ಜನಸಾಮಾನ್ಯರ ಸಾಧನೆಗಳನ್ನು ದೇಶಕ್ಕೆ ಪರಿಚಯಿಸುವ ವೇದಿಕೆ ‘ಮನ್ ಕೀ ಬಾತ್’:ಪ್ರಹ್ಲಾದ ಜೋಶಿ
ಹುಬ್ಬಳ್ಳಿ, 25 ಅಕ್ಟೋಬರ್ (ಹಿ.ಸ.): ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಪ್ರತೀಕವಾಗಿರುವ ‘ಮನ್‌ ಕೀ ಬಾತ್‌’ ಕಾರ್ಯಕ್ರಮವು ಜನಸಾಮಾನ್ಯರ ಸಾಧನೆಗಳನ್ನು ದೇಶದ ಜನರಿಗೆ ಪರಿಚಯಿಸುವ ಅಪೂರ್ವ ವೇದಿಕೆಯಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ಅಭಿಪ್ರಾಯಪಟ್ಟರು. ಹುಬ್ಬಳ್ಳಿಯ ಓಲೆ ಮಠ
ಮನ್ ಕೀ ಬಾತ್’ ಕಾರ್ಯಕ್ರಮವನ್ನು ಆಲಿಸಿದ ಜೋಶಿ


ಹುಬ್ಬಳ್ಳಿ, 25 ಅಕ್ಟೋಬರ್ (ಹಿ.ಸ.):

ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಪ್ರತೀಕವಾಗಿರುವ ‘ಮನ್‌ ಕೀ ಬಾತ್‌’ ಕಾರ್ಯಕ್ರಮವು ಜನಸಾಮಾನ್ಯರ ಸಾಧನೆಗಳನ್ನು ದೇಶದ ಜನರಿಗೆ ಪರಿಚಯಿಸುವ ಅಪೂರ್ವ ವೇದಿಕೆಯಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ಅಭಿಪ್ರಾಯಪಟ್ಟರು.

ಹುಬ್ಬಳ್ಳಿಯ ಓಲೆ ಮಠದ ಜಗದ್ಗುರು ಗುರುಸಿದ್ಧಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಪ್ರಧಾನಿ ಅವರ 139ನೇ ಆವೃತ್ತಿಯ ‘ಮನ್‌ ಕೀ ಬಾತ್‌’ ಕಾರ್ಯಕ್ರಮವನ್ನು ಆಲಿಸಿದ ಬಳಿಕ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಶಿಷ್ಟ ಕಾರ್ಯಕ್ರಮವನ್ನು ದೇಶದ ಮೂಲೆಮೂಲೆಗೂ ತಲುಪಿಸಿದ್ದಾರೆ. ಸಾಮಾನ್ಯ ನಾಗರಿಕರ ಸಾಧನೆಗಳು, ಪ್ರಗತಿಪರ ರೈತರ ಯಶಸ್ಸು, ಯುವಜನರ ನವೀನ ಆಲೋಚನೆಗಳು ಹಾಗೂ ಮಹಿಳೆಯರ ಸ್ವಾವಲಂಬನೆಯ ಪ್ರಯತ್ನಗಳನ್ನು ದೇಶದ ಜನರಿಗೆ ಪರಿಚಯಿಸುತ್ತಿದ್ದಾರೆ ಎಂದು ಹೇಳಿದರು.

ಪರಿಸರ ಸಂರಕ್ಷಣೆ, ಸ್ವದೇಶಿ ಉತ್ಪನ್ನಗಳ ಬಳಕೆ, ಕ್ರೀಡೆ ಮತ್ತು ಸಮಾಜಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಜನರು ತೋರುತ್ತಿರುವ ಸೇವಾ ಮನೋಭಾವ, ಸೃಜನಶೀಲತೆ ಹಾಗೂ ಸಾಧನೆಗಳನ್ನು ಇಡೀ ದೇಶದ ಮುಂದೆ ತೆರೆದಿಡುವ ಅಪೂರ್ವ ವೇದಿಕೆಯಾಗಿ ‘ಮನ್‌ ಕೀ ಬಾತ್‌’ ರೂಪುಗೊಂಡಿದೆ ಎಂದು ತಿಳಿಸಿದರು.

ಕರ್ನಾಟಕದ ಹಿರಿಮೆ ಹೆಚ್ಚಿಸಿದ ಕಾರ್ಯಕ್ರಮ

‘ಮನ್‌ ಕೀ ಬಾತ್‌’ ಕಾರ್ಯಕ್ರಮವು ಕರ್ನಾಟಕದ ಹಿರಿಮೆಯನ್ನೂ ದೇಶದಾದ್ಯಂತ ಪರಿಚಯಿಸಿದೆ ಎಂದು ಪ್ರಲ್ಹಾದ ಜೋಶಿ ಹೇಳಿದರು.

ಕಲಬುರಗಿಯ ಪ್ರಸಿದ್ಧ ತೊಗರಿ ಬೇಳೆ ಮಾಲ್ದೀವ್ಸ್‌ಗೆ ರಫ್ತಾಗುತ್ತಿರುವ ವಿಚಾರವನ್ನು ಪ್ರಧಾನಿ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿರುವುದು, ಭಾರತೀಯ ರೈತರಿಗೆ ಜಾಗತಿಕ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಹೊಸ ಅವಕಾಶಗಳಿಗೆ ಉತ್ತಮ ಉದಾಹರಣೆಯಾಗಿದೆ ಎಂದು ತಿಳಿಸಿದರು.

ಅದೇ ರೀತಿ, ಕರ್ನಾಟಕದ ಬಿದಿರು ಆಧಾರಿತ ನವೋದ್ಯಮ ಸಂಸ್ಥೆಯೊಂದು ಬಿದಿರು ಮತ್ತು ಕೃಷಿ ತ್ಯಾಜ್ಯಗಳಿಂದ ಪರಿಸರಸ್ನೇಹಿ ಪ್ಯಾಕೇಜಿಂಗ್ ಸಾಮಗ್ರಿಗಳನ್ನು ತಯಾರಿಸುತ್ತಿರುವ ನಾವೀನ್ಯತೆಯನ್ನು ಪ್ರಧಾನಿ ಶ್ಲಾಘಿಸಿದ್ದಾರೆ. ಇದು ರಾಜ್ಯದ ಹೆಮ್ಮೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಪ್ರೇರಣಾದಾಯಕ ಮಾತುಗಳು ಪ್ರತಿಯೊಬ್ಬರಲ್ಲೂ ರಾಷ್ಟ್ರ ನಿರ್ಮಾಣದ ಜವಾಬ್ದಾರಿಯನ್ನು ಮೂಡಿಸುವುದರ ಜತೆಗೆ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವ ಸಂಕಲ್ಪಕ್ಕೆ ದಾರಿದೀಪವಾಗಿವೆ ಎಂದು ಪ್ರಲ್ಹಾದ ಜೋಶಿ ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಲಿಂಗರಾಜ ಪಾಟೀಲ, ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವು ಮೆಣಸಿನಕಾಯಿ, ಪ್ರಭು ನವಲಗುಂದಮಠ, ಜಯತೀರ್ಥ ಕಟ್ಟಿ ಸೇರಿದಂತೆ ಹಲವು ಗಣ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande