
ಹಾಸನ, 24 ಅಕ್ಟೋಬರ್ (ಹಿ.ಸ.):
ಮಹಿಳೆಯರು ಇಂದು ಸಮಾಜಮುಖಿಯಾಗಿದ್ದರೆ, ಮುನ್ನೆಲೆಗೆ ಬಂದಿದ್ದರೆ ಅದಕ್ಕೆ ಸಿದ್ದರಾಮಯ್ಯನವರ ಗ್ಯಾರಂಟಿ ಯೋಜನೆಗಳು ಹಾಗೂ ಮುಖ್ಯಮಂತ್ರಿಯಾಗಿ ಅವರು ನೀಡಿದ ಕಾರ್ಯಕ್ರಮಗಳು ಕಾರಣ ಎಂದು ಅಬಕಾರಿ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಎಂ. ಶಿವಲಿಂಗೇಗೌಡ ಅವರು ಬಣ್ಣಿಸಿದರು.
ಶ್ರವಣಬೆಳಗೊಳದ ಕಬ್ಬಾಳು ಗ್ರಾಮದಲ್ಲಿ ನಿರ್ಮಾಣಗೊಂಡಿರುವ ದಾಸಶ್ರೇಷ್ಠ ಶ್ರೀ ಭಕ್ತ ಕನಕದಾಸರ ಪ್ರತಿಮೆ ಅನಾವರಣ ಹಾಗೂ 8 ವರ್ಷ ಯಶಸ್ವಿ ಆಡಳಿತ ನೀಡಿದ ನಿಕಟಪೂರ್ವ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಅನ್ನರಾಮಯ್ಯ ಎಂಬ ಹೆಸರು ಪಡೆದ ಸಿದ್ದರಾಮಯ್ಯವರು ರಾಜ್ಯದ ದೃವತಾರೆ. ಅಂತಹ ಶ್ರೇಷ್ಠ ಹೆಸರನ್ನು ಪಡೆದಿರುವ ಸಿದ್ದರಾಮಯ್ಯನವರು ನನ್ನ ರಾಜಕೀಯ ಗುರುಗಳು ಎನ್ನಲು ಹೆಮ್ಮೆಯಾಗುತ್ತದೆ. ಶಾಸಕನಿಂದ ಮಂತ್ರಿಯವರೆಗೆ ನಾನು ಬೆಳೆದು ನಿಲ್ಲಲು ಕಾರಣಕರ್ತರು ಎಂದು ಹೇಳಲು ಅತ್ಯಂತ ಹೆಮ್ಮೆಯೆನಿಸುತ್ತದೆ ಎಂದರು.
ಕರ್ನಾಟಕ ರಾಜಕಾರಣ ಇತಿಹಾಸದಲ್ಲಿ ಅತಿ ಹೆಚ್ಚು ಅವಧಿಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಸಿದ್ದರಾಮಯ್ಯನವರ ದಾಖಲೆಯನ್ನು ಯಾರಿಂದಲೂ ಅಳಿಸಲು ಸಾಧ್ಯವಿಲ್ಲ. 17 ಬಾರಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯನವರು ರಾಷ್ಟ್ರ ರಾಜಕಾರಣದಲ್ಲೇ ಅತಿದೊಡ್ಡ ಸಾಧನೆ ಮಾಡಿದ್ದಾರೆ. ಸಿಎಂ ಪದವಿ ತ್ಯಾಗ ಮಾಡುವಾಗ ನಾನು ನುಡಿದಂತೆ ನಡೆಯುವ ವ್ಯಕ್ತಿ, ಹೈಕಮಾಂಡ್ ಹೇಳಿದ ದಿನವೇ ರಾಜೀನಾಮೆ ನೀಡುತ್ತೇನೆ ಎಂದಿದ್ದರು. ಅದರಂತೆ ರಾಹುಲ್ ಗಾಂಧಿ ಹೇಳಿದ ದಿನವೇ ಪದವಿಯನ್ನು ತ್ಯಾಗ ಮಾಡುವ ಮೂಲಕ ರಾಜಕೀಯ ಇತಿಹಾಸದಲ್ಲೇ ಶ್ರೇಷ್ಠ ತ್ಯಾಗಮಯಿಯಾದರು ಎಂದು ಶ್ಲಾಘಿಸಿದರು.
ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರಿಗೆ ಆಡಳಿತಾತ್ಮಕವಾಗಿ ಸಂಪೂರ್ಣ ಬೆಂಬಲ ನೀಡುತ್ತಿರುವ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ 2028ಕ್ಕೂ ಅಧಿಕಾರಕ್ಕೆ ಬರಲಿದೆ ಎಂದರು.
ಈ ಸಂದರ್ಭದಲ್ಲಿ ಕನಕ ಯುವ ಸೇನೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಡಾ. ಶಿವಾನಂದಪುರಿ ಸ್ಮಾಮೀಜಿ, ಸಂಸದರಾದ ಶ್ರೇಯಸ್ ಪಟೇಲ್, ಮಾಜಿ ಶಾಸಕ ಸಿ. ಎಸ್. ಪುಟ್ಟೇಗೌಡ, ಮಾಜಿ ಎಂಎಲ್ಸಿ ಗೋಪಾಲಸ್ವಾಮಿ, ಕೆ. ವಿ. ಪ್ರಭಾಕರ್ ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.