ಬೆಂಗಳೂರಿನಲ್ಲಿ ಕಸ ವಿಲೇವಾರಿ ಬಿಕ್ಕಟ್ಟು: ಗುತ್ತಿಗೆದಾರರ ಮುಷ್ಕರಕ್ಕೆ ಎಸ್ಮಾ ಅಸ್ತ್ರ
ಅ.24ರಿಂದ ಒಂದು ವರ್ಷ ಮುಷ್ಕರ ನಿಷೇಧ; ಅಧಿಕಾರಿಗಳ ನಿರ್ಲಕ್ಷ್ಯವೇ ಸಂಘರ್ಷಕ್ಕೆ ಕಾರಣವೆಂದು ಗುತ್ತಿಗೆದಾರರ ಆರೋಪ
Bengaluru-Garbage-Crisis-Contractors-Protest-ESMA-Imposed-for-One-Year


ಬೆಂಗಳೂರು, 25 ಅಕ್ಟೋಬರ್ (ಹಿ.ಸ.):

ಆಯುಧಪೂಜೆ ಮತ್ತು ವಿಜಯದಶಮಿ ಹಬ್ಬಗಳು ಮುಗಿದರೂ ನಗರದ ಹಲವು ರಸ್ತೆ ಹಾಗೂ ಪಾದಚಾರಿ ಮಾರ್ಗಗಳಲ್ಲಿ ಬಾಳೆಕಂದು, ಕುಂಬಳಕಾಯಿ, ಹೂವು ಸೇರಿದಂತೆ ಹಬ್ಬದ ತ್ಯಾಜ್ಯ ವಿಲೇವಾರಿಯಾಗಿಲ್ಲ.

ಈ ಮಧ್ಯೆ ಕಸ ಸಂಗ್ರಹ ಗುತ್ತಿಗೆದಾರರು ಮತ್ತು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ (ಬಿಎಸ್ಡಬ್ಲ್ಯುಎಂಎಲ್) ಅಧಿಕಾರಿಗಳ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ನಗರದಲ್ಲಿ ಕಸ ವಿಲೇವಾರಿ ಸಮಸ್ಯೆ ಮತ್ತಷ್ಟು ಉಲ್ಬಣಿಸುವ ಆತಂಕ ಎದುರಾಗಿದೆ.

ಗುತ್ತಿಗೆದಾರರು ಕಸ ವಿಲೇವಾರಿ ಕಾರ್ಯ ಸ್ಥಗಿತಗೊಳಿಸುವ ಸಾಧ್ಯತೆ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ (ಎಸ್ಮಾ) ಅಸ್ತ್ರ ಪ್ರಯೋಗಿಸಿದೆ. ಅಕ್ಟೋಬರ್ 24ರಿಂದ ಅನ್ವಯವಾಗುವಂತೆ ಮುಂದಿನ ಒಂದು ವರ್ಷದ ಅವಧಿಗೆ ತ್ಯಾಜ್ಯ ನಿರ್ವಹಣಾ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರು ಮತ್ತು ಸಿಬ್ಬಂದಿ ಮುಷ್ಕರ ನಡೆಸುವುದನ್ನು ನಿಷೇಧಿಸಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.

ಹಲವು ಪ್ರದೇಶಗಳಲ್ಲಿ ಕಸ ವಿಲೇವಾರಿ ಸ್ಥಗಿತ

ವಿಜಯದಶಮಿಗೂ ಮುನ್ನ ಹಾಗೂ ನಂತರ ನಗರದ ಕೆ.ಆರ್. ಮಾರುಕಟ್ಟೆ ಮತ್ತು ಅವೆನ್ಯೂ ರಸ್ತೆಗಳಲ್ಲಿನ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆದಿಲ್ಲ. ನಾಯಂಡಹಳ್ಳಿ, ರಾಜರಾಜೇಶ್ವರಿನಗರ, ಪಟ್ಟಣಗೆರೆ ಹಾಗೂ ಕೆಂಚೇನಹಳ್ಳಿ ಸೇರಿದಂತೆ ಹಲವು ವಸತಿ ಪ್ರದೇಶಗಳಲ್ಲಿಯೂ ಕಸ ಸಂಗ್ರಹವಾಗಿಲ್ಲ. ಆಟೊಗಳ ಸಮಸ್ಯೆಯಿಂದಾಗಿ ಕಸ ಸಂಗ್ರಹಿಸಲು ಸಿಬ್ಬಂದಿ ಬಂದಿಲ್ಲ ಎಂದು ಸಂಗ್ರಹಣಾ ಕಾರ್ಯದ ಮೇಲ್ವಿಚಾರಕರು ತಿಳಿಸಿದ್ದಾರೆ.

ಗುತ್ತಿಗೆದಾರರು ಮತ್ತು ಬಿಎಸ್ಡಬ್ಲ್ಯುಎಂಎಲ್ ಅಧಿಕಾರಿಗಳ ನಡುವೆ ಹಲವು ತಿಂಗಳಿಂದ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ಮುಂದುವರಿದಿದೆ. ಇದೀಗ ಸಂಘರ್ಷ ತೀವ್ರಗೊಂಡಿದ್ದು, ಕಸ ಸಂಗ್ರಹಿಸುವ ಗುತ್ತಿಗೆದಾರರು ವಿಲೇವಾರಿ ಕಾರ್ಯ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅಕ್ಟೋಬರ್ 26ರಿಂದ ಹೆಚ್ಚಿನ ಆಟೊಗಳು ಕಸ ಸಂಗ್ರಹಣೆಗೆ ಬಾರದಿರುವ ಸಾಧ್ಯತೆಯೂ ಇದೆ.

ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ

ಈ ಕುರಿತು ಪ್ರತಿಕ್ರಿಯಿಸಿರುವ ಕಸ ವಿಲೇವಾರಿ ಗುತ್ತಿಗೆದಾರರ ಸಂಘದ ಪ್ರತಿನಿಧಿಗಳು, “ನಮ್ಮ ಹೋರಾಟ ಸರ್ಕಾರದ ವಿರುದ್ಧವಲ್ಲ. ಕೆಲವು ಅಧಿಕಾರಿಗಳ ಮಲತಾಯಿ ಧೋರಣೆಯಿಂದ ಬೇಸತ್ತು ಅನಿವಾರ್ಯವಾಗಿ ಪ್ರತಿಭಟನೆಗೆ ಮುಂದಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಸೇವಾದಾರರು ದಿನದಿಂದ ದಿನಕ್ಕೆ ಆರ್ಥಿಕ ಸಂಕಷ್ಟ ಮತ್ತು ಮಾನಸಿಕ ಒತ್ತಡ ಅನುಭವಿಸುತ್ತಿದ್ದಾರೆ. ಸಮಸ್ಯೆ ಪರಿಹರಿಸುವಂತೆ ಬೆಂಗಳೂರು ಅಭಿವೃದ್ಧಿ ಸಚಿವರನ್ನು ಭೇಟಿ ಮಾಡಿ ಚರ್ಚಿಸಿದ್ದೇವೆ. ಮನವಿ ಪತ್ರಗಳನ್ನೂ ಸಲ್ಲಿಸಿದ್ದೇವೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಆರೋಪಿಸಿದ್ದಾರೆ.

“ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಬಿಎಸ್ಡಬ್ಲ್ಯುಎಂಎಲ್ನ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಜಿಬಿಎ ಮುಖ್ಯ ಆಯುಕ್ತರಿಗೆ ಹಲವು ಬಾರಿ ಪತ್ರಗಳ ಮೂಲಕ ಮತ್ತು ಖುದ್ದಾಗಿ ಭೇಟಿ ಮಾಡಿ ಸಮಸ್ಯೆ ವಿವರಿಸಿದ್ದೇವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವೇತನ ಪರಿಷ್ಕರಣೆ, ಇಂಧನ ದರ ಏರಿಕೆ ಹೊರೆ

ಕಾರ್ಮಿಕ ಇಲಾಖೆಯು ಮೇ 22ರಿಂದ ವೇತನ ಪರಿಷ್ಕರಿಸಿದ್ದು, ಅದನ್ನು ಜಾರಿಗೊಳಿಸುವ ಹೊಣೆ ಗುತ್ತಿಗೆದಾರರ ಮೇಲಿದೆ. ಆದರೆ ಈ ಕುರಿತು ಅಧಿಕಾರಿಗಳು ಗಮನಹರಿಸದ ಕಾರಣ ಕಾರ್ಮಿಕ ಸಂಘಟನೆಗಳು, ಕಾರ್ಮಿಕ ಇಲಾಖೆ, ಭವಿಷ್ಯ ನಿಧಿ (ಇಪಿಎಫ್) ಮತ್ತು ನೌಕರರ ರಾಜ್ಯ ವಿಮಾ (ಇಎಸ್ಐ) ಇಲಾಖೆಗಳು ಪದೇಪದೇ ನೋಟಿಸ್ ನೀಡಿವೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ.

“ಪರಿಷ್ಕೃತ ವೇತನ ಜಾರಿಗೊಳಿಸದಿರುವುದರಿಂದ ಇಎಸ್ಐ ಮತ್ತು ಇಪಿಎಫ್ ವಂತಿಕೆಗಳ ಮೇಲಿನ ದಂಡ ಹಾಗೂ ಬಡ್ಡಿಯ ಹೆಚ್ಚುವರಿ ಹೊರೆ ಸೇವಾದಾರರ ಮೇಲೆ ಬೀಳುತ್ತಿದೆ. ಕಾರ್ಮಿಕರ ವೇತನ ಮತ್ತು ಸೌಲಭ್ಯಗಳನ್ನು ಒದಗಿಸುವಲ್ಲಿ ಗುತ್ತಿಗೆದಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.

ಇದೇ ವೇಳೆ, 2017–18ನೇ ಸಾಲಿನಲ್ಲಿ ಪ್ರತಿ ಲೀಟರ್ ಡೀಸೆಲ್ಗೆ ₹66 ದರ ನಿಗದಿಪಡಿಸಲಾಗಿತ್ತು. ಆದರೆ ಪ್ರಸ್ತುತ ಡೀಸೆಲ್ ದರ ₹98.80ಕ್ಕೆ ಏರಿಕೆಯಾಗಿದ್ದು, ಪ್ರತಿ ಲೀಟರ್ಗೆ ₹32.80 ಹೆಚ್ಚುವರಿ ವೆಚ್ಚವಾಗುತ್ತಿದೆ. ಇಂಧನ ದರವನ್ನು ಪರಿಷ್ಕರಿಸುವಂತೆ ಮನವಿ ಮಾಡಿದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಬೆಂಗಳೂರು ಮಹಾನಗರ ಸ್ವಚ್ಛತೆ ಮತ್ತು ಲಾರಿ ಮಾಲೀಕರ-ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎನ್. ಬಾಲಸುಬ್ರಮಣಿಯಂ ತಿಳಿಸಿದ್ದಾರೆ.

“ಕಾರ್ಮಿಕ ಇಲಾಖೆಯು ವಾರ್ಷಿಕವಾಗಿ ಪರಿಷ್ಕರಿಸುವ ತುಟ್ಟಿಭತ್ಯೆ (ವಿಡಿಎ) ಜಾರಿಗೆ ಸಂಬಂಧಿಸಿದಂತೆ ಬಿಎಸ್ಡಬ್ಲ್ಯುಎಂಎಲ್ ಮತ್ತು ಜಿಬಿಎ ಅಧಿಕಾರಿಗಳು ಪರಸ್ಪರ ಜವಾಬ್ದಾರಿ ವರ್ಗಾಯಿಸುತ್ತಿದ್ದಾರೆ. ಕಡತಗಳನ್ನು ಒಂದು ಕಚೇರಿಯಿಂದ ಮತ್ತೊಂದು ಕಚೇರಿಗೆ ಕಳುಹಿಸುತ್ತಾ ವಿಳಂಬ ಮಾಡುತ್ತಿದ್ದಾರೆ. ಪ್ರತಿ ತಿಂಗಳ ಬಿಲ್ ಪಾವತಿಗಾಗಿ 25ರಿಂದ 30 ದಿನ ಅಲೆದಾಡಬೇಕಾದ ಪರಿಸ್ಥಿತಿ ಇದೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ನಾವು ಸರ್ಕಾರದ ವಿರುದ್ಧ ಹೋರಾಡುತ್ತಿಲ್ಲ. ನಗರ ಸ್ವಚ್ಛತೆ ಮತ್ತು ಕಾರ್ಮಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ಜವಾಬ್ದಾರಿ ಹೊಂದಿರುವ ಕೆಲವು ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ನಮ್ಮ ಪ್ರತಿಭಟನೆ” ಎಂದು ಸ್ಪಷ್ಟಪಡಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande