
ನವದೆಹಲಿ, 24 ಅಕ್ಟೋಬರ್ (ಹಿ.ಸ.):
ಭಾರತ ಮತ್ತು ಲಿಕ್ಟೆನ್ಸ್ಟೈನ್ ನಡುವಿನ ವ್ಯಾಪಾರ, ಹೂಡಿಕೆ, ವಿಜ್ಞಾನ, ತಂತ್ರಜ್ಞಾನ ಹಾಗೂ ನಾವೀನ್ಯತೆ ಕ್ಷೇತ್ರಗಳಲ್ಲಿನ ಸಹಕಾರವನ್ನು ಹೆಚ್ಚಿಸುವ ಉದ್ದೇಶದಿಂದ ಲಿಕ್ಟೆನ್ಸ್ಟೈನ್ ಯುವರಾಜ ಅಲೋಯಿಸ್ ಅವರು ಅಕ್ಟೋಬರ್ 25ರಿಂದ ನಾಲ್ಕು ದಿನಗಳ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ನಡೆಯುತ್ತಿರುವ ಈ ಭೇಟಿಯ ಸಂದರ್ಭದಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಕುರಿತು ಚರ್ಚೆ ನಡೆಯಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶನಿವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಲಿಕ್ಟೆನ್ಸ್ಟೈನ್ ಸಂಸ್ಥಾನದ ಹಂಗಾಮಿ ರಾಷ್ಟ್ರಮುಖ್ಯಸ್ಥರಾಗಿರುವ ಯುವರಾಜ ಅಲೋಯಿಸ್ ಅವರು ಅಕ್ಟೋಬರ್ 25ರಿಂದ 28ರವರೆಗೆ ಭಾರತದಲ್ಲಿರಲಿದ್ದಾರೆ. ಅವರೊಂದಿಗೆ ಪತ್ನಿ ಸೋಫಿ, ಹಿರಿಯ ಅಧಿಕಾರಿಗಳು ಹಾಗೂ ಪ್ರಮುಖ ಉದ್ಯಮಿಗಳನ್ನು ಒಳಗೊಂಡ ವ್ಯಾಪಾರ ನಿಯೋಗವೂ ಆಗಮಿಸಲಿದೆ.
2026ರಲ್ಲಿ ಯುವರಾಜ ಅಲೋಯಿಸ್ ಅವರು ಭಾರತಕ್ಕೆ ಭೇಟಿ ನೀಡುತ್ತಿರುವುದು ಇದು ಎರಡನೇ ಬಾರಿ. ಈ ಹಿಂದೆ ಫೆಬ್ರವರಿಯಲ್ಲಿ ನವದೆಹಲಿಯಲ್ಲಿ ನಡೆದ ಕೃತಕ ಬುದ್ಧಿಮತ್ತೆ ಪರಿಣಾಮ ಶೃಂಗಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಆಗಮಿಸಿದ್ದರು. ಇದಕ್ಕೂ ಮೊದಲು 2010 ಮತ್ತು 2018ರಲ್ಲಿಯೂ ಭಾರತಕ್ಕೆ ಭೇಟಿ ನೀಡಿದ್ದರು.
ಪ್ರಧಾನಿ ಮೋದಿ, ರಾಷ್ಟ್ರಪತಿ ಮುರ್ಮು ಜತೆ ಮಾತುಕತೆ
ಭಾರತ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಯುವರಾಜ ಅಲೋಯಿಸ್ ನಡುವೆ ದ್ವಿಪಕ್ಷೀಯ ಸಭೆ ನಡೆಯಲಿದೆ. ವ್ಯಾಪಾರ ಮತ್ತು ಹೂಡಿಕೆ, ವಿಜ್ಞಾನ, ತಂತ್ರಜ್ಞಾನ, ನಾವೀನ್ಯತೆ ಹಾಗೂ ಎರಡೂ ದೇಶಗಳ ಜನರ ನಡುವಿನ ಸಂಪರ್ಕ ವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸುವ ಕುರಿತು ಚರ್ಚಿಸಲಾಗುತ್ತದೆ. ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಬಗ್ಗೆಯೂ ಉಭಯ ನಾಯಕರು ವಿಚಾರ ವಿನಿಮಯ ಮಾಡಿಕೊಳ್ಳಲಿದ್ದಾರೆ.
ಯುವರಾಜ ಅಲೋಯಿಸ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಲಿದ್ದಾರೆ. ಅವರ ಗೌರವಾರ್ಥ ರಾಷ್ಟ್ರಪತಿಗಳು ಅಧಿಕೃತ ಔತಣಕೂಟ ಆಯೋಜಿಸಲಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರೂ ಯುವರಾಜರನ್ನು ಭೇಟಿಯಾಗಲಿದ್ದಾರೆ.
ವ್ಯಾಪಾರ ಒಪ್ಪಂದದಿಂದ ಸಂಬಂಧಕ್ಕೆ ಮತ್ತಷ್ಟು ಬಲ
ಭಾರತ ಮತ್ತು ಯುರೋಪಿಯನ್ ಮುಕ್ತ ವ್ಯಾಪಾರ ಸಂಘದ ನಡುವಿನ ವ್ಯಾಪಾರ ಮತ್ತು ಆರ್ಥಿಕ ಪಾಲುದಾರಿಕೆ ಒಪ್ಪಂದವು 2025ರಲ್ಲಿ ಜಾರಿಗೆ ಬಂದ ಬಳಿಕ ಭಾರತ ಮತ್ತು ಲಿಕ್ಟೆನ್ಸ್ಟೈನ್ ನಡುವಿನ ದ್ವಿಪಕ್ಷೀಯ ಸಂಬಂಧಗಳಿಗೆ ಹೆಚ್ಚಿನ ವೇಗ ದೊರೆತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಯುವರಾಜ ಅಲೋಯಿಸ್ ಅವರ ಭೇಟಿಯು ಉಭಯ ದೇಶಗಳ ನಡುವಿನ ಹೆಚ್ಚುತ್ತಿರುವ ಸಹಕಾರಕ್ಕೆ ಮತ್ತಷ್ಟು ಉತ್ತೇಜನ ನೀಡುವ ನಿರೀಕ್ಷೆಯಿದೆ. ಸ್ನೇಹಪರ ಸಂಬಂಧಗಳನ್ನು ಗಾಢಗೊಳಿಸುವುದರ ಜೊತೆಗೆ ಪರಸ್ಪರ ಹಿತಾಸಕ್ತಿಯ ಹೊಸ ಕ್ಷೇತ್ರಗಳಲ್ಲಿ ಪಾಲುದಾರಿಕೆಯ ಅವಕಾಶಗಳನ್ನು ಅನ್ವೇಷಿಸುವುದು ಈ ಭೇಟಿಯ ಪ್ರಮುಖ ಉದ್ದೇಶವಾಗಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.