
ಬೆಂಗಳೂರು, 21 ಅಕ್ಟೋಬರ್ (ಹಿ.ಸ.):
ಕರ್ನಾಟಕದ ದಟ್ಟ ಅರಣ್ಯಗಳು, ಪಶ್ಚಿಮ ಘಟ್ಟಗಳ ಮಲೆನಾಡು ಹಾಗೂ ಬಯಲುಸೀಮೆಯ ಜೀವವೈವಿಧ್ಯದಲ್ಲಿ ಸರೀಸೃಪಗಳು ಮಹತ್ವದ ಪಾತ್ರ ವಹಿಸುತ್ತಿವೆ. ಹಲ್ಲಿಗಳು, ಹಾವುಗಳು, ಮೊಸಳೆಗಳು ಮತ್ತು ಆಮೆಗಳು ಪರಿಸರದ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿವೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಅಕ್ಟೋಬರ್ 21ರ ರಾಷ್ಟ್ರೀಯ ಸರೀಸೃಪ ಜಾಗೃತಿ ದಿನದ ಅಂಗವಾಗಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಣೆ ಹೊರಡಿಸಿರುವ ಅರಣ್ಯ ಇಲಾಖೆ, ಸರೀಸೃಪಗಳ ಸಂರಕ್ಷಣೆಯ ಮಹತ್ವವನ್ನು ಒತ್ತಿಹೇಳಿದೆ.
ಹಾವುಗಳು ಮತ್ತು ಹಲ್ಲಿಗಳು ಬೆಳೆಗಳಿಗೆ ಹಾನಿ ಉಂಟುಮಾಡುವ ಇಲಿಗಳು ಹಾಗೂ ಹಾನಿಕಾರಕ ಕೀಟಗಳ ಸಂಖ್ಯೆಯನ್ನು ನೈಸರ್ಗಿಕವಾಗಿ ನಿಯಂತ್ರಿಸುತ್ತವೆ. ಮೊಸಳೆಗಳು ಮತ್ತು ಜಲವಾಸಿ ಆಮೆಗಳು ಜಲ ಪರಿಸರದ ಸಮತೋಲನ ಕಾಪಾಡಲು ನೆರವಾಗುತ್ತವೆ. ಆಮೆಗಳು ಬೀಜಪ್ರಸರಣದ ಮೂಲಕ ಅರಣ್ಯದ ನೈಸರ್ಗಿಕ ಬೆಳವಣಿಗೆಗೂ ಕೊಡುಗೆ ನೀಡುತ್ತವೆ ಎಂದು ಇಲಾಖೆ ವಿವರಿಸಿದೆ.
ಮೂಢನಂಬಿಕೆಗಳು ಮತ್ತು ಆಧಾರರಹಿತ ಭಯದಿಂದಾಗಿ ಸರೀಸೃಪಗಳನ್ನು ಹತ್ಯೆ ಮಾಡುವುದು ಹಾಗೂ ಅವುಗಳ ನೈಸರ್ಗಿಕ ಆವಾಸಸ್ಥಾನಗಳನ್ನು ನಾಶಪಡಿಸುವುದು ಕಳವಳಕಾರಿ ಸಂಗತಿಯಾಗಿದೆ. ಈ ಜೀವಿಗಳ ಸಂರಕ್ಷಣೆ ಪರಿಸರದ ಅಗತ್ಯ ಮಾತ್ರವಲ್ಲದೆ, ಶಾಸನಬದ್ಧ ಕರ್ತವ್ಯವೂ ಆಗಿದೆ ಎಂದು ಇಲಾಖೆ ತಿಳಿಸಿದೆ.
ಪ್ರಕೃತಿಯ ನಿಶ್ಶಬ್ದ ಕಾವಲುಗಾರರೆಂದೇ ಗುರುತಿಸಲ್ಪಡುವ ಸರೀಸೃಪಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ಮೂಢನಂಬಿಕೆಗಳನ್ನು ತೊರೆಯುವುದು ಹಾಗೂ ಅವುಗಳ ಆವಾಸಸ್ಥಾನಗಳನ್ನು ಸಂರಕ್ಷಿಸುವುದು ಅಗತ್ಯವಾಗಿದೆ. ಕರ್ನಾಟಕದ ಅಮೂಲ್ಯ ಜೀವಸಂಪತ್ತನ್ನು ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಹಸ್ತಾಂತರಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಅರಣ್ಯ ಇಲಾಖೆ ಮನವಿ ಮಾಡಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.