
ಧಾರವಾಡ, 24 ಅಕ್ಟೋಬರ್ (ಹಿ.ಸ.):
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾಯಿಯೊಬ್ಬರು ತಮ್ಮ ಮೂವರು ಮಕ್ಕಳಿಗೆ ವಿಷಪ್ರಾಶನ ಮಾಡಿಸಿ, ಬಳಿಕ ತಾವೂ ವಿಷ ಸೇವಿಸಿರುವ ಘಟನೆ ಧಾರವಾಡ ಜಿಲ್ಲೆಯ ಕರಡಿಗುಡ್ಡ ಗ್ರಾಮದಲ್ಲಿ ನಡೆದಿದೆ.
ಘಟನೆಯಲ್ಲಿ 11 ವರ್ಷದ ಬಾಲಕಿ ನಿವೇದಿತಾ ಮೃತಪಟ್ಟಿದ್ದು, ತಾಯಿ ಸವೀತಾ ಹಾಗೂ ನಾಲ್ಕು ವರ್ಷದ ಭಾಗ್ಯಶ್ರೀ ಮತ್ತು ಎರಡು ವರ್ಷದ ಹರ್ಷಿತಾ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕರಡಿಗುಡ್ಡ ಗ್ರಾಮದ ಮಲ್ಲಿಕಾರ್ಜುನ ಕುರಗುಂದ ಅವರು ಧಾರವಾಡ ಮಹಾನಗರ ಪಾಲಿಕೆಯಲ್ಲಿ ಟ್ರ್ಯಾಕ್ಟರ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಕೆಲಸದ ನಿಮಿತ್ತ ಬೆಳಗ್ಗೆ ಮನೆಯಿಂದ ಹೊರಹೋಗುತ್ತಿದ್ದರು. ಮನೆಯಲ್ಲಿ ಪತ್ನಿ ಸವೀತಾ ಹಾಗೂ ಮೂವರು ಮಕ್ಕಳು ವಾಸವಾಗಿದ್ದರು.
ಈ ಕುಟುಂಬದಲ್ಲಿ ಆಗಾಗ್ಗೆ ಕೌಟುಂಬಿಕ ಕಲಹ ನಡೆಯುತ್ತಿತ್ತು ಎನ್ನಲಾಗಿದೆ. ಇದೇ ಕಲಹದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ಜಮೀನು ವಿವಾದದ ಶಂಕೆ
ಘಟನೆಗೆ ಕೌಟುಂಬಿಕ ಕಲಹದ ಜೊತೆಗೆ ಜಮೀನು ವಿವಾದವೂ ಕಾರಣವಾಗಿರಬಹುದು ಎಂಬ ಆರೋಪ ಕೇಳಿಬಂದಿದೆ. ಮಲ್ಲಿಕಾರ್ಜುನ ಅವರಿಗೆ ಸೇರಿದ ಏಳು ಎಕರೆ ಜಮೀನನ್ನು ಅವರ ಅಕ್ಕ ಹಲವು ವರ್ಷಗಳ ಹಿಂದೆ ಸಹಿ ಪಡೆದು ಮಾರಾಟ ಮಾಡಿದ್ದಾರೆ ಎನ್ನಲಾಗಿದ್ದು, ಇದೇ ವಿಚಾರವಾಗಿ ಮಲ್ಲಿಕಾರ್ಜುನ ಮತ್ತು ಸವೀತಾ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ದೂರದ ಸಂಬಂಧಿಕರು ತಿಳಿಸಿದ್ದಾರೆ.
ಆದರೆ, ಜಮೀನು ಮಾರಾಟದ ವಿಚಾರ ಹಾಗೂ ಘಟನೆಗೆ ಅದರ ಸಂಬಂಧವಿದೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಈ ಕುರಿತು ಪೊಲೀಸ್ ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ.
ಪೊಲೀಸರಿಂದ ತನಿಖೆ
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು ಪ್ರಕರಣದ ವಿವರ ಕುರಿತು ತನಿಖೆ ಮುಂದುವರೆದಿದೆ ಎಂದು ಮಾಹಿತಿ ನೀಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R