ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಕಾರ್ಯಾಚರಣೆ ರಾಜಕಾರಣಕ್ಕೆ ನಾಚಿಕೆಗೇಡು: ಬಸವರಾಜ ಹೊರಟ್ಟಿ
ಹುಬ್ಬಳ್ಳಿ, 23 ಅಕ್ಟೋಬರ್ (ಹಿ.ಸ.): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಗೆ ಧಕ್ಕೆ ತರಲು ಕೆಲವರು ವಿಡಿಯೊ ಮಾಡಿ ಪೆನ್‌ಡ್ರೈವ್ ಮುಂದಿಟ್ಟುಕೊಂಡು ಬೆದರಿಸಿರಬಹುದು ಅಥವಾ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ವಿಡಿಯೊ ಸೃಷ್ಟಿಸಿರಬಹುದು. ಇಂತಹ ಕೃತ್ಯಗಳು ರಾಜಕಾರಣಕ್ಕೆ ನಾಚಿಕೆ ತರುವಂತಿವ
ಹುಬ್ಬಳ್ಳಿಯಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಬಸವರಾಜ ಹೊರಟ್ಟಿ


ಹುಬ್ಬಳ್ಳಿ, 23 ಅಕ್ಟೋಬರ್ (ಹಿ.ಸ.):

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಗೆ ಧಕ್ಕೆ ತರಲು ಕೆಲವರು ವಿಡಿಯೊ ಮಾಡಿ ಪೆನ್‌ಡ್ರೈವ್ ಮುಂದಿಟ್ಟುಕೊಂಡು ಬೆದರಿಸಿರಬಹುದು ಅಥವಾ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ವಿಡಿಯೊ ಸೃಷ್ಟಿಸಿರಬಹುದು. ಇಂತಹ ಕೃತ್ಯಗಳು ರಾಜಕಾರಣಕ್ಕೆ ನಾಚಿಕೆ ತರುವಂತಿವೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರನ್ನು ಜೈಲಿಗೆ ಕಳುಹಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಒತ್ತಾಯಿಸಿದರು.

ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ನಗರದ ಫಾತಿಮಾ ಪ್ರೌಢಶಾಲೆಯ ಮತಗಟ್ಟೆಯಲ್ಲಿ ಶುಕ್ರವಾರ ಮತದಾನ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಶ್ರೇಷ್ಠ ರಾಜಕಾರಣಿಯಾಗಿದ್ದು, ಅವರ ಹೆಸರಿಗೆ ಮಸಿ ಬಳಿಯುವ ಪ್ರಯತ್ನಗಳು ನಡೆದಿದ್ದರೆ ಅವುಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿಗಳ ಆಡಳಿತವನ್ನು ಸ್ಮರಿಸಿದ ಹೊರಟ್ಟಿ, ಕೆಂಗಲ್ ಹನುಮಂತಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನಲ್ಲಿ ವಿಧಾನಸೌಧ ನಿರ್ಮಿಸಿದರು. ರಾಮಕೃಷ್ಣ ಹೆಗಡೆ ಅವರು ಆಡಳಿತ ವಿಕೇಂದ್ರೀಕರಣಕ್ಕೆ ಒತ್ತು ನೀಡಿದರು. ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಸಿದರು. ಆದರೆ, ಈಗಿನ ಸರ್ಕಾರ ಸ್ಟಿಂಗ್ ಕಾರ್ಯಾಚರಣೆ ನಡೆಸುತ್ತಿದೆ ಎಂದು ವ್ಯಂಗ್ಯವಾಡಿದರು.

ಇತ್ತೀಚಿನ ದಿನಗಳಲ್ಲಿ ವಿಧಾನ ಪರಿಷತ್ತಿನ ಘನತೆ ಕುಸಿಯುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಹಿಂದೆ ವಿಧಾನ ಪರಿಷತ್ತಿಗೆ ಮುತ್ಸದ್ಧಿಗಳು ಆಯ್ಕೆಯಾಗಿ ಬರುತ್ತಿದ್ದರು. ಆದರೆ, ಈಗ ಪರಿಷತ್ತು ಕೂಡ ವಿಧಾನಸಭೆಯಂತೆಯೇ ಆಗಿದೆ ಎಂದು ಅಭಿಪ್ರಾಯಪಟ್ಟರು.

ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುವ ಅಭ್ಯರ್ಥಿಗಳು ಹಣ ನೀಡಿ ಮತಗಳನ್ನು ಪಡೆದು ಆಯ್ಕೆಯಾಗುತ್ತಿರುವುದು ನೋವಿನ ಸಂಗತಿ. ಶಿಕ್ಷಕರು ಇಂತಹ ಆಮಿಷಗಳಿಗೆ ಒಳಗಾಗದೆ ಯೋಗ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಪ್ರತಿ ಬಾರಿಯೂ ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ನೋಂದಾಯಿಸಿಕೊಳ್ಳುವ ವ್ಯವಸ್ಥೆಯ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದರು. ಒಮ್ಮೆ ಪದವಿ ಪಡೆದವರು ಜೀವನಪೂರ್ತಿ ಪದವೀಧರರಾಗಿಯೇ ಇರುತ್ತಾರೆ. ಆದ್ದರಿಂದ ಚುನಾವಣೆಯ ಸಂದರ್ಭದಲ್ಲಿ ಹೊಸದಾಗಿ ಹೆಸರು ಸೇರ್ಪಡೆ ಮಾಡಿಕೊಳ್ಳಲು ಅವಕಾಶ ನೀಡಬೇಕೇ ಹೊರತು, ಪ್ರತಿ ಚುನಾವಣೆಯಲ್ಲೂ ಹೊಸದಾಗಿ ನೋಂದಣಿ ಮಾಡಿಕೊಳ್ಳುವ ವ್ಯವಸ್ಥೆ ಇರಬಾರದು ಎಂದು ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande