
ಬಳ್ಳಾರಿ, 23 ಅಕ್ಟೋಬರ್ (ಹಿ.ಸ.)
ಮಕ್ಕಳ ಹಕ್ಕುಗಳ ರಕ್ಷಣೆ, ವೈಯಕ್ತಿಕ ಸುರಕ್ಷತೆ ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟುವ ಉದ್ದೇಶದಿಂದ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಬಳ್ಳಾರಿ ಜಿಲ್ಲೆಯಲ್ಲಿ ಅಕ್ಟೋಬರ್ 26 ರಿಂದ 31 ರವರೆಗೆ ವಾರ ಪೂರ್ತಿ “ಸುರಕ್ಷಿತ ಬಚ್ಪನ್ ಅಭಿಯಾನ”ವನ್ನು ಆಯೋಜಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ರಾಜೇಶ್ ಎನ್. ಹೊಸಮನೆ ಅವರು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಈ ಜಾಗೃತಿ ಅಭಿಯಾನವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದ್ದಾರೆ.
*ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳು:*
ಅಭಿಯಾನದ ಅಂಗವಾಗಿ ಜಿಲ್ಲೆಯ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಮಕ್ಕಳ ಲೈಂಗಿಕ ಅಪರಾಧಗಳಿಂದ ರಕ್ಷಣೆ ಕಾಯ್ದೆ-2012, ಮಕ್ಕಳ ಹಕ್ಕುಗಳು, ವೈಯಕ್ತಿಕ ಮತ್ತು ಅಂತರ್ಜಾಲ ಸುರಕ್ಷತೆ ಕುರಿತು ಅರಿವು ಮೂಡಿಸಲಾಗುತ್ತದೆ. ಅಲ್ಲದೆ, ದೌರ್ಜನ್ಯಗಳು ಸಂಭವಿಸಿದಾಗ ದೂರು ದಾಖಲಿಸುವ ವಿಧಾನಗಳು, ಉಚಿತ ಕಾನೂನು ನೆರವು ಹಾಗೂ ಮಕ್ಕಳ ರಕ್ಷಣಾ ಸೇವೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗುತ್ತದೆ.
ಈ ಕಾರ್ಯಕ್ರಮಗಳಲ್ಲಿ ನ್ಯಾಯಾಧೀಶರು, ಪ್ಯಾನಲ್ ವಕೀಲರು, ಪ್ಯಾರಾ ಲೀಗಲ್ ಸ್ವಯಂಸೇವಕರು, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ ಹಾಗೂ ವಿಶೇಷ ಬಾಲ ಪೊಲೀಸ್ ಘಟಕದ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಗ್ರಾಮೀಣ ಭಾಗದ ಕಾರ್ಯಕ್ರಮಗಳಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಅವರುಗಳು ಭಾಗವಹಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲಿದ್ದಾರೆ.
*ಅಭಿಯಾನದ ಪ್ರಮುಖ ಉದ್ದೇಶಗಳು:*
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟುವುದು. ಪೋಕ್ಸೊ ಕಾಯ್ದೆಯಡಿ ಮಕ್ಕಳಿಗೆ ಸಿಗುವ ಕಾನೂನು ರಕ್ಷಣೆ ಹಾಗೂ ಹಕ್ಕುಗಳ ಬಗ್ಗೆ ತಿಳಿಸುವುದು. ಮಕ್ಕಳ ವೈಯಕ್ತಿಕ ಹಾಗೂ ಆನ್ಲೈನ್/ಅಂತರ್ಜಾಲ ಸುರಕ್ಷತೆ ಬಗ್ಗೆ ಎಚ್ಚರಿಕೆ ಮೂಡಿಸುವುದು. ತುರ್ತು ಸಂದರ್ಭಗಳಲ್ಲಿ ಸಹಾಯವಾಣಿ ಮತ್ತು ದೂರು ಸಲ್ಲಿಸುವ ವ್ಯವಸ್ಥೆಗಳ ಬಗ್ಗೆ ಜಾಗೃತಿ ಮೂಡಿಸುವುದು. ಮಕ್ಕಳಿಗೆ ಉಚಿತ ಕಾನೂನು ನೆರವು ಮತ್ತು ರಕ್ಷಣಾ ಸೇವೆಗಳನ್ನು ಒದಗಿಸುವುದು ಹಾಗೂ ಪೋಷಕರು ಮತ್ತು ಶಿಕ್ಷಕರ ಜವಾಬ್ದಾರಿಯನ್ನು ಬಲಪಡಿಸುವುದು.
‘ಪ್ರತಿಯೊಂದು ಮಗುವಿನ ಬಾಲ್ಯವನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ’ ಎಂಬ ಸಂದೇಶ ಸಮಾಜಕ್ಕೆ ತಲುಪಬೇಕಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕರು ಅಭಿಯಾನಕ್ಕೆ ಕೈಜೋಡಿಸಬೇಕೆಂದು ಅವರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್