ಧಾರವಾಡದಲ್ಲಿ ಬೆತ್ತಲೆಯಾಗಿ ಯುವತಿಯರ ಪಿಜಿಗಳಿಗೆ ನುಗ್ಗಿ ಕಿರುಕುಳ: ಆರೋಪ
ಸಪ್ತಾಪುರದಲ್ಲಿ ಮೂರು ತಿಂಗಳಿಂದ ಅಸಭ್ಯ ವರ್ತನೆ; ಸಿಸಿಟಿವಿಯಲ್ಲಿ ದೃಶ್ಯ ಸೆರೆ, ಆರೋಪಿಯ ಬಂಧನಕ್ಕೆ ಆಗ್ರಹ
Dharwad Man Accused of Entering Women’s PGs Naked and Harassing Residents


ಧಾರವಾಡ, 24 ಅಕ್ಟೋಬರ್ (ಹಿ.ಸ.):

ಧಾರವಾಡದ ಸಪ್ತಾಪುರ ಪ್ರದೇಶದಲ್ಲಿ ಯುವತಿಯರು ವಾಸಿಸುವ ಪಿಜಿಗಳಿಗೆ ವ್ಯಕ್ತಿಯೊಬ್ಬ ಬೆತ್ತಲೆಯಾಗಿ ನುಗ್ಗಿ ಅಸಭ್ಯವಾಗಿ ವರ್ತಿಸುತ್ತಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಕಳೆದ ಮೂರು ತಿಂಗಳಿಂದ ಈ ರೀತಿಯ ಕಿರುಕುಳ ನೀಡಲಾಗುತ್ತಿದೆ ಎಂದು ಪಿಜಿಯಲ್ಲಿ ವಾಸಿಸುವ ಯುವತಿಯರು ಆರೋಪಿಸಿದ್ದು, ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ರಾತ್ರಿ ವೇಳೆ ಬೆತ್ತಲೆಯಾಗಿ ಯುವತಿಯರ ಪಿಜಿಗಳಿಗೆ ನುಗ್ಗುವ ವ್ಯಕ್ತಿ, ಯುವತಿಯರ ಮುಂದೆ ಅಸಭ್ಯವಾಗಿ ವರ್ತಿಸುತ್ತಿದ್ದಾನೆ ಎನ್ನಲಾಗಿದೆ. ಅಲ್ಲದೆ, ಪಿಜಿಗಳ ಹೊರಭಾಗದಲ್ಲಿ ಒಣಗಲು ಹಾಕಿರುವ ಯುವತಿಯರ ಒಳ ಉಡುಪುಗಳನ್ನು ಕಳವು ಮಾಡುತ್ತಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.

ಚೀರಾಡದಂತೆ ಬೆದರಿಕೆ ಹಾಕಿದ ಆರೋಪ

ಪಿಜಿಗಳಿಗೆ ನುಗ್ಗುವ ವ್ಯಕ್ತಿ ಯುವತಿಯರಿಗೆ ಚೀರಾಡದಂತೆ ಎಚ್ಚರಿಕೆ ನೀಡಿ ಬೆದರಿಕೆ ಹಾಕುತ್ತಿದ್ದಾನೆ ಎಂದು ಆರೋಪಿಸಲಾಗಿದೆ. ಮುಖದ ಗುರುತು ಪತ್ತೆಯಾಗದಂತೆ ಬಂದು ಕಿರುಕುಳ ನೀಡುತ್ತಿದ್ದಾನೆ ಎನ್ನಲಾಗಿದ್ದು, ಆತನ ಅಸಭ್ಯ ವರ್ತನೆಯ ದೃಶ್ಯಗಳು ಪಿಜಿಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ ಎಂದು ತಿಳಿದುಬಂದಿದೆ.

ನಿರಂತರ ಕಿರುಕುಳದಿಂದ ಬೇಸತ್ತಿರುವ ಪಿಜಿ ನಿವಾಸಿ ಯುವತಿಯರು, ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ಸಂಬಂಧಪಟ್ಟ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕು. ಯುವತಿಯರ ಸುರಕ್ಷತೆಗೆ ಸೂಕ್ತ ಕ್ರಮಗಳನ್ನು ಕೈಗೊಂಡು, ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಪೊಲೀಸರ ಕ್ರಮಕ್ಕೆ ಆಗ್ರಹ

ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಯುವತಿಯರ ವಸತಿ ನಿಲಯಗಳ ಸುರಕ್ಷತೆ ಕುರಿತು ಆತಂಕ ವ್ಯಕ್ತವಾಗಿದೆ. ಪ್ರಕರಣದ ಕುರಿತು ಪೊಲೀಸರ ಅಧಿಕೃತ ಪ್ರತಿಕ್ರಿಯೆ ಹಾಗೂ ಆರೋಪಿಯ ಬಂಧನದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಯುವತಿಯರ ಸುರಕ್ಷತೆಯ ದೃಷ್ಟಿಯಿಂದ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಯನ್ನು ಪತ್ತೆಹಚ್ಚಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande