ಪೊಲೀಸರ ತ್ಯಾಗ ಬಲಿದಾನಗಳಿಂದಾಗಿ ಸಮಾಜಕ್ಕೆ ನೆಮ್ಮದಿ: ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್
ಕೋಲಾರ: 21 ಅಕ್ಟೋಬರ್ (ಹಿ. ಸ.) : ಬಿಸಿಲು, ಮಳೆ, ಚಳಿ ಹಾಗೂ ಗಾಳಿಯೆನ್ನದೆ, ಯಾವುದೇ ಬೆದರಿಕೆಗಳಿಗೂ ಜಗ್ಗದೆ ಹಗಲಿರುಳು ಸಮಾಜದ ಹಾಗೂ ದೇಶದ ರಕ್ಷಣೆ ಮಾಡುವ ಪೊಲೀಸ್, ಸೇನಾ ಮತ್ತು ಇತರ ಸಮವಸ್ತ್ರಧಾರಿ ಪಡೆಗಳ ತ್ಯಾಗ ಬಲಿದಾನಗಳಿಂದಾಗಿಯೇ ನಾವೆಲ್ಲರೂ ಇಂದು ನೆಮ್ಮದಿಯಿಂದ ಜೀವಿಸಲು ಸಾಧ್ಯವಾಗುತ್ತಿದೆ
ಕೋಲಾರದಲ್ಲಿ ಪೊಲೀಸ್ ಇಲಾಖೆಯಿಂದ ನಡೆದ ಹುತಾತ್ಮರ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಎಂ ಆರ್ ರವಿಕುಮಾರ್ ನಮನ ಸಲ್ಲಿಸಿದರು


ಕೋಲಾರ: 21 ಅಕ್ಟೋಬರ್ (ಹಿ. ಸ.) :

ಬಿಸಿಲು, ಮಳೆ, ಚಳಿ ಹಾಗೂ ಗಾಳಿಯೆನ್ನದೆ, ಯಾವುದೇ ಬೆದರಿಕೆಗಳಿಗೂ ಜಗ್ಗದೆ ಹಗಲಿರುಳು ಸಮಾಜದ ಹಾಗೂ ದೇಶದ ರಕ್ಷಣೆ ಮಾಡುವ ಪೊಲೀಸ್, ಸೇನಾ ಮತ್ತು ಇತರ ಸಮವಸ್ತ್ರಧಾರಿ ಪಡೆಗಳ ತ್ಯಾಗ ಬಲಿದಾನಗಳಿಂದಾಗಿಯೇ ನಾವೆಲ್ಲರೂ ಇಂದು ನೆಮ್ಮದಿಯಿಂದ ಜೀವಿಸಲು ಸಾಧ್ಯವಾಗುತ್ತಿದೆ ಎಂದು ಕೋಲಾರ ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ಅವರು ತಿಳಿಸಿದರು.

ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಅಕ್ಟೋಬರ್ 21ರಂದು ಹಮ್ಮಿಕೊಳ್ಳಲಾಗಿದ್ದ 2025-26ನೇ ಸಾಲಿನ 'ಪೊಲೀಸ್ ಹುತಾತ್ಮರ ದಿನಾಚರಣೆ'ಯಲ್ಲಿ ಪಾಲ್ಗೊಂಡು, ಕರ್ತವ್ಯದ ವೇಳೆ ಮಡಿದ ವೀರ ಪೊಲೀಸರಿಗೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ದೇಶದ ಆಂತರಿಕ ಭದ್ರತೆ ಮತ್ತು ಗಡಿ ಕಾಯುವಿಕೆಯಲ್ಲಿ ಪೊಲೀಸರ ಪಾತ್ರ ಮಹತ್ವದ್ದಾಗಿದೆ ಎಂದು ಸ್ಮರಿಸಿದ ಜಿಲ್ಲಾಧಿಕಾರಿಗಳು, ಅಕ್ಟೋಬರ್ 21ರ ಇತಿಹಾಸವನ್ನು ಮೆಲುಕು ಹಾಕಿದರು. 1959ರ ಅಕ್ಟೋಬರ್ 21 ರಂದು ಲಡಾಖ್ನ ಹಾಟ್ ಸ್ಪ್ರಿಂಗ್ಸ್ ಪ್ರದೇಶದಲ್ಲಿ ಗಡಿ ಕಾಯುತ್ತಿದ್ದ 10 ಜನ ಭಾರತೀಯ ಪೊಲೀಸ್ ಅಧಿಕಾರಿಗಳ ಮೇಲೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಚೀನಾ ಸೈನಿಕರು ಏಕಾಏಕಿ ದಾಳಿ ಮಾಡಿದರು. ಸಂಖ್ಯೆಯಲ್ಲಿ ಕಡಿಮೆಯಿದ್ದರೂ ಶಸ್ತ್ರಾಸ್ತ್ರಗಳನ್ನು ಲೆಕ್ಕಿಸದೆ ನಮ್ಮ ವೀರ ಪೊಲೀಸರು ತಮ್ಮ ಕರ್ತವ್ಯ ನಿಷ್ಠೆಯಿಂದ ದಿಟ್ಟತನದಿಂದ ಹೋರಾಡಿ ಪ್ರಾಣ ತ್ಯಾಗ ಮಾಡಿದರು. ಅವರ ಶೌರ್ಯದ ಸ್ಮರಣಾರ್ಥವಾಗಿ ಅಕ್ಟೋಬರ್ 21 ಅನ್ನು ರಾಷ್ಟ್ರದಾದ್ಯಂತ ಪೊಲೀಸ್ ಹುತಾತ್ಮರ ದಿನವೆಂದು ಆಚರಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕನ್ನಿಕಾ ಸಿಕ್ರಿವಾಲ್ ಅವರು ಮಾತನಾಡಿ 2025-26ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ದೇಶಾದ್ಯಂತ ಒಟ್ಟು 154 ಪೊಲೀಸ್ ಅಧಿಕಾರಿಗಳು ಪ್ರಾಣ ಕಳೆದುಕೊಂಡಿದ್ದು, ಇದರಲ್ಲಿ ನಮ್ಮ ಕರ್ನಾಟಕ ರಾಜ್ಯದ 5 ಪೊಲೀಸರು ಹುತಾತ್ಮರಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಇದೇ ವೇಳೆ, ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಗುಜರಾತ್, ಮಹಾರಾಷ್ಟ್ರ, ಪಂಜಾಬ್ ಸೇರಿದಂತೆ ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಹಾಗೂ ಅರೆಸೇನಾ ಪಡೆಗಳಲ್ಲಿ (ಬಿಎಸ್ಎಫ್, ಸಿಆರ್ಪಿಎಫ್, ಐಟಿಬಿಪಿ ಇತ್ಯಾದಿ) ಹುತಾತ್ಮರಾದ ಎಲ್ಲಾ 154 ಅಧಿಕಾರಿಗಳ ಹಾಗೂ ಸಿಬ್ಬಂದಿಯ ಹೆಸರುಗಳನ್ನು ವಾಚಿಸಿ ಗೌರವ ಸಲ್ಲಿಸಲಾಯಿತು. ದೇಶದ ರಕ್ಷಣೆಗಾಗಿ ಹೋರಾಡಿ ಪ್ರಾಣತ್ಯಾಗ ಮಾಡಿದ ಈ ಎಲ್ಲಾ ವೀರ ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾಡಳಿತದ ಹಾಗೂ ಜಿಲ್ಲಾ ಪೊಲೀಸ್ ವತಿಯಿಂದ ಆತ್ಮೀಯ ನಮನಗಳನ್ನು ಸಮರ್ಪಿಸಲಾಯಿತು.

ಕಾರ್ಯಕ್ರಮದಲ್ಲಿ ಮೂರು ಸುತ್ತು ಕುಶಾಲತೋಪು ಸಿಡಿಸುವ ಮೂಲಕ ಹಾಗೂ ಪೊಲೀಸ್ ಧ್ವಜವನ್ನು ಅರ್ಧಮಟ್ಟಕ್ಕಿಳಿಸಿ, ಶೋಕ ಗೀತೆಯೊಂದಿಗೆ ಎರಡು ನಿಮಿಷಗಳ ಮೌನಾಚರಣೆ ಮಾಡುವ ಮೂಲಕ ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಪೊಲೀಸ್ ಬ್ಯಾಂಡ್ ವತಿಯಿಂದ 'ಅಬೈಡ್ ವಿತ್ ಮಿ' ಹಾಗೂ ಡಬ್ಲ್ಯೂ.ಎಸ್. ಮಾಂಕ್ ಅವರು ರಚಿಸಿರುವ ಗಾಂಧೀಜಿಯವರ ಅಚ್ಚುಮೆಚ್ಚಿನ 'ಸಾರೇ ಜಹಾನ್ ಸೆ ಅಚ್ಚಾ' ಗೀತೆಗಳ ನುಡಿಸುವಿಕೆಯ ಮೂಲಕ ಗೌರವ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್, ಮನೀಷಾ ಸೇರಿದಂತೆ ನಿವೃತ್ತ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ವರ್ಗ, ಮಾಧ್ಯಮ ಮಿತ್ರರು ಹಾಗೂ ಅಪಾರ ಸಾರ್ವಜನಿಕರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande