ಮದ್ದೂರಿನಲ್ಲಿ ಗ್ರಾಮೀಣ ಸೊಗಡಿನ ಲಗೋರಿ ಕ್ರೀಡಾಕೂಟ: ಹಿರಿಯರಲ್ಲೂ ಇಮ್ಮಡಿಸಿದ ಉತ್ಸಾಹ
ರಾಜ್ಯದಲ್ಲೇ ಮೊದಲ ಬಾರಿಗೆ ವಯಸ್ಕರಿಗಾಗಿ ಲಗೋರಿ ಸ್ಪರ್ಧೆ ಆಯೋಜನೆ
Maddur-Lagori-Sports-Meet-2026-Rural-Traditional-Games-for-All-Age-Groups


ಮದ್ದೂರು, 24 ಅಕ್ಟೋಬರ್ (ಹಿ.ಸ.):

ಮರೆಯಾಗುತ್ತಿರುವ ಗ್ರಾಮೀಣ ಸಾಂಪ್ರದಾಯಿಕ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ‘ಲಗೋರಿ ಕ್ರೀಡಾಕೂಟ–2026’ ಆಯೋಜಿಸಲಾಗಿದ್ದು, ಮಕ್ಕಳು, ಯುವಕರು ಮಾತ್ರವಲ್ಲದೆ 50ರಿಂದ 60 ವರ್ಷ ವಯಸ್ಸಿನ ಹಿರಿಯರೂ ಕ್ರೀಡಾಂಗಣಕ್ಕಿಳಿದು ಉತ್ಸಾಹದಿಂದ ಆಟವಾಡಿದರು.

ಸ್ವಾಮಿ ವಿವೇಕಾನಂದ ಯುವ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘ ಹಾಗೂ ಕರ್ನಾಟಕ ಜಾನಪದ ಪರಿಷತ್ತಿನ ವತಿಯಿಂದ ಮದ್ದೂರಿನ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಜೂನಿಯರ್ ಮತ್ತು ಸೀನಿಯರ್ ವಿಭಾಗಗಳ ಲಗೋರಿ ಕ್ರೀಡಾಕೂಟ ಗ್ರಾಮೀಣ ಕ್ರೀಡಾ ಸಂಭ್ರಮಕ್ಕೆ ಸಾಕ್ಷಿಯಾಯಿತು.

ರಾಜ್ಯದಲ್ಲೇ ಮೊದಲ ಬಾರಿಗೆ ವಯಸ್ಕರಿಗಾಗಿ ಲಗೋರಿ ಸ್ಪರ್ಧೆ ಆಯೋಜಿಸಿರುವುದು ವಿಶೇಷ ಆಕರ್ಷಣೆಯಾಗಿತ್ತು. ವಿಶ್ವ ಒಕ್ಕಲಿಗರ ಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ವಯಸ್ಸಿನ ಹಂಗು ತೊರೆದು ಕ್ರೀಡಾಂಗಣಕ್ಕಿಳಿದ ಹಿರಿಯರು ಮಕ್ಕಳಂತೆ ಲಗೋರಿ ಆಟವಾಡಿ ಸಂಭ್ರಮಿಸಿದರು. ಜೂನಿಯರ್ ವಿಭಾಗದ ಮಕ್ಕಳು ಮತ್ತು ಯುವಕರೂ ಉತ್ಸಾಹದಿಂದ ಪಾಲ್ಗೊಂಡು ಗ್ರಾಮೀಣ ಕ್ರೀಡೆಯ ಸೊಗಡನ್ನು ಅನುಭವಿಸಿದರು.

ಗ್ರಾಮೀಣ ಕ್ರೀಡೆಗಳಿಂದ ಆರೋಗ್ಯ ವೃದ್ಧಿ: ಶ್ರೀಗಳು

ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, “ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಅಗತ್ಯವಿದೆ. ವಿದ್ಯಾರ್ಥಿಗಳಿಗೆ ಕ್ರೀಡೆ ಬಹಳ ಮುಖ್ಯ ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿದ್ದು, ಮಕ್ಕಳು ಹಾಗೂ ವಯಸ್ಕರು ಮೊಬೈಲ್ ಬಳಕೆಯಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ.ಮೊಬೈಲ್ನ ಅತಿಯಾದ ಬಳಕೆಯಿಂದ ಮನರಂಜನೆಯ ಜೊತೆಗೆ ಆರೋಗ್ಯವನ್ನೂ ಕಳೆದುಕೊಳ್ಳುವಂತಾಗಿದೆ. ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಗ್ರಾಮೀಣ ಕ್ರೀಡೆಗಳು ಅಗತ್ಯ” ಎಂದು ಹೇಳಿದರು.

ಮಂಡ್ಯ ಜಿಲ್ಲೆ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದ್ದು, ಕ್ರೀಡಾ ಚಟುವಟಿಕೆಗಳಲ್ಲಿಯೂ ತನ್ನದೇ ಆದ ಗುರುತನ್ನು ಹೊಂದಿದೆ. ಎಲ್ಲರೂ ಗ್ರಾಮೀಣ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಅವುಗಳ ಉಳಿವು ಮತ್ತು ಬೆಳವಣಿಗೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಸಾಂಪ್ರದಾಯಿಕ ಆಟಗಳ ಉಳಿವಿಗೆ ಮಹತ್ವದ ಹೆಜ್ಜೆ

ಗ್ರಾಮೀಣ ಕ್ರೀಡೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಲಗೋರಿ ಕ್ರೀಡಾಕೂಟ ಆಯೋಜಿಸಿರುವುದು ಮಹತ್ವದ ಹೆಜ್ಜೆಯಾಗಿದೆ. ಜಾನಪದ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಲಾರಾ ಪ್ರಸನ್ನ ಅವರು ಸಾಂಪ್ರದಾಯಿಕ ಆಟಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಹಾಗೂ ಯುವಜನರಲ್ಲಿ ಗ್ರಾಮೀಣ ಕ್ರೀಡೆಗಳ ಬಗ್ಗೆ ಆಸಕ್ತಿ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿದ್ದಾರೆ.

ಅಪರೂಪದ, ಮನರಂಜನಾತ್ಮಕ ಹಾಗೂ ದೈಹಿಕ ಚಟುವಟಿಕೆಗೆ ಪ್ರೇರಣೆ ನೀಡುವ ಲಗೋರಿ ಆಟವು ಮಕ್ಕಳಿಗೆ ಮಾತ್ರ ಸೀಮಿತವಾಗದೆ ಎಲ್ಲ ವಯೋಮಾನದವರನ್ನೂ ಆಕರ್ಷಿಸಿತು. ಹಿರಿಯರು ಕ್ರೀಡೆಯಲ್ಲಿ ಪಾಲ್ಗೊಂಡು ಸಂತಸ ವ್ಯಕ್ತಪಡಿಸಿದರು.

ಶಾಲಾ ಕ್ರೀಡಾಕೂಟಗಳಲ್ಲೂ ಅವಕಾಶಕ್ಕೆ ಮನವಿ

ಗ್ರಾಮೀಣ ಕ್ರೀಡೆಗಳ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸುವ ಉದ್ದೇಶದಿಂದ ಶಾಲಾ ಕ್ರೀಡಾಕೂಟಗಳಲ್ಲಿಯೂ ಲಗೋರಿಯಂತಹ ಸಾಂಪ್ರದಾಯಿಕ ಆಟಗಳನ್ನು ಸೇರಿಸಬೇಕು ಎಂದು ಕ್ರೀಡಾಪಟುಗಳು ಮನವಿ ಮಾಡಿದರು.

--------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande