
ದಾವಣಗೆರೆ, 22 ಅಕ್ಟೋಬರ್ (ಹಿ.ಸ.):
ಮೈಸೂರು ದಸರಾ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಸಚಿವ ಕೆ.ಎಸ್. ಬಸವಂತಪ್ಪ ಅವರನ್ನು ಪೊಲೀಸರು ತಡೆದ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗಂಭೀರವಾಗಿ ಪರಿಗಣಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಕೆ.ಎಸ್. ಬಸವಂತಪ್ಪ, “ನಮ್ಮನ್ನು ತಡೆದ ವಿಚಾರ ಮುಖ್ಯಮಂತ್ರಿ ಅವರ ಗಮನಕ್ಕೆ ಬರುತ್ತಿದ್ದಂತೆ ಅವರು ಗಂಭೀರವಾಗಿ ಪರಿಗಣಿಸಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.
ಈ ಸೂಚನೆಯ ಮೇರೆಗೆ ತನಿಖೆ ನಡೆಸಿ ವರದಿ ನೀಡುವಂತೆ ತಿಳಿಸಲಾಗಿದೆ. ವರದಿ ಬಂದ ಬಳಿಕ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ” ಎಂದರು.
“ಶಿಷ್ಟಾಚಾರ ಪಾಲನೆಯ ವಿಚಾರದಲ್ಲಿ ಯಾವುದೇ ಸಮಸ್ಯೆ ಇದ್ದಿದ್ದರೆ ನಮಗೆ ಮೊದಲೇ ತಿಳಿಯಬೇಕಿತ್ತು. ಆದರೆ, ಅಂತಹ ಯಾವುದೇ ಶಿಷ್ಟಾಚಾರದ ಮಾಹಿತಿ ನಮಗೆ ಇರಲಿಲ್ಲ.
ಸಚಿವರು ಎಂಬುದು ತಿಳಿದಿದ್ದರೂ ನಮ್ಮನ್ನು ತಡೆದಿರುವುದು ಸರಿಯಾದ ಕ್ರಮವಲ್ಲ. ಯಾವ ಕಾರಣಕ್ಕಾಗಿ ನಮ್ಮನ್ನು ತಡೆದರು ಎಂಬುದರ ಕುರಿತು ತನಿಖೆಯಾಗಬೇಕು” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಈ ರೀತಿಯಾಗಿ ಅಸಭ್ಯವಾಗಿ ವರ್ತಿಸುವ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು” ಎಂದು ಸಚಿವ ಕೆ.ಎಸ್. ಬಸವಂತಪ್ಪ ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R