
ಬಾಗಲಕೋಟೆ, 24 ಅಕ್ಟೋಬರ್ (ಹಿ.ಸ.)
ಮುಧೋಳ ತಾಲೂಕಿನ ಹೆಬ್ಬಾಳ ಗ್ರಾಮದ ಮಾರುತೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದ್ದ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮಕ್ಕೆ ಶಾಸಕ ಆರ್.ಬಿ. ತಿಮ್ಮಾಪುರ ಅವರು ಚಾಲನೆ ನೀಡಿದರು.
ಗ್ರಾಮೀಣ ಭಾಗದ ಜನರಿಗೆ ಸರ್ಕಾರದ ವಿವಿಧ ಇಲಾಖೆಗಳ ಸೌಲಭ್ಯಗಳು ಹಾಗೂ ಯೋಜನೆಗಳನ್ನು ನೇರವಾಗಿ ತಲುಪಿಸುವುದು, ಸಾರ್ವಜನಿಕರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಆಲಿಸಿ ಸಂಬಂಧಿಸಿದ ಇಲಾಖೆಗಳ ಮೂಲಕ ಪರಿಹಾರ ಒದಗಿಸುವುದು ಹಾಗೂ ಸರ್ಕಾರಿ ಸೇವೆಗಳನ್ನು ಜನರ ಬಳಿಗೆ ಕೊಂಡೊಯ್ಯುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಆರ್.ಬಿ. ತಿಮ್ಮಾಪುರ ಅವರು, ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಗ್ರಾಮೀಣ ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು. ಜನರ ಬಳಿಗೆ ಆಡಳಿತವನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ್ದಾಗಿವೆ ಎಂದು ಹೇಳಿದರು.
ತಹಶೀಲ್ದಾರ್ ಡಾ. ಚಿಕ್ಕಪ್ಪ ನಾಯಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಂದಾಯ ಸೇರಿದಂತೆ ವಿವಿಧ ಇಲಾಖೆಗಳ ಸೇವೆಗಳನ್ನು ಸಾರ್ವಜನಿಕರಿಗೆ ಸುಲಭವಾಗಿ ದೊರಕಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗುತ್ತಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಸಾರ್ವಜನಿಕರಿಗೆ ಲಭ್ಯವಿರುವ ಸರ್ಕಾರಿ ಯೋಜನೆಗಳು ಹಾಗೂ ಸೇವೆಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಮಹಾಂತೇಶ ಮಾಚಕನೂರ, ರಾಜುಗೌಡ ಪಾಟೀಲ, ತಾಪಂ ಇಒ ರಾಘವೇಂದ್ರ ಕಳ್ಳಿಮನಿ, ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ರಮೇಶ ನಿಡೋಣಿ, ಉಪನೋಂದಣಿ ಅಧಿಕಾರಿ ವಿಠ್ಠಲ ಎಂ., ಪಿಡಿಒ ಶ್ರೀನಿವಾಸ ಚಿಗರಡ್ಡಿ, ಟಿಎಚ್ಒ ಡಾ. ವೆಂಕಟೇಶ ಮಲಘಾಣ, ಪಶುಸಂಗೋಪಣೆ ಇಲಾಖೆ ಅಧಿಕಾರಿ ಗೋವಿಂದ ರಾಠೋಡ, ಕೃಷಿ ಇಲಾಖೆ ಅಧಿಕಾರಿ ಎಸ್.ಬಿ. ದೊಡಮನಿ, ಅರಣ್ಯ ಇಲಾಖೆ ಅಧಿಕಾರಿ ಎಚ್.ಬಿ. ಡೋಣಿ, ಕಂದಾಯ ನಿರೀಕ್ಷಕರಾದ ಸತೀಶ ಬೇವೂರ ಹಾಗೂ ಪ್ರಕಾಶ ಕುಂದರಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಭಾಗವಹಿಸಿ ವಿವಿಧ ಇಲಾಖೆಗಳ ಸೇವೆ ಮತ್ತು ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ಪಡೆದುಕೊಂಡರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande