
ನವದೆಹಲಿ, 21 ಅಕ್ಟೋಬರ್ (ಹಿ.ಸ.):
ಭಾರತ ಮತ್ತು ಜಪಾನ್ ನಡುವೆ ವ್ಯಾಪಾರ, ಶಿಕ್ಷಣ, ಕೌಶಲಾಭಿವೃದ್ಧಿ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಹೆಚ್ಚಿಸುವ ಕುರಿತು ಜಪಾನ್ನ ಕಾಗೋಶಿಮಾ ಪ್ರಾಂತ್ಯದ ರಾಜ್ಯಪಾಲ ಕೊಯಿಚಿ ಶಿಯೋತಾ ಅವರೊಂದಿಗೆ ಚರ್ಚೆ ನಡೆಸಲಾಯಿತು. ವಲ್ಡ್ ಕನೆಕ್ಟ್ ಎಜುಕೇಷನ್ನ ನಿರ್ದೇಶಕರಾದ ಎಲ್.ಎಸ್. ಬೇಡಿ ಮತ್ತು ಮುಕುಲ್ ಮೆಹ್ತಾ ಅವರು ಶಿಯೋತಾ ಅವರನ್ನು ಭೇಟಿ ಮಾಡಿ ವಿವಿಧ ಕ್ಷೇತ್ರಗಳಲ್ಲಿ ಸಹಭಾಗಿತ್ವ ವಿಸ್ತರಿಸುವ ಕುರಿತು ಮಾತುಕತೆ ನಡೆಸಿದರು. ಉತ್ತರ ಪ್ರದೇಶದ ನೋಯ್ಡಾ ಮತ್ತು ಉತ್ತರಾಖಂಡದಲ್ಲಿ ಜಪಾನ್ ವತಿಯಿಂದ ಉದ್ಯೋಗ ಮೇಳಗಳನ್ನು ಆಯೋಜಿಸುವ ಸಾಧ್ಯತೆಯ ಬಗ್ಗೆಯೂ ಚರ್ಚಿಸಲಾಯಿತು.
ಕಾಗೋಶಿಮಾ ಪ್ರಾಂತ್ಯ–ಭಾರತ ಸ್ನೇಹ ಸಂಘದ ಕಾರ್ಯಕ್ರಮದ ಅಂಗವಾಗಿ ಶಿಯೋತಾ ಭಾರತಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಸನ್ಮಾರ್ಕ್ಸ್ ಹಾಸ್ಪಿಟಾಲಿಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸಹಸಂಸ್ಥಾಪಕ ನವ್ನೀತ್ ಸಿಂಗ್ ಜುನೇಜಾ, ಕೋಟೋಬಾ ಬಿಸಿನೆಸ್ ಕನ್ಸಲ್ಟಿಂಗ್ನ ಮಾಲೀಕ ರಾಜೇಶ್ ದಾಸ್, ಹಿರಿಯ ಪತ್ರಕರ್ತ ಹಾಗೂ ಹಿಂದೂಸ್ತಾನ್ ಸಮಾಚಾರ್ನ ವ್ಯವಸ್ಥಾಪಕ ಸಂಪಾದಕ ಜಿತೇಂದ್ರ ತಿವಾರಿ, ವಿಕ್ರಮ್ ಉಪಾಧ್ಯಾಯ, ಚಂದನ್ ಬೇಡಿ ಮತ್ತು ವಿಕ್ರಮ್ ಸಿಂಗ್ ಸೇರಿದಂತೆ ಜಪಾನಿನ ನಿಯೋಗದ ಸದಸ್ಯರು ಉಪಸ್ಥಿತರಿದ್ದರು.
ಸಭೆಯಲ್ಲಿ ಉಭಯ ದೇಶಗಳ ಉದ್ಯಮಿಗಳ ನಡುವಿನ ಸಂಪರ್ಕ ಬಲಪಡಿಸುವುದು, ಹೂಡಿಕೆ ಅವಕಾಶಗಳನ್ನು ವಿಸ್ತರಿಸುವುದು ಹಾಗೂ ವಿದ್ಯಾರ್ಥಿಗಳ ವಿನಿಮಯಕ್ಕೆ ಉತ್ತೇಜನ ನೀಡುವ ಕುರಿತು ಚರ್ಚಿಸಲಾಯಿತು. ಜಪಾನಿನಲ್ಲಿ ಉದ್ಯೋಗ ಪಡೆಯಲು ಆಸಕ್ತಿ ಹೊಂದಿರುವ ಭಾರತೀಯ ಯುವಕರಿಗೆ ಅಗತ್ಯ ಕೌಶಲ ತರಬೇತಿ ಮತ್ತು ಮಾರ್ಗದರ್ಶನ ಒದಗಿಸುವ ಅಗತ್ಯದ ಬಗ್ಗೆಯೂ ಗಮನಹರಿಸಲಾಯಿತು.
ಜಪಾನಿನ ಕಂಪನಿಗಳ ಅಗತ್ಯಗಳಿಗೆ ಅನುಗುಣವಾಗಿ ಭಾರತೀಯ ಯುವಕರನ್ನು ಸಜ್ಜುಗೊಳಿಸುವುದು ಹಾಗೂ ಅವರಿಗೆ ಅಂತಾರಾಷ್ಟ್ರೀಯ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡುವುದು ಸಭೆಯ ಪ್ರಮುಖ ವಿಚಾರಗಳಾಗಿದ್ದವು. ಜಪಾನಿನ ನಿರ್ದಿಷ್ಟ ಕೌಶಲ ಹೊಂದಿದ ಕಾರ್ಮಿಕರ ಕಾರ್ಯಕ್ರಮದಡಿ ಭಾರತೀಯ ಯುವಕರಿಗೆ ಲಭ್ಯವಿರುವ ಉದ್ಯೋಗಾವಕಾಶಗಳ ಬಗ್ಗೆಯೂ ಚರ್ಚೆ ನಡೆಯಿತು. ಈ ಕಾರ್ಯಕ್ರಮದಡಿ ಜಪಾನಿನಲ್ಲಿ ಕೆಲಸ ಮಾಡಲು ಬಯಸುವ ಯುವಕರಿಗೆ ಸಂಬಂಧಿತ ಕ್ಷೇತ್ರಗಳ ಕೌಶಲ, ಅರ್ಹತೆ ಮತ್ತು ಉದ್ಯೋಗದ ಅವಶ್ಯಕತೆಗಳ ಕುರಿತು ಮಾಹಿತಿ ನೀಡುವುದು ಮುಖ್ಯವೆಂದು ಅಭಿಪ್ರಾಯಪಡಲಾಯಿತು. ಈ ಹಿನ್ನೆಲೆಯಲ್ಲಿ ನೋಯ್ಡಾ ಮತ್ತು ಉತ್ತರಾಖಂಡದಲ್ಲಿ ಉದ್ಯೋಗ ಮೇಳಗಳನ್ನು ಆಯೋಜಿಸುವ ಸಾಧ್ಯತೆಯನ್ನು ಪರಿಶೀಲಿಸಲಾಯಿತು.
ಸನ್ಮಾರ್ಕ್ಸ್ ಹಾಸ್ಪಿಟಾಲಿಟಿಯ ಸಹಸಂಸ್ಥಾಪಕ ನವ್ನೀತ್ ಸಿಂಗ್ ಜುನೇಜಾ ಅವರು 2003ರಿಂದ ಜಪಾನ್ನೊಂದಿಗೆ ಸಂಪರ್ಕ ಹೊಂದಿದ್ದು, ಜಪಾನಿನ ಭಾಷೆ, ಸಂಸ್ಕೃತಿ ಮತ್ತು ವ್ಯಾಪಾರ ಕಾರ್ಯವೈಖರಿಯಲ್ಲಿ 23 ವರ್ಷಗಳ ಅನುಭವ ಹೊಂದಿದ್ದಾರೆ. 2017ರಿಂದ ಭಾರತದಲ್ಲಿ ತಮ್ಮ ಉದ್ಯಮವನ್ನು ವಿಸ್ತರಿಸಲು ಆರಂಭಿಸಿದ್ದಾರೆ. ಅವರ ಸಂಸ್ಥೆಯು ಆತಿಥ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಭಾರತಕ್ಕೆ ಆಗಮಿಸುವ ಜಪಾನಿನ ನಾಗರಿಕರು ಮತ್ತು ಕಂಪನಿಗಳಿಗೆ ವಸತಿ ಸೇರಿದಂತೆ ವಿವಿಧ ಸೇವೆಗಳನ್ನು ಒದಗಿಸುತ್ತದೆ. ಭಾರತ ಮತ್ತು ಜಪಾನ್, ವಿಶೇಷವಾಗಿ ಕಾಗೋಶಿಮಾ ಪ್ರಾಂತ್ಯದ ನಡುವಿನ ವ್ಯಾಪಾರ ಸಂಬಂಧ ಹಾಗೂ ಸಾಂಸ್ಕೃತಿಕ ವಿನಿಮಯವನ್ನು ಬಲಪಡಿಸುವ ನಿಟ್ಟಿನಲ್ಲಿಯೂ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.
ಕೋಟೋಬಾ ಬಿಸಿನೆಸ್ ಕನ್ಸಲ್ಟಿಂಗ್ನ ಮಾಲೀಕ ರಾಜೇಶ್ ದಾಸ್ ಅವರು ಭಾರತ ಮತ್ತು ಜಪಾನ್ನ ಉದ್ಯಮಿಗಳ ನಡುವೆ ಉತ್ತಮ ಸಂಪರ್ಕ ಬೆಳೆಸುವುದು ಹಾಗೂ ದೀರ್ಘಕಾಲೀನ ವ್ಯಾಪಾರ ಪಾಲುದಾರಿಕೆಗೆ ಇರುವ ಅವಕಾಶಗಳ ಕುರಿತು ಚರ್ಚಿಸಿದರು. ಸಭೆಯಲ್ಲಿ ಜಪಾನಿನ ವಿವಿಧ ಉದ್ಯಮಗಳಿಗೆ ಸಂಬಂಧಿಸಿದ ಪ್ರತಿನಿಧಿಗಳು ಮತ್ತು ವ್ಯಾಪಾರಸ್ಥರೂ ಭಾಗವಹಿಸಿದ್ದರು.
ವಲ್ಡ್ ಕನೆಕ್ಟ್ ಎಜುಕೇಷನ್ನ ನಿರ್ದೇಶಕ ಎಲ್.ಎಸ್. ಬೇಡಿ ಅವರು ಶಿಕ್ಷಣ, ಕೌಶಲಾಭಿವೃದ್ಧಿ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಉಭಯ ದೇಶಗಳ ನಡುವಿನ ಸಹಕಾರದ ಸಾಧ್ಯತೆಗಳನ್ನು ಪ್ರಸ್ತಾಪಿಸಿದರು. ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಶಿಕ್ಷಣದ ಅವಕಾಶಗಳ ಕುರಿತು ಮಾಹಿತಿ ನೀಡುವುದು ಹಾಗೂ ಜಪಾನಿನಲ್ಲಿ ಉದ್ಯೋಗ ಪಡೆಯಲು ಆಸಕ್ತಿ ಹೊಂದಿರುವ ಯುವಕರಿಗೆ ಅಗತ್ಯ ಮಾರ್ಗದರ್ಶನ ಒದಗಿಸುವ ಮಹತ್ವವನ್ನು ಅವರು ವಿವರಿಸಿದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.