
ಗದಗ, 23 ಅಕ್ಟೋಬರ್ (ಹಿ.ಸ.):
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಮಕ್ಕಳು ಹಾಗೂ ಯುವಜನರಲ್ಲಿರುವ ಕಲಾ ಪ್ರತಿಭೆಯನ್ನು ಗುರುತಿಸಿ, ಉತ್ತೇಜಿಸುವ ಉದ್ದೇಶದಿಂದ ಕಲಾ ಪ್ರತಿಭೋತ್ಸವ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಏಕವ್ಯಕ್ತಿ ಸ್ಪರ್ಧೆಗಳು: 8ರಿಂದ 14 ವರ್ಷದೊಳಗಿನ ಮಕ್ಕಳು ಬಾಲ ಪ್ರತಿಭೆ ವಿಭಾಗದಲ್ಲಿ ಹಾಗೂ 14ರಿಂದ 18 ವರ್ಷದೊಳಗಿನವರು ಕಿಶೋರ ಪ್ರತಿಭೆ ವಿಭಾಗದಲ್ಲಿ ಭಾಗವಹಿಸಬಹುದು. ಈ ವಿಭಾಗಗಳಲ್ಲಿ ಶಾಸ್ತ್ರೀಯ ನೃತ್ಯ, ಸುಗಮ ಸಂಗೀತ, ಚಿತ್ರಕಲೆ, ಜಾನಪದ ಗೀತೆ, ಹಿಂದೂಸ್ತಾನಿ ವಾದ್ಯ ಸಂಗೀತ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತ ಸ್ಪರ್ಧೆಗಳು ನಡೆಯಲಿವೆ.
ಯುವ ಪ್ರತಿಭೆ ವಿಭಾಗ: 18ರಿಂದ 30 ವರ್ಷದೊಳಗಿನ ಯುವಜನರು ಆಶುಭಾಷಣ, ಶಾಸ್ತ್ರೀಯ ನೃತ್ಯ, ಸುಗಮ ಸಂಗೀತ, ಕರ್ನಾಟಕ ಶಾಸ್ತ್ರೀಯ ಸಂಗೀತ, ಚಿತ್ರಕಲೆ, ಹಿಂದೂಸ್ತಾನಿ ವಾದ್ಯ ಸಂಗೀತ ಹಾಗೂ ಜಾನಪದ ಗೀತೆ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು.
ಸಮೂಹ ಸ್ಪರ್ಧೆಗಳು: ನಾಟಕ ಮತ್ತು ಜಾನಪದ ನೃತ್ಯ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಪ್ರತಿ ತಂಡದಲ್ಲಿ 10ರಿಂದ 15 ಸದಸ್ಯರು ಭಾಗವಹಿಸಲು ಅವಕಾಶವಿದೆ.
ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ನವೆಂಬರ್ 5ರೊಳಗೆ ತಮ್ಮ ಸ್ವವಿವರಗಳ ಅರ್ಜಿಯನ್ನು ಸಲ್ಲಿಸಬೇಕು. ವಯಸ್ಸಿನ ದೃಢೀಕರಣಕ್ಕಾಗಿ ಶಾಲೆ ಅಥವಾ ಕಾಲೇಜಿನಿಂದ ಪಡೆದ ಪ್ರಮಾಣಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಶಾಲೆ ಅಥವಾ ಕಾಲೇಜಿನ ಅಭ್ಯರ್ಥಿಗಳಲ್ಲದವರು ಗ್ರಾಮ ಪಂಚಾಯಿತಿ, ನಗರಸಭೆ, ಪುರಸಭೆ ಅಥವಾ ಮಹಾನಗರ ಪಾಲಿಕೆಯಿಂದ ವಯಸ್ಸಿನ ದೃಢೀಕರಣ ಪತ್ರವನ್ನು ಪಡೆದು ಸಲ್ಲಿಸಬೇಕು.
ಜಿಲ್ಲಾ ಮಟ್ಟದ ಸ್ಪರ್ಧೆಗಳು ನವೆಂಬರ್ 12 ಮತ್ತು 13ರಂದು ನಡೆಯುವ ಸಾಧ್ಯತೆಯಿದೆ. ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಅಭ್ಯರ್ಥಿಗಳು ಹಾಗೂ ತಂಡಗಳನ್ನು ವಲಯ ಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಗುತ್ತದೆ. ವಲಯ ಮಟ್ಟದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವರು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗುತ್ತಾರೆ. ರಾಜ್ಯ ಮಟ್ಟದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆಯುವ ವಿಜೇತರಿಗೆ ನಗದು ಬಹುಮಾನ ನೀಡಲಾಗುತ್ತದೆ.
ಒಬ್ಬ ಸ್ಪರ್ಧಿಗೆ ಒಂದಕ್ಕಿಂತ ಹೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ. ಸ್ಪರ್ಧೆಗೆ ಅಗತ್ಯವಿರುವ ವಾದ್ಯ ಪರಿಕರಗಳನ್ನು ಸ್ಪರ್ಧಿಗಳೇ ತರಬೇಕು. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
ಆಸಕ್ತರು ತಮ್ಮ ಅರ್ಜಿಗಳನ್ನು ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಆಡಳಿತ ಭವನ, ಕೊಠಡಿ ಸಂಖ್ಯೆ 103, ಗದಗ ಕಚೇರಿಗೆ ಕಚೇರಿ ವೇಳೆಯಲ್ಲಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ 08372-221864 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP