
ಬೆಂಗಳೂರು, 23 ಅಕ್ಟೋಬರ್ (ಹಿ.ಸ.):
ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್)-2026ರ ಭಾಗವಾಗಿ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಫಾರಂ-7 ಮೂಲಕ ಒಟ್ಟು 2,28,917 ಆಕ್ಷೇಪಣೆ ಹಾಗೂ ಅರ್ಜಿಗಳು ಸಲ್ಲಿಕೆಯಾಗಿವೆ. ಅಕ್ಟೋಬರ್ 22ರ ಅಂತ್ಯಕ್ಕೆ ಈ ಪ್ರಮಾಣ ದಾಖಲಾಗಿದ್ದು, ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲು ಚುನಾವಣಾ ಆಯೋಗ ಸಿದ್ಧತೆ ನಡೆಸಿದೆ.
ಈ ಕುರಿತು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಮಾಧ್ಯಮ ಪ್ರಕಟಣೆ ನೀಡಿದ್ದು, ಸೆಪ್ಟೆಂಬರ್ 23ರ ಗಡುವಿನೊಳಗೆ ಸಲ್ಲಿಕೆಯಾಗಿದ್ದ 58,475 ಅರ್ಜಿಗಳನ್ನು ಆದ್ಯತೆ ಮೇರೆಗೆ ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಿದೆ.
ಬೆಂಗಳೂರಿನಲ್ಲಿ ಅತಿ ಹೆಚ್ಚು ಅರ್ಜಿಗಳು
ಫಾರಂ-7 ಅರ್ಜಿಗಳ ಸಲ್ಲಿಕೆಯಲ್ಲಿ ಬೆಂಗಳೂರು ನಗರ ಮೊದಲ ಸ್ಥಾನದಲ್ಲಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 24,268 ಅರ್ಜಿಗಳು ಸಲ್ಲಿಕೆಯಾಗಿದ್ದರೆ, ಬಿಬಿಎಂಪಿ ದಕ್ಷಿಣ ವ್ಯಾಪ್ತಿಯಲ್ಲಿ 19,662 ಹಾಗೂ ಬಿಬಿಎಂಪಿ ಉತ್ತರ ವ್ಯಾಪ್ತಿಯಲ್ಲಿ 18,659 ಅರ್ಜಿಗಳು ದಾಖಲಾಗಿವೆ.
ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಆಕ್ಷೇಪಣೆಗಳ ಪರಿಶೀಲನೆ ಹಾಗೂ ಅರ್ಜಿಗಳ ವಿಲೇವಾರಿಗೆ ಚುನಾವಣಾ ಅಧಿಕಾರಿಗಳು ಆದ್ಯತೆ ನೀಡುತ್ತಿದ್ದಾರೆ.
43.82 ಲಕ್ಷ ನೋಟಿಸ್ಗಳ ವಿಚಾರಣೆ ಪೂರ್ಣ
ರಾಜ್ಯಾದ್ಯಂತ ಚುನಾವಣಾ ಪ್ರಕ್ರಿಯೆಯ ಭಾಗವಾಗಿ ನೀಡಲಾಗಿದ್ದ 43,82,824 ನೋಟಿಸ್ಗಳ ವಿತರಣೆ, ವಿಚಾರಣೆ ಹಾಗೂ ಸಂಬಂಧಿತ ಪ್ರಕ್ರಿಯೆಗಳನ್ನು ಶೇ 100ರಷ್ಟು ಪೂರ್ಣಗೊಳಿಸಲಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. ಈ ಎಲ್ಲ ನೋಟಿಸ್ಗಳ ವಿಚಾರಣೆ ಪೂರ್ಣಗೊಂಡಿದ್ದು, ಯಾವುದೇ ವಿಚಾರಣೆ ಬಾಕಿ ಉಳಿದಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಬೆಂಗಳೂರು ನಗರ ಮತ್ತು ಬಿಬಿಎಂಪಿ ವ್ಯಾಪ್ತಿಯ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ 24 ಲಕ್ಷಕ್ಕೂ ಅಧಿಕ ನೋಟಿಸ್ಗಳಿಗೆ ಸಂಬಂಧಿಸಿದ ಪ್ರಕ್ರಿಯೆಗಳು ನಡೆದಿವೆ.
ಅ.27ರಂದು ಅಂತಿಮ ಪಟ್ಟಿ ಪ್ರಕಟ
ಭಾರತೀಯ ಚುನಾವಣಾ ಆಯೋಗದ ಪರಿಷ್ಕರಣೆ ವೇಳಾಪಟ್ಟಿಯ ಪ್ರಕಾರ, 2026ರ ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 27ರಂದು ಪ್ರಕಟಿಸಲಾಗುತ್ತದೆ. ಮತದಾರರ ನೋಂದಣಿ ಪ್ರಕ್ರಿಯೆ ಮುಂದುವರಿಯಲಿದ್ದು, ಅರ್ಹ ನಾಗರಿಕರು ಹೊಸ ನೋಂದಣಿ, ತಿದ್ದುಪಡಿ ಹಾಗೂ ಇತರ ಅಗತ್ಯ ಪ್ರಕ್ರಿಯೆಗಳಿಗೆ ಅರ್ಜಿ ಸಲ್ಲಿಸಬಹುದು.
ಇದಕ್ಕಾಗಿ ಚುನಾವಣಾ ಆಯೋಗದ ECINET ಆ್ಯಪ್, [voters.eci.gov.in](https://voters.eci.gov. ವೆಬ್ಸೈಟ್ ಅಥವಾ ಸ್ಥಳೀಯ ಬೂತ್ ಮಟ್ಟದ ಅಧಿಕಾರಿಗಳನ್ನು (ಬಿಎಲ್ಒ) ಹಾಗೂ ಚುನಾವಣಾ ನೋಂದಣಾಧಿಕಾರಿಗಳ (ಇಆರ್ಒ) ಕಚೇರಿಗಳನ್ನು ಸಂಪರ್ಕಿಸಬಹುದು ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R