ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅಂಚೆ ಇಲಾಖೆ ಸೇವೆ: ಡಿ.ಜಿ. ಮ್ಯಾಗೇರಿ
ಗದಗ, 23 ಅಕ್ಟೋಬರ್ (ಹಿ.ಸ.) ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿವಿಧ ಸೇವೆಗಳನ್ನು ಅಂಚೆ ಇಲಾಖೆಯ ಮೂಲಕ ಜನರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಡಾಕ್ ಚೌಪಾಲ್ ಅಭಿಯಾನ ಆರಂಭಿಸಲಾಗಿದೆ ಎಂದು ಪ್ರಧಾನ ಅಂಚೆ ಪಾಲಕ ಡಿ.ಜಿ. ಮ್ಯಾಗೇರಿ ಹೇಳಿದರು. ನಗರದ ಪ್ರಧಾನ ಅಂಚೆ ಕಚೇರಿ ಆವರಣದಲ್ಲಿ ಸಸಿ ನೆಡುವ ಮೂಲ
ಫೋಟೋ


ಗದಗ, 23 ಅಕ್ಟೋಬರ್ (ಹಿ.ಸ.) ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿವಿಧ ಸೇವೆಗಳನ್ನು ಅಂಚೆ ಇಲಾಖೆಯ ಮೂಲಕ ಜನರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಡಾಕ್ ಚೌಪಾಲ್ ಅಭಿಯಾನ ಆರಂಭಿಸಲಾಗಿದೆ ಎಂದು ಪ್ರಧಾನ ಅಂಚೆ ಪಾಲಕ ಡಿ.ಜಿ. ಮ್ಯಾಗೇರಿ ಹೇಳಿದರು.

ನಗರದ ಪ್ರಧಾನ ಅಂಚೆ ಕಚೇರಿ ಆವರಣದಲ್ಲಿ ಸಸಿ ನೆಡುವ ಮೂಲಕ ಡಾಕ್ ಚೌಪಾಲ್ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗ್ರಾಹಕರ ನಿರೀಕ್ಷೆಗೆ ತಕ್ಕಂತೆ ಸೇವೆಗಳನ್ನು ಒದಗಿಸುವುದರಿಂದ ಜನರು ತಮ್ಮ ದೈನಂದಿನ ಅಗತ್ಯಗಳಿಗೆ ಅಂಚೆ ಇಲಾಖೆಯ ಸೇವೆಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದು. ಅಂಚೆ ಇಲಾಖೆ ಕೇವಲ ಪತ್ರ ವ್ಯವಹಾರಕ್ಕೆ ಸೀಮಿತವಾಗಿಲ್ಲ. ಬ್ಯಾಂಕಿಂಗ್ ಸೇವೆಗಳು, ಉಳಿತಾಯ ಯೋಜನೆಗಳು, ವಿಮೆ, ಪಿಂಚಣಿ ವಿತರಣೆ, ಆನ್ಲೈನ್ ಪಾವತಿ ಹಾಗೂ ಪಾರ್ಸೆಲ್ ವಿತರಣೆ ಸೇರಿದಂತೆ ಹಲವು ಸೇವೆಗಳನ್ನು ಒದಗಿಸುತ್ತಿದೆ. ಸಾರ್ವಜನಿಕರು ಈ ಸೇವೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ವಿದ್ಯುನ್ಮಾನ ಹಣಕಾಸು ವಹಿವಾಟಿನ ಕ್ಷೇತ್ರದಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಮಹತ್ವದ ಪಾತ್ರ ವಹಿಸುತ್ತಿದೆ. ಡಿಜಿಟಲ್ ವಹಿವಾಟು ಹಾಗೂ ನೇರ ನಗದು ವರ್ಗಾವಣೆ (ಡಿಬಿಟಿ) ಸೇವೆಗಳ ಮೂಲಕ ಜನರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ. ಅಂಚೆ ಇಲಾಖೆಯ ಸೇವೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಎಂಬುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ಡಾಕ್ ಚೌಪಾಲ್ ಅಭಿಯಾನದ ಅಂಗವಾಗಿ ಜಿಲ್ಲೆಯ ವಿವಿಧ ಅಂಚೆ ಕಚೇರಿಗಳಲ್ಲಿ ಜನಸಂಪರ್ಕ ಅಭಿಯಾನ, ಸ್ವಚ್ಛತಾ ಕಾರ್ಯಕ್ರಮ, ರಕ್ತದಾನ ಶಿಬಿರ ಹಾಗೂ ಸಸಿ ನೆಡುವ ಕಾರ್ಯಕ್ರಮ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಉಪ ಅಂಚೆ ಪಾಲಕರಾದ ವಾಣಿ ಯಳಗಂಟಿ, ಮಂಜುನಾಥ ಪಾಮೇನಹಳ್ಳಿ, ವೆಂಕಟೇಶ ಆಕಳವಾಡಿ, ಶರಣಪ್ಪ ಬೆನಾಳ, ಅಂಕಿತಕುಮಾರ, ಕವಿತಾ ರಡ್ಡೇರ, ಸೌಮ್ಯ ಹುಯಿಲಗೋಳ, ವಿನೋತಾ ಕಪ್ಪತ್ತನವರ, ಸಿದ್ಧಲಿಂಗೇಶ ಯಂಡಿಗೇರಿ, ರವಿ ಜಾಧವ, ಮಂಜುನಾಥ ಟಿ., ಶಿವಯ್ಯ ಪೂಜಾರ, ಪ್ರಕಾಶ ಬಿ. ಸೇರಿದಂತೆ ಅಂಚೆ ಇಲಾಖೆಯ ಸಿಬ್ಬಂದಿ ಪಾಲ್ಗೊಂಡಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande