
ಹುಬ್ಬಳ್ಳಿ, 25 ಅಕ್ಟೋಬರ್ (ಹಿ.ಸ.):
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವಿಜಯದಶಮಿ ನಿಮಿತ್ತ ಭಾನುವಾರ ಸಂಜೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೃಹತ್ ಪಥ ಸಂಚಲನ ನಡೆಯಿತು. ಸಹಸ್ರ ಸಹಸ್ರ ಸ್ವಯಂ ಸೇವಕರೊಂದಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೂ ಭಾಗಿಯಾದರು.
ಪಥ ಸಂಚಲನದಲ್ಲಿ 10 ಸಾವಿರಕ್ಕೂ ಹೆಚ್ಚು ಸ್ವಯಂಸೇವಕರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಕರದಲ್ಲಿ ದಂಡ ಹಿಡಿದು ಶಿಸ್ತುಬದ್ಧವಾಗಿ ಸಾಗಿದ ಸ್ವಯಂಸೇವಕರು ಪ್ರಮುಖ ರಸ್ತೆಗಳಲ್ಲಿ ಆಕರ್ಷಕ ಪಥ ಸಂಚಲನ ನಡೆಸಿದರು.
ಆರ್ಎಸ್ಎಸ್ನ ಪ್ರಮುಖ ವಾರ್ಷಿಕ ಕಾರ್ಯಕ್ರಮಗಳಲ್ಲಿ ವಿಜಯದಶಮಿ ಉತ್ಸವವೂ ಒಂದಾಗಿದ್ದು, ಹುಬ್ಬಳ್ಳಿಯಲ್ಲಿ ಸಹಸ್ರಾರು ಸ್ವಯಂಸೇವಕರು ಭಾನುವಾರ ಸಂಜೆ ನೆಹರು ಮೈದಾನದಲ್ಲಿ ಸೇರಿ ಅಲ್ಲಿಂದಲೇ ಆಕರ್ಷಕ ಪಥ ಸಂಚಲನ ಆರಂಭಿಸಿದರು.
ಸಂಘದ ಶಿಸ್ತು, ಸಂಘಟನೆ ಹಾಗೂ ಸಾಮೂಹಿಕ ಕಾರ್ಯಚಟುವಟಿಕೆ ಪ್ರತಿಬಿಂಬಿಸುವ ರೀತಿಯಲ್ಲಿ ಸ್ವಯಂಸೇವಕರು ಶಾಂತಿ -ಸೌಹಾರ್ದದ ಪ್ರತೀಕವಾಗಿ ಪಥ ಸಂಚಲನ ನಡೆಸಿದ್ದು ವಿಶೇಷವಾಗಿತ್ತು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಆರೆಸ್ಸೆಸ್ ಪಥ ಸಂಚಲನದಲ್ಲಿ ಭಾಗವಹಿಸಿದ್ದು ಪ್ರಮುಖ ಆಕರ್ಷಣೆಯಾಗಿತ್ತು. ಸಚಿವರೊಂದಿಗೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಸೇರಿದಂತೆ ಪ್ರಮುಖ ಅನೇಕರೂ ಉಪಸ್ಥಿತರಿದ್ದರು.
ಬಿಗಿ ಪೊಲೀಸ್ ಬಂದೋಬಸ್ತ್: ಪಥಸಂಚಲನದಲ್ಲಿ ಬೃಹತ್ ಸಂಖ್ಯೆಯಲ್ಲಿ ಸ್ವಯಂಸೇವಕರು ಪಾಲ್ಗೊಂಡ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಪಥ ಸಂಚಲನ ಸಾಗುವ ಪ್ರಮುಖ ರಸ್ತೆಗಳಲ್ಲಿ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.