
ಕೋಲಾರ, ೨೫ ಅಕ್ಟೋಬರ್ (ಹಿ.ಸ) : ಹಾಸ್ಯ ಸಾಹಿತ್ಯ ಸಮಾಜದ ವಿಮರ್ಶಕನಾಗಬೇಕು. ಈ ಮೂಲಕ ದೊಡ್ಡವರ ಸಣ್ಣತನ ಹಾಗೂ ಜಾಣರ ದಡ್ಡತನ' ಪರಿಶುದ್ಧ ಪರಿಶುದ್ಧರೆನ್ನುವವರಲ್ಲಿನ ಕೊಳೆ ಇತ್ಯಾದಿಗಳ ಕುರಿತು ಎತ್ತಿ ಹೇಳಬೇಕು ಆಗಷ್ಟೇ ಆತನ ಸಾಹಿತ್ಯ ಜೀವಂತವಾಗುತ್ತದೆ ಎನ್ನುವ ಮಹಾ ಮಾನವತಾವಾದಿ, ಬೀಚಿಯವರ ಹಾಸ್ಯ ಸಾಹಿತ್ಯದ ಹಿಂದೆ ದೊಡ್ಡ ತತ್ವವಿದೆ ಮೌಢ್ಯ ವಿರೋಧಿ ಚಿಂತನೆ ಇದೆ ಎಂದು ಡಯಟ್ ನ ಉಪನ್ಯಾಸಕ ಡಾಕ್ಟರ್ ಎನ್ ನಾರಾಯಣಸ್ವಾಮಿ ನುಡಿದರು.
ಕೋಲಾರದಲ್ಲಿ ಜರುಗಿದ ಓದುಗ-ಕೇಳುಗ ನಮ್ಮ ಬಳಗದ ೬೬ನೇ ತಿಂಗಳು ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಬೀಚಿಯವರ ಆತ್ಮಚರಿತ್ರೆ 'ನನ್ನ ಬಯಾಗ್ರಫಿ' ಕುರಿತು ಮಾತನಾಡಿದರು.
ಗಾಂಧೀಜಿಯವರ ಬರಹಗಳಿಂದ ಪ್ರೇರಿತರಾಗಿ ತಮ್ಮ ಆತ್ಮ ಚರಿತ್ರೆ ಬರೆಯಲು ಮುಂದಾದ ಬೀಚಿಯವರ ಹಾಸ್ಯದ ಹಿನ್ನೆಲೆಯಲ್ಲಿ ಸಾಮಾಜಿಕ ಮೌಢ್ಯತೆ, ಶಿಕ್ಷಣದ ಅವ್ಯವಸ್ಥೆ, ಮಹಿಳಾ ಸಂವೇದನೆ, ಸ್ತ್ರೀ ಸ್ವಾತಂತ್ರ್ಯ, ವಿಧವಾ ಸಮಸ್ಯೆ, ಕಂದಾಚಾರಗಳ ಕುರಿತ ಅರ್ಥಪೂರ್ಣ ವಿಶ್ಲೇಷಣೆ ಎದ್ದು ಕಾಣುತ್ತದೆ.ಕೃತಿಯನ್ನು ಓದುವ ಮುನ್ನ ಓದುಗರನ್ನು ಮಾನಸಿಕವಾಗಿ ಸಿದ್ಧಪಡಿಸುವ ಬೀಚಿ ತಮ್ಮ ಜೀವನವನ್ನೇ ಜೀವಿಸಿದ ಅಪರೂಪದ ವ್ಯಕ್ತಿ. ಹಾಗು ಸಾಮಾಜಿಕ ಬದಲಾವಣೆಯನ್ನು ಬರಹಗಳ ಮೂಲಕ ಬಯಸಿದ ಹರಿಕಾರ ಎಂದು ಡಾಕ್ಟರ್ ನಾರಾಯಣಸ್ವಾಮಿ ವಿಶ್ಲೇಷಿಸಿದರು.
ಅಧ್ಯಕ್ಷತೆ ವಹಿಸಿದ್ದ ಚಿನ್ಮಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಆರ್. ಸಿ . ಮಂಜುನಾಥ ಅವರು ಮಾತನಾಡಿ ಬೀಚಿಯವರ ಹಾಸ್ಯದ ಹಿಂದೆ ಬದುಕಿನ ದುಃಖದ ನೆರಳಿದೆ. ಇವರ ಬದುಕು ಮತ್ತು ಬರಹ ಒಂದೇ ಆಗಿದ್ದವು. ಸಾಮಾಜಿಕ ವಿಡಂಬನೆ ಮೂಲಕ ಸಮಾಜದ ಕಣ್ತೆರೆಸುವ ಇವರ ಜೀವನವೇ ಒಂದು ತೆರೆದ ಪುಸ್ತಕ ಎಂದು ಬಣ್ಣಿಸಿದರು.
ಶ್ರೀಮತಿ ಮಂಜುಳಾ ಕೊಂಡರಾಜನಹಳ್ಳಿ ಅವರ ಗೀತೆಯ ನಂತರ ನಡೆದ ಚರ್ಚೆಯಲ್ಲಿ ನಿವೃತ್ತ ಪ್ರಾಧ್ಯಾಪಕ ಪ್ರೊ.ಮುನಿರತ್ನಪ್ಪ, ಡಾ. ಸಿ. ಆರ್. ರಮೇಶ್, ಲೇಖಕ ಎಚ್. ಎ. ಪುರುಷೋತ್ತಮ ರಾವ್ ಆದಿಮದ ಹ.ಮಾ.ರಾಮಚಂದ್ರ ರವರು ಪಾಲ್ಗೊಂಡರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್