ಬಾಗಲಕೋಟೆ: ಧಾರಾಕಾರ ಮಳೆಗೆ ನಗರಸಭೆ ಕಚೇರಿ ಜಲಾವೃತ; ರಸ್ತೆಗಳಲ್ಲೂ ನೀರು, ಸಂಚಾರ ಅಸ್ತವ್ಯಸ್ತ
ಬಾಗಲಕೋಟೆ, 24 ಅಕ್ಟೋಬರ್ (ಹಿ.ಸ.) ಇಳಕಲ್ಲ ನಗರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಇಳಕಲ್ಲ ನಗರಸಭೆ ಕಾರ್ಯಾಲಯ ಸೇರಿದಂತೆ ನಗರದ ಪ್ರಮುಖ ರಸ್ತೆಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿತು. ಸುಮಾರು ಒಂದು ಗಂಟೆ ಕಾಲ ಸುರಿದ ಧಾರಾಕಾರ ಮಳೆಯಿಂದ ನಗರದ ಕಂಠಿ ವೃತ್ತ, ನಗರಸಭೆ ರಸ್ತೆ ಸೇರಿದಂತೆ ವಿವಿಧ
ಭಾರಿ ಮಳೆ


ಬಾಗಲಕೋಟೆ, 24 ಅಕ್ಟೋಬರ್ (ಹಿ.ಸ.)

ಇಳಕಲ್ಲ ನಗರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಇಳಕಲ್ಲ ನಗರಸಭೆ ಕಾರ್ಯಾಲಯ ಸೇರಿದಂತೆ ನಗರದ ಪ್ರಮುಖ ರಸ್ತೆಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿತು. ಸುಮಾರು ಒಂದು ಗಂಟೆ ಕಾಲ ಸುರಿದ ಧಾರಾಕಾರ ಮಳೆಯಿಂದ ನಗರದ ಕಂಠಿ ವೃತ್ತ, ನಗರಸಭೆ ರಸ್ತೆ ಸೇರಿದಂತೆ ವಿವಿಧೆಡೆ ಅಪಾರ ಪ್ರಮಾಣದಲ್ಲಿ ಮಳೆ ನೀರು ಹರಿದುಬಂದ ಪರಿಣಾಮ ವಾಹನ ಸವಾರರು ಹಾಗೂ ಸಾರ್ವಜನಿಕರು ಪರದಾಡುವಂತಾಯಿತು.

ಮಳೆ ನೀರು ಸರಾಗವಾಗಿ ಹರಿದುಹೋಗಲು ಸೂಕ್ತ ವ್ಯವಸ್ಥೆ ಇಲ್ಲದಿರುವುದು ಹಾಗೂ ಹಲವು ಚರಂಡಿಗಳು ಕಸ-ಕಡ್ಡಿಗಳಿಂದ ತುಂಬಿರುವುದರಿಂದ ನೀರು ರಸ್ತೆಗಳ ಮೇಲೆಯೇ ನಿಂತುಕೊಂಡಿತು. ಕೆಲವೆಡೆ ಚರಂಡಿಗಳ ಸಾಮರ್ಥ್ಯ ಮೀರಿ ನೀರು ಹರಿದುಬಂದ ಪರಿಣಾಮ ನಗರಸಭೆ ಕಚೇರಿ ಆವರಣಕ್ಕೂ ನೀರು ನುಗ್ಗಿತು.

ನಗರಸಭೆ ಕಚೇರಿಯ ಕೆಲವು ಕೊಠಡಿಗಳಿಗೆ ಮಳೆ ನೀರು ನುಗ್ಗಿದ್ದರಿಂದ ಅಲ್ಲಿನ ಸಿಬ್ಬಂದಿ ಹಾಗೂ ವಿವಿಧ ಕೆಲಸಗಳಿಗಾಗಿ ಕಚೇರಿಗೆ ಆಗಮಿಸಿದ್ದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದರು. ಕಚೇರಿಯೊಳಗೆ ನುಗ್ಗಿದ ನೀರನ್ನು ಹೊರಹಾಕಲು ಸಿಬ್ಬಂದಿ ಹರಸಾಹಸಪಟ್ಟರು. ದಾಖಲೆಗಳು ಹಾಗೂ ಕಚೇರಿ ಸಾಮಗ್ರಿಗಳಿಗೆ ಹಾನಿಯಾಗದಂತೆ ಸಿಬ್ಬಂದಿ ಮುನ್ನೆಚ್ಚರಿಕೆ ವಹಿಸಿದರು.

ಮಳೆ ಮುಂದುವರಿದ ಸಂದರ್ಭದಲ್ಲಿ ನಗರಸಭೆ ಸಿಬ್ಬಂದಿ ತುರ್ತು ಕಾರ್ಯಾಚರಣೆ ಕೈಗೊಂಡು ಕಚೇರಿ ಸುತ್ತಮುತ್ತಲಿನ ಚರಂಡಿಗಳನ್ನು ಸ್ವಚ್ಛಗೊಳಿಸಿದರು. ಚರಂಡಿಗಳಲ್ಲಿದ್ದ ಕಸ-ಕಡ್ಡಿಗಳನ್ನು ತೆರವುಗೊಳಿಸಿ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ಕ್ರಮ ಕೈಗೊಳ್ಳಲಾಯಿತು. ಇದರಿಂದ ಕೆಲ ಸಮಯದ ಬಳಿಕ ನೀರಿನ ಪ್ರಮಾಣ ಕಡಿಮೆಯಾಯಿತು.

ಆದರೆ, ಮಳೆ ನೀರು ಇಳಿದ ನಂತರವೂ ರಸ್ತೆ ಹಾಗೂ ನಗರಸಭೆ ಕಚೇರಿ ಆವರಣದಲ್ಲಿ ಕೆಸರು ತುಂಬಿಕೊಂಡಿದ್ದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಮುಂದುವರಿಯಿತು. ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಎಚ್ಚರಿಕೆಯಿಂದ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಚರಂಡಿಗಳ ಸಮರ್ಪಕ ನಿರ್ವಹಣೆ ಅಗತ್ಯ

ಪ್ರತಿ ಬಾರಿ ಭಾರೀ ಮಳೆಯಾದಾಗ ನಗರದ ವಿವಿಧ ಭಾಗಗಳಲ್ಲಿ ನೀರು ನಿಲ್ಲುತ್ತಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮಳೆಗಾಲಕ್ಕೂ ಮುನ್ನ ಚರಂಡಿಗಳ ಸಮರ್ಪಕ ಸ್ವಚ್ಛತೆ, ಹೂಳು ತೆರವು ಹಾಗೂ ನೀರು ಹರಿಯುವ ಮಾರ್ಗಗಳ ಪರಿಶೀಲನೆ ನಡೆಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ನಗರದ ಪ್ರಮುಖ ಪ್ರದೇಶಗಳಲ್ಲಿ ಮಳೆ ನೀರು ನಿಲ್ಲದಂತೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಚರಂಡಿಗಳ ಸಾಮರ್ಥ್ಯ ಹೆಚ್ಚಿಸುವುದು, ಅಕ್ರಮವಾಗಿ ಮುಚ್ಚಲ್ಪಟ್ಟಿರುವ ಚರಂಡಿ ಮಾರ್ಗಗಳನ್ನು ತೆರವುಗೊಳಿಸುವುದು ಹಾಗೂ ಮಳೆ ನೀರು ಸರಾಗವಾಗಿ ಹರಿಯುವಂತೆ ಸೂಕ್ತ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಅಗತ್ಯವಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ನಗರಸಭೆ ವ್ಯಾಪ್ತಿಯಲ್ಲಿ ಇನ್ನಷ್ಟು ಮಳೆ ನೀರು ನಿರ್ವಹಣಾ ಕಾಮಗಾರಿಗಳನ್ನು ಕೈಗೊಂಡು, ಭವಿಷ್ಯದಲ್ಲಿ ಇಂತಹ ಸಮಸ್ಯೆ ಮರುಕಳಿಸದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿ ರಾಘವೇಂದ್ರ ತಂಬರೆ ಒತ್ತಾಯಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande