವು ಬಂಗಾಳ ಕೊಲ್ಲಿಯ ಪೂರ್ವ-ಮಧ್ಯ ಮತ್ತು ಅದಕ್ಕೆ ಹೊಂದಿಕೊಂಡ ಪಶ್ಚಿಮ-ಮಧ್ಯ ಭಾಗದಲ್ಲಿ ಕೇಂದ್ರೀಕೃತವಾಗಿತ್ತು.
ಅಂಡಮಾನ್ ದ್ವೀಪಸಮೂಹದ ಶ್ರೀ ವಿಜಯಪುರಂನಿಂದ ಸುಮಾರು 590 ಕಿ.ಮೀ. ವಾಯವ್ಯಕ್ಕೆ, ವಿಶಾಖಪಟ್ಟಣದಿಂದ 650 ಕಿ.ಮೀ. ಪೂರ್ವ-ಆಗ್ನೇಯಕ್ಕೆ, ಕಾಕಿನಾಡದಿಂದ 730 ಕಿ.ಮೀ. ಪೂರ್ವ-ಆಗ್ನೇಯಕ್ಕೆ, ಮಚಲಿಪಟ್ಟಣದಿಂದ 830 ಕಿ.ಮೀ. ಪೂರ್ವಕ್ಕೆ ಹಾಗೂ ಬಾಪಟ್ಲಾದಿಂದ 910 ಕಿ.ಮೀ. ಪೂರ್ವಕ್ಕೆ ಚಂಡಮಾರುತವಿತ್ತು.
ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಚಂಡಮಾರುತವು ಅ. 27ರವರೆಗೆ ಪಶ್ಚಿಮ-ವಾಯವ್ಯ ದಿಕ್ಕಿನಲ್ಲಿ ಚಲಿಸಲಿದೆ. ಬಳಿಕ ಉತ್ತರ-ವಾಯವ್ಯ ದಿಕ್ಕಿನಲ್ಲಿ ಆಂಧ್ರಪ್ರದೇಶದ ಕರಾವಳಿಯತ್ತ ಸಾಗುವ ಸಾಧ್ಯತೆಯಿದೆ. ಅ. 28ರ ಬೆಳಿಗ್ಗೆ ಬಾಪಟ್ಲಾ ಮತ್ತು ವಿಶಾಖಪಟ್ಟಣದ ನಡುವಿನ ಆಂಧ್ರಪ್ರದೇಶ ಹಾಗೂ ಯಾನಂ ಕರಾವಳಿಯನ್ನು ಅತ್ಯಂತ ತೀವ್ರ ಚಂಡಮಾರುತವಾಗಿ ದಾಟುವ ನಿರೀಕ್ಷೆಯಿದೆ. ಈ ವೇಳೆ ಗಾಳಿಯ ನಿರಂತರ ವೇಗ ಗಂಟೆಗೆ 115ರಿಂದ 125 ಕಿ.ಮೀ. ಇರಲಿದ್ದು, ಗಾಳಿಯ ಬಿರುಸಿನ ವೇಗ ಗಂಟೆಗೆ 140 ಕಿ.ಮೀ. ತಲುಪುವ ಸಾಧ್ಯತೆಯಿದೆ.
ಹಲವು ರಾಜ್ಯಗಳಲ್ಲಿ ಭಾರಿ ಮಳೆ ಸಾಧ್ಯತೆ
ಚಂಡಮಾರುತದ ಪರಿಣಾಮ ಆಂಧ್ರಪ್ರದೇಶ ಮಾತ್ರವಲ್ಲದೆ ತೆಲಂಗಾಣ, ದಕ್ಷಿಣ ಒಡಿಶಾ, ದಕ್ಷಿಣ ಮತ್ತು ಮಧ್ಯ ಛತ್ತೀಸ್ಗಢ, ಪೂರ್ವ ಉತ್ತರಪ್ರದೇಶ ಹಾಗೂ ಬಿಹಾರದ ಕೆಲವು ಭಾಗಗಳಲ್ಲಿಯೂ ಕಂಡುಬರುವ ಸಾಧ್ಯತೆಯಿದೆ. ಈ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಪೂರ್ವ ಉತ್ತರಪ್ರದೇಶ ಮತ್ತು ಬಿಹಾರದ ಆಡಳಿತ ವ್ಯವಸ್ಥೆಗಳಿಗೂ ಸೂಕ್ತ ಮುನ್ನೆಚ್ಚರಿಕೆ ನೀಡುವಂತೆ ಕೇಂದ್ರ ಸಂಪುಟದ ಕಾರ್ಯದರ್ಶಿ ಗೃಹ ಸಚಿವಾಲಯ ಮತ್ತು ಹವಾಮಾನ ಇಲಾಖೆಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಆಂಧ್ರಪ್ರದೇಶ, ಒಡಿಶಾ, ತೆಲಂಗಾಣ, ಛತ್ತೀಸ್ಗಢ ಹಾಗೂ ಪುದುಚೇರಿ ಕೇಂದ್ರಾಡಳಿತ ಪ್ರದೇಶದ ಮುಖ್ಯ ಕಾರ್ಯದರ್ಶಿಗಳು ಮತ್ತು ಹಿರಿಯ ಅಧಿಕಾರಿಗಳು ಸಿದ್ಧತೆಗಳ ಕುರಿತು ಮಾಹಿತಿ ನೀಡಿದರು. ಅಗತ್ಯ ಪರಿಹಾರ ಶಿಬಿರಗಳು ಹಾಗೂ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ವ್ಯವಸ್ಥೆ ಮಾಡಲಾಗಿದೆ. ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆಗಳ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಜಿಲ್ಲೆಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ಸಕ್ರಿಯಗೊಳಿಸಲಾಗಿದ್ದು, ಪರಿಸ್ಥಿತಿಯ ಮೇಲೆ ನಿರಂತರ ನಿಗಾ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ
ಅ. 26ರಿಂದ 29ರವರೆಗೆ ನೈಋತ್ಯ ಮತ್ತು ಅದಕ್ಕೆ ಹೊಂದಿಕೊಂಡ ಮಧ್ಯ ಬಂಗಾಳ ಕೊಲ್ಲಿ ಹಾಗೂ ಆಂಧ್ರಪ್ರದೇಶ, ಒಡಿಶಾ ಮತ್ತು ಯಾನಂ ಕರಾವಳಿಯ ಸಮೀಪ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸಲಹೆ ನೀಡಲಾಗಿದೆ. ಸಮುದ್ರದಲ್ಲಿದ್ದ ಮೀನುಗಾರರು ಈಗಾಗಲೇ ಮರಳಿದ್ದಾರೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ ತನ್ನ ತಂಡಗಳನ್ನು ನಿಯೋಜಿಸಿದ್ದು, ಹೆಚ್ಚುವರಿ ತಂಡಗಳನ್ನೂ ಸಿದ್ಧವಾಗಿರಿಸಿದೆ. ಯಾವುದೇ ತುರ್ತು ಪರಿಸ್ಥಿತಿ ಎದುರಾದರೆ ರಕ್ಷಣಾ ಕಾರ್ಯಾಚರಣೆ ನಡೆಸಲು ಸೇನೆ, ನೌಕಾಪಡೆ, ವಾಯುಪಡೆ ಮತ್ತು ಭಾರತೀಯ ಕರಾವಳಿ ಕಾವಲು ಪಡೆ ಹಡಗುಗಳು ಹಾಗೂ ವಿಮಾನಗಳೊಂದಿಗೆ ಸನ್ನದ್ಧವಾಗಿವೆ.
ಭಾರತೀಯ ಕರಾವಳಿ ಕಾವಲು ಪಡೆ ಹಲವು ಹಡಗುಗಳು ಮತ್ತು ದೋಣಿಗಳನ್ನು ಸುರಕ್ಷಿತವಾಗಿ ಬಂದರು ಹಾಗೂ ಕರಾವಳಿಗೆ ತಲುಪಿಸಿದೆ. ಉಳಿದ ಹಡಗುಗಳಿಗೂ ಕರಾವಳಿಗೆ ಮರಳುವಂತೆ ಎಚ್ಚರಿಕೆ ನೀಡಲಾಗಿದೆ.
ಕೇಂದ್ರ ಗೃಹ ಕಾರ್ಯದರ್ಶಿ ಮಾತನಾಡಿ, ಗೃಹ ಸಚಿವಾಲಯ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಹವಾಮಾನ ಇಲಾಖೆ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿವೆ. ಸಂಬಂಧಿತ ಕೇಂದ್ರ ಸಚಿವಾಲಯಗಳು, ರಾಜ್ಯ ಸರ್ಕಾರಗಳು ಮತ್ತು ಇತರ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಲಾಗುತ್ತಿದೆ ಎಂದು ತಿಳಿಸಿದರು.
ಚಂಡಮಾರುತದಿಂದ ಸಂಭವಿಸಬಹುದಾದ ಹಾನಿಯನ್ನು ತಗ್ಗಿಸಲು ಪ್ರಮಾಣಿತ ಕಾರ್ಯಾಚರಣಾ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಅಗತ್ಯ ಮಾರ್ಗಸೂಚಿಗಳನ್ನು ಹೊರಡಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಭೆಯಲ್ಲಿ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳ ಅಧಿಕಾರಿಗಳು ಮಾಹಿತಿ ನೀಡಿದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.