
ಹಾಸನ, 22 ಅಕ್ಟೋಬರ್ (ಹಿ.ಸ.):
ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನದ ಅಧಿದೇವತೆ ಶ್ರೀ ಹಾಸನಾಂಬ ದೇವಾಲಯದ ಬಾಗಿಲು ಅಕ್ಟೋಬರ್ 29ರಂದು ತೆರೆಯಲಿದ್ದು, ನವೆಂಬರ್ 11ರಂದು ಮುಚ್ಚಲಾಗುತ್ತದೆ. ಮೊದಲ ದಿನ ಮತ್ತು ಕೊನೆಯ ದಿನ ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಉಳಿದ ದಿನಗಳಲ್ಲಿ ಭಕ್ತರಿಗೆ ಸುರಕ್ಷಿತವಾಗಿ ಹಾಗೂ ಸುಗಮವಾಗಿ ದರ್ಶನ ಪಡೆಯಲು ಅನುಕೂಲವಾಗುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಶ್ರೀ ಹಾಸನಾಂಬ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮಿ ದೇವರ ಜಾತ್ರಾ ಮಹೋತ್ಸವದ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.
ಅಗ್ನಿ ಅವಘಡ ತಡೆಗೆ ಮುನ್ನೆಚ್ಚರಿಕೆ
ದೇವಾಲಯದ ಒಳ ಮತ್ತು ಹೊರ ಆವರಣ, ಸುತ್ತಮುತ್ತಲಿನ ಪ್ರದೇಶ, ಭಕ್ತರು ಸಾಗುವ ಸರತಿ ಸಾಲು ಹಾಗೂ ವಾಹನ ನಿಲುಗಡೆ ಸ್ಥಳಗಳಲ್ಲಿ ಅಗ್ನಿ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು. ಅಧಿಕಾರಿಗಳು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಹೆಚ್ಚುವರಿ ಅಗ್ನಿಶಾಮಕ ವಾಹನಗಳ ಅಗತ್ಯವಿದ್ದಲ್ಲಿ ಅಕ್ಕಪಕ್ಕದ ಜಿಲ್ಲೆಗಳಿಂದ ಪಡೆದುಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ವಿದ್ಯುತ್ ಅವಘಡಗಳಿಗೆ ಆಸ್ಪದ ನೀಡಬಾರದು. ಸರತಿ ಸಾಲು, ವೇದಿಕೆ ಕಾರ್ಯಕ್ರಮ ನಡೆಯುವ ಸ್ಥಳಗಳು ಹಾಗೂ ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಅಧಿಕಾರಿಗಳು ಖುದ್ದಾಗಿ ಪರಿಶೀಲನೆ ನಡೆಸಬೇಕು. ಯಾವುದೇ ವಿಚಾರವನ್ನೂ ನಿರ್ಲಕ್ಷಿಸದೆ, ಎಲ್ಲ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಕರ್ತವ್ಯ ನಿರ್ವಹಿಸಬೇಕು. ಭಕ್ತರ ಸುರಕ್ಷತೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಕಂಡುಬಂದರೂ ತಕ್ಷಣ ತಮ್ಮ ಗಮನಕ್ಕೆ ತರಬೇಕು ಎಂದು ಸೂಚಿಸಿದರು.
ತುರ್ತು ವೈದ್ಯಕೀಯ ಸೇವೆಗೆ ವ್ಯವಸ್ಥೆ
ಸರತಿ ಸಾಲಿನಲ್ಲಿ ಸಾಗುವ ಭಕ್ತರಿಗೆ ಆರೋಗ್ಯ ಸಮಸ್ಯೆ ಉಂಟಾದರೆ ತಕ್ಷಣ ಚಿಕಿತ್ಸೆ ಒದಗಿಸಲು ಸಿದ್ಧತೆ ಮಾಡಿಕೊಳ್ಳಬೇಕು. ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲು ಮಾರ್ಗ ನಕ್ಷೆ ಸಿದ್ಧಪಡಿಸಿಕೊಳ್ಳಬೇಕು. ಹಿಮ್ಸ್ನಲ್ಲಿ ತಕ್ಷಣ ಚಿಕಿತ್ಸೆ ದೊರೆಯುವಂತೆ ಶ್ರೀ ಹಾಸನಾಂಬ ತುರ್ತು ಚಿಕಿತ್ಸಾ ತಂಡವನ್ನು ರಚಿಸಬೇಕು. ದಿನದ 24 ಗಂಟೆಯೂ ವೈದ್ಯಕೀಯ ಸೇವೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ತುರ್ತು ಪರಿಸ್ಥಿತಿಯಲ್ಲಿ ಜೀವ ಉಳಿಸಲು ಮೊದಲ ಕೆಲವು ನಿಮಿಷಗಳು ಅತ್ಯಂತ ಮಹತ್ವದ್ದಾಗಿರುವುದರಿಂದ ಹೃದಯ ಸಂಬಂಧಿ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳ ತಜ್ಞ ವೈದ್ಯರನ್ನು ಗುರುತಿಸಬೇಕು. ಅವರ ಹೆಸರು ಮತ್ತು ದೂರವಾಣಿ ಸಂಖ್ಯೆಗಳೊಂದಿಗೆ ಪಟ್ಟಿ ಸಿದ್ಧಪಡಿಸಿ, ಅಗತ್ಯ ಸಂದರ್ಭದಲ್ಲಿ ಸೇವೆ ಒದಗಿಸಲು ಮುಂಚಿತವಾಗಿಯೇ ತಿಳಿಸಬೇಕು. ತುರ್ತು ಸಂದರ್ಭಗಳಲ್ಲಿ ರಕ್ತದ ಕೊರತೆಯಾಗದಂತೆ ರಕ್ತನಿಧಿ ಕೇಂದ್ರಗಳಲ್ಲಿ ಅಗತ್ಯ ಪ್ರಮಾಣದ ರಕ್ತ ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದರು.
ವಿಶೇಷ ವರ್ಗದ ಭಕ್ತರಿಗೆ ಪ್ರತ್ಯೇಕ ವ್ಯವಸ್ಥೆ
ದೇವಿಯ ದರ್ಶನಕ್ಕೆ ಆಗಮಿಸುವ ವಿಶೇಷ ಚೇತನರು ವಿಶಿಷ್ಟ ಅಂಗವೈಕಲ್ಯ ಗುರುತಿನ ಚೀಟಿ, 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಆಧಾರ್ ಗುರುತಿನ ಚೀಟಿ, ಒಂದು ವರ್ಷದೊಳಗಿನ ಮಕ್ಕಳಿರುವ ತಾಯಂದಿರು ಮಗುವಿನ ಜನನ ಪ್ರಮಾಣಪತ್ರ ಹಾಗೂ ಗರ್ಭಿಣಿಯರು ತಾಯಂದಿರ ಗುರುತಿನ ಚೀಟಿಯನ್ನು ತರಬೇಕು ಎಂದು ತಿಳಿಸಿದರು.
ಈ ವರ್ಗದ ಭಕ್ತರೊಂದಿಗೆ ಬರುವ ಕುಟುಂಬದ ಸದಸ್ಯರು ದೇವಿಯ ದರ್ಶನ ಪಡೆದು ವಾಪಸಾಗುವವರೆಗೆ ಕಾಯಲು ಹೊರಹೋಗುವ ದ್ವಾರದ ಬಳಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗುತ್ತದೆ. ಕುಟುಂಬದ ಸದಸ್ಯರು ದರ್ಶನ ಪಡೆದು ಬಂದ ಬಳಿಕ ಅವರೊಂದಿಗೆ ತೆರಳಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.
ದೇವಾಲಯದ ಸುತ್ತಮುತ್ತ ಹಾಗೂ ವಾಹನ ನಿಲುಗಡೆ ಸ್ಥಳಗಳಲ್ಲಿ ಬೀದಿನಾಯಿಗಳು ಇರದಂತೆ ಕ್ರಮ ಕೈಗೊಳ್ಳಬೇಕು. ಭಕ್ತರಿಗೆ ವಿತರಿಸುವ ಪ್ರಸಾದದ ಗುಣಮಟ್ಟದ ಬಗ್ಗೆ ಆಹಾರ ಸುರಕ್ಷತಾ ಅಧಿಕಾರಿಗಳು ವಿಶೇಷ ಗಮನ ಹರಿಸಬೇಕು ಎಂದು ಸೂಚಿಸಿದರು.
ಭಕ್ತಿಗೀತೆ, ಧ್ವನಿವರ್ಧಕ ಮತ್ತು ದೃಶ್ಯಪರದೆ ವ್ಯವಸ್ಥೆ
ಧರ್ಮದರ್ಶನಕ್ಕಾಗಿ ಸರತಿ ಸಾಲಿನಲ್ಲಿ ಸಾಗುವ ಭಕ್ತರಿಗೆ ಬೇಸರವಾಗದಂತೆ ಭಕ್ತಿಗೀತೆಗಳನ್ನು ಹಾಡಲು ವೇದಿಕೆಗಳಲ್ಲಿ ವ್ಯವಸ್ಥೆ ಮಾಡಬೇಕು. ಧ್ವನಿವರ್ಧಕ ವ್ಯವಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ಅಗತ್ಯ ಸ್ಥಳಗಳಲ್ಲಿ ದೃಶ್ಯಪರದೆಗಳನ್ನು ಅಳವಡಿಸಬೇಕು ಎಂದು ನಿರ್ದೇಶನ ನೀಡಿದರು.
ನೈವೇದ್ಯ ಹಾಗೂ ದೇವಿಯ ಅಲಂಕಾರದ ಸಂದರ್ಭದಲ್ಲಿ ದೇವಾಲಯದ ಬಾಗಿಲು ಮುಚ್ಚಿದಾಗ ಸರತಿ ಸಾಲಿನಲ್ಲಿ ಕಾಯುವ ಭಕ್ತರಿಗೆ ಮನರಂಜನೆ ಒದಗಿಸಲು ಉತ್ತಮ ಕಲಾವಿದರಿಂದ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಹೂವಿನ ಅಲಂಕಾರದ ಸಂದರ್ಭದಲ್ಲಿಯೂ ಎಚ್ಚರಿಕೆ ವಹಿಸಿ ವಿದ್ಯುತ್ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಸ್ವಚ್ಛತೆಗೆ ಹೆಚ್ಚಿನ ಆದ್ಯತೆ
ದೇವಾಲಯದ ಒಳ ಮತ್ತು ಹೊರ ಆವರಣ, ಸರತಿ ಸಾಲಿನ ಮಾರ್ಗ, ಪ್ರಸಾದ ವಿತರಣೆ ಸ್ಥಳ ಹಾಗೂ ತಾತ್ಕಾಲಿಕ ಶೌಚಾಲಯಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಇದಕ್ಕಾಗಿ ಪಾಳಿಗಳಲ್ಲಿ ಕರ್ತವ್ಯ ನಿರ್ವಹಿಸಲು ಸಿಬ್ಬಂದಿಯನ್ನು ನೇಮಿಸಿ, ಅವರ ಹಾಜರಾತಿಯನ್ನು ಕಡ್ಡಾಯವಾಗಿ ದಾಖಲಿಸಬೇಕು. ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಸಿಬ್ಬಂದಿಯ ಹೆಸರು ಮತ್ತು ದೂರವಾಣಿ ಸಂಖ್ಯೆಗಳ ಪಟ್ಟಿಯನ್ನು ಸಿದ್ಧಪಡಿಸಬೇಕು ಎಂದು ಸೂಚಿಸಿದರು.
ಜನದಟ್ಟಣೆ ನಿರ್ವಹಣೆ ಹಾಗೂ ಭಕ್ತರ ಸುರಕ್ಷತೆಗಾಗಿ ಅಗತ್ಯವಿರುವ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಭಕ್ತರಿಗೆ ಅಗತ್ಯ ಮಾಹಿತಿ ನೀಡಲು ಆಗಾಗ ಧ್ವನಿವರ್ಧಕಗಳ ಮೂಲಕ ಪ್ರಕಟಣೆಗಳನ್ನು ಮಾಡುತ್ತಿರಬೇಕು. ರೈಲು ನಿಲ್ದಾಣ, ಬಸ್ ನಿಲ್ದಾಣ, ಪ್ರವಾಸಿ ಮಂದಿರ ಹಾಗೂ ವಾಹನ ನಿಲುಗಡೆ ಸ್ಥಳಗಳಲ್ಲಿ ಪಾದರಕ್ಷೆಗಳನ್ನು ಇರಿಸಲು ಪ್ರತ್ಯೇಕ ನಿಲುಗಡೆ ವ್ಯವಸ್ಥೆ ಕಲ್ಪಿಸಬೇಕು ಎಂದರು.
ಸಾಂಸ್ಕೃತಿಕ ಕಾರ್ಯಕ್ರಮಗಳ ವೇಳಾಪಟ್ಟಿ
ಹಾಸನ ಮಹಾನಗರ ಪಾಲಿಕೆಯ ಆವರಣದಲ್ಲಿ ಅಕ್ಟೋಬರ್ 29ರಂದು ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ. ಅಕ್ಟೋಬರ್ 30ರಂದು ಸಂಜೆ 6 ಗಂಟೆಗೆ ಹಾಸನಾಂಬ ಸಾವಯವ ಮೇಳ ಉದ್ಘಾಟನೆ ಹಾಗೂ ಪರಿಸರ ಸ್ನೇಹಿ ಕೃಷಿಕರ ಬಳಗಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಸ್ಪರ್ಧೆ ಮತ್ತು ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಅವುಗಳ ವಿವರ ಹೀಗಿದೆ:
- ಅಕ್ಟೋಬರ್ 31: ಸಂಜೆ 4 ಗಂಟೆಗೆ ಜೋಡೆತ್ತು ಪ್ರದರ್ಶನ.
- ನವೆಂಬರ್ 3: ಬೆಳಿಗ್ಗೆ 11 ಗಂಟೆಯಿಂದ ಟಗರು ಮತ್ತು ಓತ ಪ್ರದರ್ಶನ.
- ನವೆಂಬರ್ 5: ಬೆಳಿಗ್ಗೆ 11 ಗಂಟೆಗೆ ಪಾಕ ಸ್ಪರ್ಧೆ.
- ನವೆಂಬರ್ 6: ಸಂಜೆ 5 ಗಂಟೆಗೆ ಹಾಲು ಕರೆಯುವ ಸ್ಪರ್ಧೆ.
- ನವೆಂಬರ್ 8: ಬೆಳಿಗ್ಗೆ 11 ಗಂಟೆಯಿಂದ ಮುದ್ದು ಸಾಕುಪ್ರಾಣಿಗಳ ಪ್ರದರ್ಶನ.
ಈ ಎಲ್ಲ ಕಾರ್ಯಕ್ರಮಗಳು ಮಹಾನಗರ ಪಾಲಿಕೆಯ ಆವರಣದಲ್ಲಿ ನಡೆಯಲಿದ್ದು, ವಿಜೇತರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪಾರಂಪರಿಕ ಖಾದ್ಯಗಳ ಪ್ರದರ್ಶನಕ್ಕೆ ಅವಕಾಶ
ನವೆಂಬರ್ 5ರಂದು ನಡೆಯುವ ಪಾಕ ಸ್ಪರ್ಧೆಯಲ್ಲಿ ಜಿಲ್ಲೆಯ ಎಂಟು ತಾಲ್ಲೂಕುಗಳ ಪ್ರಾದೇಶಿಕ ವಿಶೇಷತೆಯ ಸಿಹಿ ಮತ್ತು ಖಾರದ ಖಾದ್ಯಗಳನ್ನು ಮನೆಯಲ್ಲಿಯೇ ತಯಾರಿಸಿ ತಂದು ಪ್ರದರ್ಶಿಸಬಹುದು. ಸ್ಥಳೀಯವಾಗಿ ಪ್ರಸಿದ್ಧವಾಗಿರುವ ಹಳೆಯ ಪಾರಂಪರಿಕ ಖಾದ್ಯಗಳನ್ನು ಪರಿಚಯಿಸಲು ಇದೊಂದು ಉತ್ತಮ ಅವಕಾಶವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ರಂಗೋಲಿ ಸ್ಪರ್ಧೆಗೆ ಈಗಾಗಲೇ ನೋಂದಣಿ ಮಾಡಿಕೊಂಡಿರುವ 154 ಸ್ಪರ್ಧಿಗಳಿಗೆ ಮಹಾನಗರ ಪಾಲಿಕೆಯ ಆವರಣ, ಹೇಮಾವತಿ ಉದ್ಯಾನವನ ಹಾಗೂ ಬಸ್ ನಿಲ್ದಾಣದಲ್ಲಿ ಸ್ಪರ್ಧೆ ನಡೆಸಲು ದಿನಾಂಕ ಮತ್ತು ಸಮಯ ನಿಗದಿಪಡಿಸಲಾಗುವುದು ಎಂದರು.
ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಜನದಟ್ಟಣೆ ನಿಯಂತ್ರಣ, ಅಗ್ನಿ ಸುರಕ್ಷತೆ, ವೈದ್ಯಕೀಯ ಸೇವೆ, ಸ್ವಚ್ಛತೆ ಹಾಗೂ ಭಕ್ತರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಎಲ್ಲ ವ್ಯವಸ್ಥೆಗಳನ್ನು ಸಂಬಂಧಪಟ್ಟ ಇಲಾಖೆಗಳು ಸಮನ್ವಯದಿಂದ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಉಪವಿಭಾಗಾಧಿಕಾರಿ ಜಗದೀಶ್ ಗಂಗಣ್ಣನವರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.