
ಬೆಂಗಳೂರು, 22 ಅಕ್ಟೋಬರ್ (ಹಿ.ಸ.):
ಕರ್ನಾಟಕದಲ್ಲಿ ತೀವ್ರ ಬರ ಪರಿಸ್ಥಿತಿಯಿಂದ ಉಂಟಾಗಿರುವ ಸಂಕಷ್ಟವನ್ನು ಎದುರಿಸಲು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ 20,585.73 ಕೋಟಿ ರೂ. ಪರಿಹಾರವನ್ನು ತುರ್ತಾಗಿ ಮಂಜೂರು ಮಾಡಿ ಬಿಡುಗಡೆ ಮಾಡುವಂತೆ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ ಅವರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪ್ರತ್ಯೇಕ ಪತ್ರಗಳನ್ನು ಬರೆದು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿನ ಬರ ಪರಿಸ್ಥಿತಿಯ ಗಂಭೀರತೆಯನ್ನು ಪತ್ರಗಳಲ್ಲಿ ವಿವರಿಸಿರುವ ಅವರು, 2026ರ ನೈಋತ್ಯ ಮುಂಗಾರು ಅವಧಿಯಲ್ಲಿ ಕರ್ನಾಟಕದಲ್ಲಿ ಶೇ. 35ರಷ್ಟು ಮಳೆ ಕೊರತೆಯಾಗಿದೆ ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ವಾಡಿಕೆಯಂತೆ 852 ಮಿ.ಮೀ. ಮಳೆಯಾಗಬೇಕಿದ್ದು, ಕೇವಲ 551 ಮಿ.ಮೀ. ಮಳೆಯಾಗಿದೆ. ಇದು 1956ರ ನಂತರ ದಾಖಲಾದ ಎರಡನೇ ಅತ್ಯಂತ ಕಡಿಮೆ ಹಾಗೂ 1901ರ ನಂತರ ದಾಖಲಾದ ಏಳನೇ ಅತ್ಯಂತ ಕಡಿಮೆ ಮುಂಗಾರು ಮಳೆಯಾಗಿದೆ ಎಂದು ಉಲ್ಲೇಖಿಸಿದ್ದಾರೆ.
ರಾಜ್ಯ ಸರ್ಕಾರವು 226 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಒಟ್ಟು 57.93 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಇದರಲ್ಲಿ 53.92 ಲಕ್ಷ ಹೆಕ್ಟೇರ್ ಕೃಷಿ ಬೆಳೆಗಳು ಹಾಗೂ 4.01 ಲಕ್ಷ ಹೆಕ್ಟೇರ್ ತೋಟಗಾರಿಕಾ ಬೆಳೆಗಳು ಸೇರಿವೆ. ಕೃಷಿ ವೆಚ್ಚದ ಆಧಾರದ ಮೇಲೆ ಲೆಕ್ಕ ಹಾಕಿರುವ ಒಟ್ಟು ಆರ್ಥಿಕ ನಷ್ಟ 62,481.88 ಕೋಟಿ ರೂ.ಗಳಾಗಿದೆ ಎಂದು ಅವರು ವಿವರಿಸಿದ್ದಾರೆ.
ಪರಿಹಾರದ ಮೊತ್ತದ ವಿವರ
ಬರ ಪರಿಹಾರಕ್ಕಾಗಿ ರಾಜ್ಯ ಸರ್ಕಾರವು ಒಟ್ಟು 20,585.73 ಕೋಟಿ ರೂ. ಕೇಂದ್ರದ ನೆರವು ಕೋರಿ ಸಮಗ್ರ ಮನವಿ ಸಲ್ಲಿಸಿದೆ. ಈ ಮೊತ್ತದಲ್ಲಿ ಬೆಳೆ ಹಾನಿ ಪರಿಹಾರ ಸಹಾಯಧನಕ್ಕಾಗಿ 6,128.70 ಕೋಟಿ ರೂ., 61.91 ಲಕ್ಷ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಜೀವನೋಪಾಯ ಪರಿಹಾರವಾಗಿ 12,146.99 ಕೋಟಿ ರೂ., ಕುಡಿಯುವ ನೀರು ಪೂರೈಕೆಗಾಗಿ 1,727 ಕೋಟಿ ರೂ. ಹಾಗೂ ಪಶುಸಂಗೋಪನೆ ಮತ್ತು ಜಾನುವಾರುಗಳ ಸಂರಕ್ಷಣೆಗಾಗಿ 583.04 ಕೋಟಿ ರೂ. ನೆರವು ಕೋರಲಾಗಿದೆ.
ಬರದಿಂದ ಜೀವನೋಪಾಯಕ್ಕೆ ತೀವ್ರ ಹೊಡೆತ ಬಿದ್ದಿರುವ ಸಣ್ಣ ಮತ್ತು ಅತಿಸಣ್ಣ ರೈತರಿಗೆ ತಕ್ಷಣ ಆರ್ಥಿಕ ನೆರವು ಒದಗಿಸುವ ಅಗತ್ಯವನ್ನು ಡಾ. ಪರಮೇಶ್ವರ ವಿಶೇಷವಾಗಿ ಒತ್ತಿಹೇಳಿದ್ದಾರೆ. ರೈತರಿಗೆ ದಿನವೊಂದಕ್ಕೆ 327 ರೂ.ಗಳಂತೆ 60 ದಿನಗಳ ಅವಧಿಗೆ ಜೀವನೋಪಾಯ ಪರಿಹಾರವನ್ನು ಲೆಕ್ಕಹಾಕಲಾಗಿದೆ.
ಜಾನುವಾರುಗಳ ಸಂರಕ್ಷಣೆಗಾಗಿ 476 ಗೋಶಾಲೆಗಳು ಮತ್ತು 583 ಮೇವು ಬ್ಯಾಂಕ್ಗಳನ್ನು ಸ್ಥಾಪಿಸಲು ಕೇಂದ್ರದ ನೆರವು ಕೋರಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪರಿಹಾರ ಲೆಕ್ಕಾಚಾರಕ್ಕೆ ನವೀಕೃತ ದತ್ತಾಂಶ ಬಳಕೆಗೆ ಮನವಿ
ಬೆಳೆ ಹಾನಿ ಪರಿಹಾರ ಸಹಾಯಧನ ನಿರ್ಧರಿಸಲು ಈಗಲೂ 2015–16ರ ಹಳೆಯ ಕೃಷಿ ಗಣತಿಯ ಅಂಕಿಅಂಶಗಳನ್ನು ಬಳಸುತ್ತಿರುವ ಬಗ್ಗೆ ಡಾ. ಪರಮೇಶ್ವರ ಕಳವಳ ವ್ಯಕ್ತಪಡಿಸಿದ್ದಾರೆ. ಹಳೆಯ ದತ್ತಾಂಶದ ಆಧಾರದ ಮೇಲೆ ಪರಿಹಾರ ಲೆಕ್ಕಹಾಕುವುದರಿಂದ ರಾಜ್ಯಕ್ಕೆ ಸುಮಾರು 1,669.50 ಕೋಟಿ ರೂ. ನೆರವಿನ ಕೊರತೆಯಾಗುವ ಸಾಧ್ಯತೆಯಿದೆ ಎಂದು ಅವರು ಎಚ್ಚರಿಸಿದ್ದಾರೆ.
ಆದ್ದರಿಂದ, ಪರಿಹಾರದ ಅರ್ಹ ರೈತರನ್ನು ನಿಖರವಾಗಿ ಗುರುತಿಸಲು ಮತ್ತು ನೆರವಿನ ಅಗತ್ಯವನ್ನು ಸಮರ್ಪಕವಾಗಿ ಅಂದಾಜಿಸಲು ಕರ್ನಾಟಕ ಸರ್ಕಾರದ ನವೀಕೃತ ‘ಫ್ರೂಟ್ಸ್’ ದತ್ತಾಂಶವನ್ನು ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಬರಪೀಡಿತ ತಾಲೂಕುಗಳ ಶಾಲಾ ಮಕ್ಕಳಿಗೆ ಬೇಸಿಗೆ ರಜೆಯ ಅವಧಿಯಲ್ಲಿಯೂ ಪೌಷ್ಟಿಕ ಆಹಾರ ಒದಗಿಸುವ ಉದ್ದೇಶದಿಂದ ಪಿಎಂ ಪೋಷಣ್ ಯೋಜನೆಯಡಿ ಹೆಚ್ಚುವರಿಯಾಗಿ 427.20 ಕೋಟಿ ರೂ. ನೆರವು ಕೋರಲಾಗಿದೆ. ದುರ್ಬಲ ವರ್ಗದ ಫಲಾನುಭವಿಗಳ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸಲು ಪೂರಕ ಪೌಷ್ಟಿಕಾಂಶ ಕಾರ್ಯಕ್ರಮದಡಿ 70.96 ಕೋಟಿ ರೂ. ನೆರವು ಒದಗಿಸುವಂತೆಯೂ ಮನವಿ ಮಾಡಲಾಗಿದೆ.
ಕೃಷಿ ಉತ್ಪಾದನಾ ವೆಚ್ಚ ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಾಗೂ 16ನೇ ಹಣಕಾಸು ಆಯೋಗದ ಅವಧಿಯನ್ನು ಗಮನದಲ್ಲಿಟ್ಟುಕೊಂಡು, ಪ್ರಸ್ತುತ ಜಾರಿಯಲ್ಲಿರುವ ಬೆಳೆ ಹಾನಿ ಪರಿಹಾರ ಸಹಾಯಧನದ ಮಾನದಂಡಗಳನ್ನು ಪರಿಷ್ಕರಿಸುವ ಅಗತ್ಯವಿದೆ ಎಂದು ಡಾ. ಪರಮೇಶ್ವರ ಪ್ರತಿಪಾದಿಸಿದ್ದಾರೆ.
ಕೇಂದ್ರದ ಅಧ್ಯಯನ ತಂಡದ ಶಿಫಾರಸು ಶೀಘ್ರ ಸಲ್ಲಿಕೆಗೆ ಒತ್ತಾಯ
ಕೇಂದ್ರದ ಅಂತರ ಸಚಿವಾಲಯ ಅಧ್ಯಯನ ತಂಡವು ಅಕ್ಟೋಬರ್ 3ರಿಂದ 6ರವರೆಗೆ ಕರ್ನಾಟಕಕ್ಕೆ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ಪರಿಶೀಲಿಸಿರುವುದನ್ನು ಪತ್ರಗಳಲ್ಲಿ ಉಲ್ಲೇಖಿಸಿರುವ ಡಾ. ಪರಮೇಶ್ವರ, ರಾಜ್ಯ ಸರ್ಕಾರ ಸಲ್ಲಿಸಿರುವ ಸಮಗ್ರ ಬರ ಪರಿಹಾರ ಮನವಿಯ ಪರಿಶೀಲನೆಯನ್ನು ತ್ವರಿತಗೊಳಿಸುವಂತೆ ಕೋರಿದ್ದಾರೆ.
ಕೇಂದ್ರ ಅಧ್ಯಯನ ತಂಡದ ಶಿಫಾರಸುಗಳನ್ನು ಉನ್ನತ ಮಟ್ಟದ ಸಮಿತಿಗೆ ಶೀಘ್ರ ಸಲ್ಲಿಸಲು ಕ್ರಮ ಕೈಗೊಳ್ಳಬೇಕು. ಆ ಮೂಲಕ ರಾಜ್ಯಕ್ಕೆ ಅಗತ್ಯವಿರುವ ಆರ್ಥಿಕ ನೆರವನ್ನು ವಿಳಂಬವಿಲ್ಲದೆ ಮಂಜೂರು ಮಾಡಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ರೈತರ ಕಲ್ಯಾಣವು ರಾಜಕೀಯ ಮತ್ತು ಆಡಳಿತಾತ್ಮಕ ಗಡಿಗಳನ್ನು ಮೀರಿದ ಮಹತ್ವ ಹೊಂದಿದೆ. ಸಹಕಾರಿ ಒಕ್ಕೂಟ ವ್ಯವಸ್ಥೆಯ ಆಶಯದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕಾಗಿದೆ ಎಂದು ಅವರು ಒತ್ತಿಹೇಳಿದ್ದಾರೆ.
ದೇಶದ ಸದೃಢತೆಗೆ ಅನ್ನದಾತರಾದ ರೈತರ ಶಕ್ತಿಯೇ ಪ್ರಮುಖ ಆಧಾರವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ಡಾ. ಪರಮೇಶ್ವರ, ಕೃಷಿ ಆಧಾರಿತ ಜೀವನೋಪಾಯವನ್ನು ರಕ್ಷಿಸಲು ಹಾಗೂ ಬರ ಸಂಕಷ್ಟದಿಂದ ರೈತರನ್ನು ಕಾಪಾಡಲು ಸಕಾಲದಲ್ಲಿ ಆರ್ಥಿಕ ನೆರವು ಒದಗಿಸುವುದು ಅತ್ಯಗತ್ಯ ಎಂದು ಪ್ರತಿಪಾದಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.