
ಬೆಂಗಳೂರು, 23 ಅಕ್ಟೋಬರ್ (ಹಿ.ಸ.):
ಕರ್ನಾಟಕ ವಿಧಾನ ಪರಿಷತ್ತಿನ ಎರಡು ಪದವೀಧರ ಹಾಗೂ ಎರಡು ಶಿಕ್ಷಕರ ಕ್ಷೇತ್ರಗಳ ಒಟ್ಟು ನಾಲ್ಕು ಸ್ಥಾನಗಳಿಗೆ ಶುಕ್ರವಾರ ನಡೆದ ಮತದಾನ ಸಂಜೆ 4 ಗಂಟೆಗೆ ಮುಕ್ತಾಯಗೊಂಡಿದೆ. ಆಗ್ನೇಯ ಪದವೀಧರ, ಪಶ್ಚಿಮ ಪದವೀಧರ, ಈಶಾನ್ಯ ಶಿಕ್ಷಕರ ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಮತಗಳ ಎಣಿಕೆ ಅಕ್ಟೋಬರ್ 27ರಂದು ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ.
ಬೆಳಿಗ್ಗೆ 8 ಗಂಟೆಗೆ ಆರಂಭವಾದ ಮತದಾನ ಸಂಜೆ 4 ಗಂಟೆಯವರೆಗೆ ನಡೆಯಿತು. ಈ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳ ನಡುವೆ ಸ್ಪರ್ಧೆ ನಡೆದಿದೆ.
ನಾಲ್ಕು ಕ್ಷೇತ್ರಗಳ ಪ್ರಮುಖ ಅಭ್ಯರ್ಥಿಗಳು
ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಕೆ.ಎಂ. ಸುರೇಶ್ ಹಾಗೂ ಕಾಂಗ್ರೆಸ್ನ ಶಶಿ ಹುಲಿಕುಂಟೆಮಠ ನಡುವೆ ಸ್ಪರ್ಧೆ ನಡೆದಿದೆ.
ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಎಸ್.ವಿ. ಸಂಕನೂರ ಹಾಗೂ ಕಾಂಗ್ರೆಸ್ನ ಮೋಹನ್ ಲಿಂಬಿಕಾಯಿ ಕಣದಲ್ಲಿದ್ದಾರೆ.
ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯ ಶಶಿಲ್ ಜಿ. ನಮೋಶಿ ಹಾಗೂ ಕಾಂಗ್ರೆಸ್ನ ಶರಣಪ್ಪ ಮಟ್ಟೂರು ಸ್ಪರ್ಧಿಸಿದ್ದಾರೆ.
ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ನ ಪುಟ್ಟಣ್ಣ ಹಾಗೂ ಜೆಡಿಎಸ್ನ ಎ.ಪಿ. ರಂಗನಾಥ್ ನಡುವೆ ಪೈಪೋಟಿ ನಡೆದಿದೆ.
ಅ.27ರಂದು ಮತ ಎಣಿಕೆ
ನಾಲ್ಕು ಕ್ಷೇತ್ರಗಳ ಮತ ಎಣಿಕೆ ಅಕ್ಟೋಬರ್ 27ರಂದು ನಡೆಯಲಿದೆ. ಅಂದೇ ಫಲಿತಾಂಶ ಪ್ರಕಟವಾಗಲಿದ್ದು, ಪದವೀಧರರು ಮತ್ತು ಶಿಕ್ಷಕರು ನೀಡಿರುವ ತೀರ್ಪು ಏನೆಂಬುದು ಸ್ಪಷ್ಟವಾಗಲಿದೆ. ನಾಲ್ವರು ಹಾಲಿ ಸದಸ್ಯರ ಅಧಿಕಾರಾವಧಿ ನವೆಂಬರ್ 11ರಂದು ಮುಕ್ತಾಯಗೊಳ್ಳಲಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.