
ಕೋಲಾರ, ೨೫ ಅಕ್ಟೋಬರ್ (ಹಿ.ಸ): ಕೈವಾರ ಶ್ರೀ ಯೋಗಿ ನಾರೇಯಣ ಮಠದ ವತಿಯಿಂದ ಒಂದು ವರ್ಷಗಳ ಕಾಲ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯಾದ್ಯಾಂತ ಹಮ್ಮಿಕೊಳ್ಳಲಾಗಿರುವ ಕೈವಾರ ತಾತಯ್ಯನವರ ೩೦೦ನೇ ವರ್ಷದ ಜಯಂತಿಯ ಅಂಗವಾಗಿ ಶ್ರೀರಾಮದಂಡು ಸಂಕೀರ್ತನಾ ಪಾದಯಾತ್ರೆಯನ್ನು ಮುಳಬಾಗಿಲು ತಾಲೂಕಿನ ಮುಡಿಯನೂರು ಶ್ರಿಸೋಮೇಶ್ವರಸ್ವಾಮಿ ದೇವಾಲಯದಿಂದ ಪುರಾಣಪ್ರಸಿದ್ಧ ಕುರುಡುಮಲೆ ಶ್ರೀಮಹಾಗಣಪತಿ ದೇವಾಲಯದವರೆಗೆ ಕೈವಾರ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ.ಎಂ.ಆರ್.ಜಯರಾಮ್ ರವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಬೆಳಿಗ್ಗೆ ೬ ಗಂಟೆಗೆ ಮುಡಿಯನೂರು ಶ್ರೀಸೋಮೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪಾದಯಾತ್ರೆ ಆರಂಭಿಸಲಾಯಿತು. ಸಾವಿರಾರು ಭಕ್ತರು ನಾರೇಯಣ ಧ್ವಜವನ್ನು ಹಿಡಿದು ಭಜನೆಯನ್ನು ಮಾಡುತ್ತಾ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ನಂತರ ಜೆ.ವಮ್ಮಸಂದ್ರ ಕ್ರಾಸ್, ಗುಜ್ಜನಹಳ್ಳಿ, ನಿಜ್ಜನಕುಂಟೆ ಕ್ರಾಸ್, ಕೆ.ಹೊಸಹಳ್ಳಿ, ಕೊಲದೇವಿ ಗರುಡ ದೇವಸ್ಥಾನ, ಮಂಡಿಕಲ್, ದುಗ್ಗಸಂದ್ರ, ಮಾರ್ಗವಾಗಿ ಪುರಾಣಪ್ರಸಿದ್ಧ ಕುರುಡುಮಲೆ ಶ್ರೀಮಹಾಗಣಪತಿ ದೇವಾಲಯದಲ್ಲಿ ಪಾದಯಾತ್ರೆಯ ಮುಕ್ತಾಯದ ಸಂಕೀರ್ತನೆಯನ್ನು ಸಮರ್ಪಣೆ ಮಾಡಲಾಯಿತು.
ಶ್ರೀರಾಮದಂಡು ಪಾದಯಾತ್ರೆಗೆ ಗ್ರಾಮ ಗ್ರಾಮಗಳೇ ಸಿಂಗರಿಸಿಕೊ0ಡಿದ್ದವು. ಗ್ರಾಮಸ್ಥರು ದಾರಿಯುದ್ದಕ್ಕೂ ರಸ್ತೆಗಳಲ್ಲಿ ತಳಿರು ತೋರಣಗಳನ್ನು ಕಟ್ಟಿದ್ದರು. ರಸ್ತೆಗಳನ್ನು ಸ್ವಚ್ಛಗೊಳಿಸಿದ್ದರು. ರಸ್ತೆಗಳನ್ನು ರಂಗೋಲಿಗಳಿ0ದ ಅಲಂಕರಿಸಿದ್ದರು. ಗ್ರಾಮಗಳಲ್ಲಿ ಭಕ್ತರು ಶ್ರೀರಾಮರ ಹಾಗೂ ಕೈವಾರ ತಾತಯ್ಯನವರ ಭಾವಚಿತ್ರಕ್ಕೆ ವಿಶೇಷಪೂಜೆಗಳನ್ನು ಸಲ್ಲಿಸಿ ಆರತಿಯನ್ನು ಬೆಳಗಿದರು. ಪ್ರತಿಹಳ್ಳಿಯಲ್ಲಿಯೂ ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ಪಾದಯಾತ್ರಿಗಳಿಗೆ ನೀರು, ಹಾಲು, ಮಜ್ಜಿಗೆ, ಪಾನಕ, ಕೋಸಂಬರಿಗಳನ್ನು ವಿತರಿಸಿ ಸತ್ಕರಿಸಿದರು. ಪ್ರತಿಗ್ರಾಮದ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸಲಾಯಿತು. ಕೊಲದೇವಿ ಹಾಗೂ ಕುರುಡುಮಲೆಯಲ್ಲಿ ಭಕ್ತಾದಿಗಳಿಗೆ ತಿಂಡಿ ಹಾಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಈ ಪಾದಯಾತ್ರೆಯ ಭಜನೆ ಸಂಕೀರ್ತನೆಯ ಉಸ್ತುವಾರಿಯನ್ನು ಶ್ರೀ ಯೋಗಿನಾರೇಯಣ ಸಂಕೀರ್ತನಾ ಯೋಜನೆಯ ಸಂಚಾಲಕರಾದ ಶ್ರೀ ವಾನರಾಶಿ ಬಾಲಕೃಷ್ಣ ಭಾಗವತರ್ ರವರು ವಹಿಸಿದ್ದರು. ನಿರಂತರವಾಗಿ ಭಜನೆಯವರನ್ನು ಎಲ್ಲಿಯೂ ನಿಲ್ಲದೇ ನಡೆಸಿಕೊಂಡು, ಭಕ್ತರಿಗೆ ಉತ್ಸಾಹ ತುಂಬುತ್ತಾ ಮುನ್ನಡೆದರು.
ಪಾದಯಾತ್ರೆಯಲ್ಲಿ ಕೈವಾರ ಮಠ ಟ್ರಸ್ಟ್ನ ಉಪಾಧ್ಯಕ್ಷರಾದ ಜೆ.ವಿಭಾಕರರೆಡ್ಡಿ, ಖಜಾಂಚಿ ಆರ್.ಪಿ.ಎಂ.ಸತ್ಯನಾರಾಯಣ್, ಸದಸ್ಯರಾದ ಕೆ.ನರಸಿಂಹಪ್ಪ, ಕೆ.ವಿ.ಸುರೇಶ್, ತ್ಯಾಗರಾಜ್, ಹಿರಿಯ ನಿವೃತ್ತ ಐಎಎಸ್ ಅಧಿಕಾರಿ ಬಿ.ಎನ್.ಕೃಷ್ಣಯ್ಯ, ಕುರುಡುಮಲೆ ಮಂಜುನಾಥ್, ಬ್ಯಾಂಕ್ ನಾರಾಯಣಸ್ವಾಮಿ, ಪ್ರಭಾಕರ್ ಹಾಗೂ ಗ್ರಾಮಗಳ ಭಕ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಮುಳಬಾಗಿಲು ತಾಲ್ಲೂಕಿನಲ್ಲಿ ಶ್ರೀಪೋತನಭಾಗವತ ಹಾಗೂ ಅಮರನಾರೇಯಣ ಶತಕದ ಪ್ರವಚನ ಸಪ್ತಾಹದೊಂದಿದೆ ತಾಲ್ಲೂಕಿನಲ್ಲಿ ನಡೆಯುವ ಕೈವಾರ ತಾತಯ್ಯನವರ ೩೦೦ ನೇ ಜಯಂತಿಯ ಕಾರ್ಯಕ್ರಮಗಳಿಗೆ ಚಾಲನೆಯನ್ನು ನೀಡಲಾಗಿತ್ತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್