ಜಂತರ್ಮಂತರ್ ಪ್ರಕರಣ: ಸಿಜೆಪಿ ನಾಯಕರಿಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್
ನವದೆಹಲಿ, 22 ಅಕ್ಟೋಬರ್ (ಹಿ.ಸ.): ದೆಹಲಿಯ ಜಂತರ್‌ಮಂತರ್‌ನಲ್ಲಿ ಅನುಮತಿಯಿಲ್ಲದೆ ಪ್ರವೇಶಿಸಿದ ಹಾಗೂ ಸರ್ಕಾರಿ ಆದೇಶಗಳನ್ನು ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಕಾಕ್‌ರೋಚ್ ಜನತಾ ಪಕ್ಷದ (ಸಿಜೆಪಿ) ನಾಯಕರಾದ ಸೌರವ್ ದಾಸ್, ಆಶುತೋಷ್ ರಾಂಕಾ ಮತ್ತು ಅಜಿಂಕ್ಯ ಶಿಂಧೆ ಅವರಿಗೆ ದೆಹಲಿ ಪೊಲ
सीजेपी नेता आंजिक्य शिंदे, आशुतोष रांका और सौरव दास (फाइल फाेटाे)


ನವದೆಹಲಿ, 22 ಅಕ್ಟೋಬರ್ (ಹಿ.ಸ.):

ದೆಹಲಿಯ ಜಂತರ್‌ಮಂತರ್‌ನಲ್ಲಿ ಅನುಮತಿಯಿಲ್ಲದೆ ಪ್ರವೇಶಿಸಿದ ಹಾಗೂ ಸರ್ಕಾರಿ ಆದೇಶಗಳನ್ನು ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಕಾಕ್‌ರೋಚ್ ಜನತಾ ಪಕ್ಷದ (ಸಿಜೆಪಿ) ನಾಯಕರಾದ ಸೌರವ್ ದಾಸ್, ಆಶುತೋಷ್ ರಾಂಕಾ ಮತ್ತು ಅಜಿಂಕ್ಯ ಶಿಂಧೆ ಅವರಿಗೆ ದೆಹಲಿ ಪೊಲೀಸ್ ಅಪರಾಧ ವಿಭಾಗ ಸಮನ್ಸ್ ಜಾರಿ ಮಾಡಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಅಕ್ಟೋಬರ್ 13ರಂದು ಜಂತರ್‌ಮಂತರ್‌ನಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಎರಡು ಪ್ರತ್ಯೇಕ ಪ್ರಥಮ ಮಾಹಿತಿ ವರದಿಗಳನ್ನು ದಾಖಲಿಸಿದ್ದರು. ಇದೀಗ ಪ್ರಕರಣದ ತನಿಖೆಯನ್ನು ಅಪರಾಧ ವಿಭಾಗ ಕೈಗೆತ್ತಿಕೊಂಡಿದೆ.

ಅಕ್ಟೋಬರ್ 13ರಂದು ಸೌರವ್ ದಾಸ್, ಆಶುತೋಷ್ ರಾಂಕಾ, ಅಜಿಂಕ್ಯ ಶಿಂಧೆ ಸೇರಿದಂತೆ ಸಿಜೆಪಿಯ ಇತರ 11 ಸದಸ್ಯರು ಜಂತರ್‌ಮಂತರ್‌ಗೆ ತೆರಳಿದ್ದರು. ಪ್ರತಿಭಟನಾಕಾರರು ಖಾಸಗಿ ಆವರಣದ ಮಾರ್ಗವಾಗಿ, ಪ್ರತಿಭಟನೆಗೆ ಅಧಿಕೃತವಾಗಿ ನಿಗದಿಪಡಿಸದ ಸ್ಥಳಕ್ಕೆ ಪ್ರವೇಶಿಸಿದ್ದರು ಎಂಬುದು ಪೊಲೀಸರ ಆರೋಪವಾಗಿದೆ. ಅವರನ್ನು ತಡೆಯಲು ಪೊಲೀಸರು ಪ್ರಯತ್ನಿಸಿದಾಗ, ಪ್ರತಿಭಟನಾಕಾರರು ತಡೆಗೋಡೆಗಳನ್ನು ದಾಟಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳಿಗೆ ಅಡ್ಡಿಪಡಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ರಾಷ್ಟ್ರಧ್ವಜ ಹಾರಿಸಿ ಘೋಷಣೆಗಳನ್ನು ಕೂಗಲಾಗಿದೆ ಎಂಬ ಆರೋಪವೂ ಇದೆ. ಘಟನೆಯ ಬಳಿಕ ಎಲ್ಲ 14 ಮಂದಿಯನ್ನು ವಶಕ್ಕೆ ಪಡೆಯಲಾಗಿತ್ತು.

ಎರಡು ಪ್ರತ್ಯೇಕ ಪ್ರಕರಣಗಳ ದಾಖಲು

ಈ ಸಂಬಂಧ ಮೊದಲ ಪ್ರಕರಣವನ್ನು ನವದೆಹಲಿ ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 223ರ ಅಡಿಯಲ್ಲಿ ಸಾರ್ವಜನಿಕ ಸೇವಕರ ಕಾನೂನುಬದ್ಧ ಆದೇಶವನ್ನು ಉಲ್ಲಂಘಿಸಿದ ಆರೋಪ, ಸೆಕ್ಷನ್ 332ರ ಅಡಿಯಲ್ಲಿ ಅಪರಾಧ ಎಸಗುವ ಉದ್ದೇಶದಿಂದ ಗೃಹ ಅತಿಕ್ರಮಣ ಹಾಗೂ ಸೆಕ್ಷನ್ 61(2)ರ ಅಡಿಯಲ್ಲಿ ಅಪರಾಧ ಸಂಚು ರೂಪಿಸಿದ ಆರೋಪಗಳನ್ನು ದಾಖಲಿಸಲಾಗಿದೆ.

ಎರಡನೇ ಪ್ರಕರಣವನ್ನು ಸಂಸತ್ ಮಾರ್ಗ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದ್ದು, ಪೊಲೀಸ್ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಅವರ ಮೇಲೆ ಹಲ್ಲೆ ನಡೆಸುವುದು ಮತ್ತು ಗಾಯಗೊಳಿಸುವುದಕ್ಕೆ ಸಂಬಂಧಿಸಿದ ಆರೋಪಗಳನ್ನು ಒಳಗೊಂಡಿದೆ. ಎರಡೂ ಪ್ರಕರಣಗಳ ತನಿಖೆಯನ್ನು ದೆಹಲಿ ಪೊಲೀಸರು ಅಪರಾಧ ವಿಭಾಗಕ್ಕೆ ವಹಿಸಿದ್ದಾರೆ.

ಹಿಂದಿನ ಪ್ರತಿಭಟನೆಗೂ ಸಂಬಂಧಿಸಿದ ಕ್ರಮ

ಜಂತರ್‌ಮಂತರ್‌ನಲ್ಲಿ ಅಕ್ಟೋಬರ್ 13ರಂದು ನಡೆದ ಪ್ರತಿಭಟನೆಗೂ ಮೊದಲು, ಅಕ್ಟೋಬರ್ 10ರಂದು ಮತ್ತೊಂದು ಪ್ರತಿಭಟನೆಗೆ ಸಂಬಂಧಿಸಿದಂತೆ ಸೌರವ್ ದಾಸ್ ಮತ್ತು ಆಶುತೋಷ್ ರಾಂಕಾ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಶಾಂತಿ ಕಾಪಾಡುವ ಸಂಬಂಧ ಅವರು ಒಂದು ವರ್ಷದ ಅವಧಿಗೆ ಬಾಂಡ್ ಸಲ್ಲಿಸಿದ್ದರು.

ಆದರೆ, ಅಕ್ಟೋಬರ್ 13ರ ಘಟನೆಯ ಬಳಿಕ ಇಬ್ಬರೂ ಈ ಹಿಂದೆ ನೀಡಿದ್ದ ಭರವಸೆಯನ್ನು ಉಲ್ಲಂಘಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ. ಅಕ್ಟೋಬರ್ 14ರಂದು ಇಬ್ಬರನ್ನು ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಬಳಿಕ ಅವರ ನ್ಯಾಯಾಂಗ ಬಂಧನವನ್ನು ಮತ್ತೆ ಎರಡು ದಿನಗಳ ಕಾಲ ವಿಸ್ತರಿಸಲಾಗಿತ್ತು. ಮತ್ತೊಂದೆಡೆ, ಅಜಿಂಕ್ಯ ಶಿಂಧೆ ಅವರನ್ನು 5,000 ರೂ.ಗಳ ವೈಯಕ್ತಿಕ ಬಾಂಡ್ ಮೇಲೆ ಬಿಡುಗಡೆ ಮಾಡಲಾಗಿದ್ದು, ಶಾಂತಿ ಕಾಪಾಡುವ ಸಂಬಂಧ ಷರತ್ತುಗಳನ್ನು ವಿಧಿಸಲಾಗಿತ್ತು.

ಸಿಜೆಪಿ ಪಕ್ಷವು ಬಂಧನ ಮತ್ತು ವಶಕ್ಕೆ ಪಡೆಯುವ ಕ್ರಮವನ್ನು ಕಾನೂನುಬಾಹಿರ ಎಂದು ಟೀಕಿಸಿದೆ. ಜಾಮೀನುದಾರರಿಗೆ ಸಂಬಂಧಿಸಿದ ಪ್ರಕ್ರಿಯೆಯ ಬಗ್ಗೆಯೂ ಪಕ್ಷವು ಪ್ರಶ್ನೆಗಳನ್ನು ಎತ್ತಿದ್ದು, ನ್ಯಾಯಾಲಯದ ಆದೇಶವನ್ನು ಪ್ರಶ್ನಿಸುವುದಾಗಿ ತಿಳಿಸಿತ್ತು. ಆದರೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಾಗೂ ನಿಯಮಗಳ ಉಲ್ಲಂಘನೆಯ ಆರೋಪಗಳ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande