ಎಆರ್ಟಿಪಾರ್ಕ್ಗೆ ₹500 ಕೋಟಿ ಅನುದಾನ: ಮುಂದಿನ ಹಂತದ ವಿಸ್ತರಣೆಗೆ ಪ್ರಿಯಾಂಕ್ ಖರ್ಗೆ ಚರ್ಚೆ
ಎಆರ್ಟಿಪಾರ್ಕ್ನ ಮುಂದಿನ ಹಂತದ ಬೆಳವಣಿಗೆ ಮತ್ತು ವಿಸ್ತರಣೆ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಚರ್ಚೆ ನಡೆಸಿದ್ದು, ಕೇಂದ್ರದ ಆರ್ಡಿಐ ನಿಧಿಯಡಿ ₹500 ಕೋಟಿ ಅನುದಾನ ಹಂಚಿಕೆಯೊಂದಿಗೆ ಡೀಪ್ಟೆಕ್, ಕೃತಕ ಬುದ್ಧಿಮತ್ತೆ ಮತ್ತು ರೊಬೊಟಿಕ್ಸ್ ಕ್ಷೇತ್ರಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ.
priyank-kharge-artpark-rs-500-crore-rdi-fund-bengaluru


ಬೆಂಗಳೂರು, 22 ಅಕ್ಟೋಬರ್ (ಹಿ.ಸ.):

ಕೃತಕ ಬುದ್ಧಿಮತ್ತೆ (ಎಐ) ಮತ್ತು ರೊಬೊಟಿಕ್ಸ್ ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಹಾಗೂ ನಾವೀನ್ಯತೆಗೆ ಉತ್ತೇಜನ ನೀಡುವ ಉದ್ದೇಶದಿಂದ ಎಆರ್ಟಿಪಾರ್ಕ್ನ ಮುಂದಿನ ಹಂತದ ಬೆಳವಣಿಗೆ ಮತ್ತು ವಿಸ್ತರಣೆ ಕುರಿತು ಐಟಿ-ಬಿಟಿಯವರೊಂದಿಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಂಸ್ಥೆಯ ತಂಡದೊಂದಿಗೆ ಚರ್ಚೆ ನಡೆಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಕೇಂದ್ರ ಸರ್ಕಾರದ ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆ ನಿಧಿಯಡಿ ಆಯ್ಕೆಯಾಗಿರುವ ಐದು ಫೋಕಸ್ಡ್ ರಿಸರ್ಚ್ ಆರ್ಗನೈಸೇಷನ್ಗಳಲ್ಲಿ ಎಆರ್ಟಿಪಾರ್ಕ್ ಕೂಡ ಒಂದಾಗಿದೆ. ಈ ಯೋಜನೆಗೆ ₹500 ಕೋಟಿ ಅನುದಾನ ಮೀಸಲಿಡಲಾಗಿದ್ದು, ಕರ್ನಾಟಕಕ್ಕೆ ಇದು ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಈ ಯೋಜನೆಯಡಿ ಆಯ್ಕೆಯಾಗಿರುವ ಐದು ಸಂಸ್ಥೆಗಳಲ್ಲಿ ಎರಡು ಬೆಂಗಳೂರಿನಲ್ಲಿವೆ. ಕರ್ನಾಟಕ ಸರ್ಕಾರದ ಐಟಿ-ಬಿಟಿ ಇಲಾಖೆಯ ಬೆಂಬಲ ಹೊಂದಿರುವ ಎಆರ್ಟಿಪಾರ್ಕ್ ಮತ್ತು ಸಿ-ಕ್ಯಾಂಪ್ ಈ ಪಟ್ಟಿಯಲ್ಲಿವೆ ಎಂದು ಅವರು ಹೇಳಿದ್ದಾರೆ.

ಎಆರ್ಟಿಪಾರ್ಕ್ ಸ್ಥಾಪನೆಯಾದಾಗಿನಿಂದ ಕರ್ನಾಟಕ ಸರ್ಕಾರದಿಂದ ₹62 ಕೋಟಿಗೂ ಅಧಿಕ ಅನುದಾನ ಪಡೆದಿದೆ. ಈವರೆಗೆ 36 ಡೀಪ್ಟೆಕ್ ಕಂಪನಿಗಳಿಗೆ ಉತ್ತೇಜನ ನೀಡಿದ್ದು, ಇನ್ನೂ 18 ಕಂಪನಿಗಳು ಮುಂದಿನ ಹಂತದಲ್ಲಿವೆ. ಸಂಸ್ಥೆಯ ಮೂಲಕ ಬೆಳೆದುಬಂದ ಸ್ಟಾರ್ಟ್ಅಪ್ಗಳ ಒಟ್ಟು ಮೌಲ್ಯ ₹1,700 ಕೋಟಿಗೂ ಅಧಿಕವಾಗಿದೆ ಎಂದು ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.

ಇದಲ್ಲದೆ, ಎಆರ್ಟಿಪಾರ್ಕ್ ಹಲವು ಮಹತ್ವದ ಸಾಮಾಜಿಕ ನಾವೀನ್ಯತಾ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಎನ್ಎಂ-ಐಸಿಪಿಎಸ್ ಕಾರ್ಯಕ್ರಮದಡಿ ದೇಶದ 23 ತಂತ್ರಜ್ಞಾನ ಕೇಂದ್ರಗಳಲ್ಲಿ ಅಗ್ರ ಎರಡು ಕೇಂದ್ರಗಳ ಪೈಕಿ ಒಂದಾಗಿ ಗುರುತಿಸಿಕೊಂಡಿದೆ ಎಂದು ತಿಳಿಸಿದ್ದಾರೆ.

ಮುಂದಿನ ಹಂತದಲ್ಲಿ ಹೊಸ ಯೋಜನೆಗಳಿಗೆ ಆದ್ಯತೆ

ಎಆರ್ಟಿಪಾರ್ಕ್ನ ಮುಂದಿನ ಹಂತದ ಬೆಳವಣಿಗೆಯಲ್ಲಿ ‘ಬ್ರೈನ್ಜ್’ (BRAINZ — Bangalore Robotics and AI Innovation Zone) ಯೋಜನೆಯ ಮೂಲಕ ಹೆಚ್ಚಿನ ಮೌಲ್ಯ ಸೃಷ್ಟಿಸುವ ಗುರಿ ಹೊಂದಲಾಗಿದೆ. ಇದರೊಂದಿಗೆ ಆರ್ಟ್ಗ್ಯಾರೇಜ್ ಮತ್ತು ಆರ್ಟ್ಲ್ಯಾಬ್ಸ್ ಘಟಕಗಳನ್ನು ಮತ್ತಷ್ಟು ಬಲಪಡಿಸಿ, ಮೂಲಮಾದರಿ ತಯಾರಿಕೆ, ಉತ್ಪಾದನೆ ಹಾಗೂ ಹಂಚಿಕೆಯ ಸಂಶೋಧನೆ ಮತ್ತು ಅಭಿವೃದ್ಧಿ ಸೌಲಭ್ಯಗಳನ್ನು ವಿಸ್ತರಿಸಲು ಉದ್ದೇಶಿಸಲಾಗಿದೆ.

ಮೂಲಭೂತ ಡೀಪ್ಟೆಕ್ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮಿಷನ್-ಮೋಡ್ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಸಂಶೋಧನೆ, ತಂತ್ರಜ್ಞಾನ ಅಭಿವೃದ್ಧಿ ಮತ್ತು ಸ್ಟಾರ್ಟ್ಅಪ್ಗಳ ಬೆಳವಣಿಗೆಗೆ ಹೆಚ್ಚಿನ ಉತ್ತೇಜನ ನೀಡಲಾಗುವುದು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande