ಹಲಗಲಿ ಬಂಡಾಯದ ವೀರಜ್ಯೋತಿ ಯಾತ್ರೆಗೆ ಚಾಲನೆ
ಬಾಗಲಕೋಟೆ, 24 ಅಕ್ಟೋಬರ್ (ಹಿ.ಸ.) ಸ್ವಾತಂತ್ರ್ಯ ಸಂಗ್ರಾಮದ ಆರಂಭಿಕ ಹೋರಾಟಗಳಲ್ಲಿ ಪ್ರಮುಖ ಸ್ಥಾನ ಪಡೆದಿರುವ ಹಲಗಲಿ ಬೇಡರ ಬಂಡಾಯದ ಇತಿಹಾಸವನ್ನು ಜನಮಾನಸದಲ್ಲಿ ಮತ್ತಷ್ಟು ಪರಿಚಯಿಸುವ ಹಾಗೂ ಯುವಜನರಲ್ಲಿ ಹೋರಾಟದ ಚರಿತ್ರೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ವೀರಜ್ಯೋತಿ ಕಾಲ್ನ
ವೀರ ಜ್ಯೋತಿ


ಬಾಗಲಕೋಟೆ, 24 ಅಕ್ಟೋಬರ್ (ಹಿ.ಸ.)

ಸ್ವಾತಂತ್ರ್ಯ ಸಂಗ್ರಾಮದ ಆರಂಭಿಕ ಹೋರಾಟಗಳಲ್ಲಿ ಪ್ರಮುಖ ಸ್ಥಾನ ಪಡೆದಿರುವ ಹಲಗಲಿ ಬೇಡರ ಬಂಡಾಯದ ಇತಿಹಾಸವನ್ನು ಜನಮಾನಸದಲ್ಲಿ ಮತ್ತಷ್ಟು ಪರಿಚಯಿಸುವ ಹಾಗೂ ಯುವಜನರಲ್ಲಿ ಹೋರಾಟದ ಚರಿತ್ರೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ವೀರಜ್ಯೋತಿ ಕಾಲ್ನಡಿಗೆ ಯಾತ್ರೆಗೆ ಮುಧೋಳ್ ತಾಲೂಕಿನ ಹಲಗಲಿ ಗ್ರಾಮದಲ್ಲಿ ಚಾಲನೆ ನೀಡಲಾಯಿತು.

ಯುವಕರ ನೇತೃತ್ವದಲ್ಲಿ ಆಯೋಜಿಸಿರುವ ಈ ವೀರಜ್ಯೋತಿ ಯಾತ್ರೆ ಹಲಗಲಿ ಗ್ರಾಮದಿಂದ ಆರಂಭಗೊಂಡಿದ್ದು, ವಿವಿಧ ಗ್ರಾಮಗಳ ಮೂಲಕ ಕಾಲ್ನಡಿಗೆಯಲ್ಲಿ ಸಾಗಲಿದೆ. ಯಾತ್ರೆಯಲ್ಲಿ ಹಲಗಲಿ ಬಂಡಾಯದ ವೀರರ ಸ್ಮರಣಾರ್ಥವಾಗಿ ವೀರಜ್ಯೋತಿಯನ್ನು ಕೊಂಡೊಯ್ಯಲಾಗುತ್ತಿದ್ದು, ಐತಿಹಾಸಿಕ ಹೋರಾಟದ ಸಂದೇಶವನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಲಾಗುತ್ತಿದೆ.

ಹಲಗಲಿ ಬೇಡರ ಬಂಡಾಯ ಬ್ರಿಟಿಷರ ವಿರುದ್ಧ ನಡೆದ ಮಹತ್ವದ ಪ್ರತಿರೋಧದ ಸಂಕೇತವಾಗಿದ್ದು, ನಾಡಿನ ಸ್ವಾಭಿಮಾನ, ಸ್ವಾತಂತ್ರ್ಯ ಹಾಗೂ ಹಕ್ಕುಗಳಿಗಾಗಿ ಹೋರಾಡಿದ ಹಲಗಲಿ ಬೇಡರ ಸಾಹಸವನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಕಾರ್ಯಕ್ರಮದಲ್ಲಿ ಮಾತನಾಡಿದವರು ಅಭಿಪ್ರಾಯಪಟ್ಟರು.

ವೀರರ ತ್ಯಾಗ ಮತ್ತು ಹೋರಾಟದ ಇತಿಹಾಸವನ್ನು ಕೇವಲ ಜಯಂತಿ ಅಥವಾ ಸ್ಮರಣಾ ಕಾರ್ಯಕ್ರಮಗಳಿಗೆ ಸೀಮಿತಗೊಳಿಸದೆ, ಯುವಜನರಿಗೆ ತಿಳಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಅವರು ಹೇಳಿದರು.

ಹಲಗಲಿಯಿಂದ ಆರಂಭಗೊಂಡಿರುವ ವೀರಜ್ಯೋತಿ ಕಾಲ್ನಡಿಗೆ ಯಾತ್ರೆಯು ಅಕ್ಟೋಬರ್ 26ರಂದು ವಾಳಕಿ ಗ್ರಾಮವನ್ನು ತಲುಪಲಿದೆ. ಯಾತ್ರೆ ವಾಳಕಿ ಗ್ರಾಮಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಅಂದು ಮಹರ್ಷಿ ವಾಲ್ಮೀಕಿ ಜಯಂತಿ ಉತ್ಸವವನ್ನು ವಿಶೇಷವಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ವೀರಜ್ಯೋತಿ ಯಾತ್ರೆಯ ಮೂಲಕ ಐತಿಹಾಸಿಕ ಹೋರಾಟದ ಸ್ಮರಣೆಯ ಜತೆಗೆ ಮಹರ್ಷಿ ವಾಲ್ಮೀಕಿ ಅವರ ಆದರ್ಶಗಳು ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಹೊಂದಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ವಾಲ್ಮೀಕಿ ಮಹಾಸಭಾ ತಾಲೂಕು ಅಧ್ಯಕ್ಷ ಯಲ್ಲಪ್ಪ ಕಾಳಪ್ಪ ಕೊಳ್ಳನ್ನವರ, ಹಲಗಲಿ ಬಂಡಾಯದಂತಹ ಐತಿಹಾಸಿಕ ಹೋರಾಟಗಳ ಹಿಂದಿರುವ ತ್ಯಾಗ, ಶೌರ್ಯ ಮತ್ತು ಸ್ವಾಭಿಮಾನದ ಸಂದೇಶವನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಯುವಕರು ಇತಿಹಾಸವನ್ನು ಅರಿತುಕೊಂಡು ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಬೈಲಪ್ಪ ಶಿರಗುಂಪಿ, ಗ್ರಾಮದ ಹಿರಿಯರಾದ ಶಿವಪ್ಪ ಡೊಳ್ಳಿ, ಈರಪ್ಪ ಬಿಸನಾಳ, ಹನಮಂತ ಜಡಗನ್ನವರ, ಯಲ್ಲಪ್ಪ ಹಂಚಿನಾಳ, ವಿಠ್ಠಲ ಬದನೂರು, ಚನ್ನಬಸಪ್ಪ ಹಿರಕನ್ನವರ, ಹನಮಂತ ಬಂದಿ, ಬೆನ್ನಪ್ಪ ಸಿಮೀಕೇರಿ, ಹನುಮಂತ ಅಳ್ಳಿಕಟ್ಟಿ, ವಿಠ್ಠಲ ತುಳಸಿಗೇರಿ, ಬಸಪ್ಪ ಜಡಗನ್ನವರ ಸೇರಿದಂತೆ ಗ್ರಾಮದ ಮುಖಂಡರು, ಯುವಕರು ಹಾಗೂ ಸಮಾಜದ ವಿವಿಧ ಗಣ್ಯರು ಉಪಸ್ಥಿತರಿದ್ದರು.

ವೀರಜ್ಯೋತಿ ಯಾತ್ರೆಯು ಸಾಗುವ ಮಾರ್ಗದುದ್ದಕ್ಕೂ ಜನರು ಯಾತ್ರೆಯನ್ನು ಸ್ವಾಗತಿಸಿ, ಹಲಗಲಿ ಬಂಡಾಯದ ವೀರರಿಗೆ ಗೌರವ ಸಲ್ಲಿಸುವ ಮೂಲಕ ಐತಿಹಾಸಿಕ ಹೋರಾಟದ ಸ್ಮರಣೆಯನ್ನು ಜೀವಂತವಾಗಿರಿಸುವ ಆಶಯ ವ್ಯಕ್ತವಾಯಿತು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande