
ನವದೆಹಲಿ, 21 ಅಕ್ಟೋಬರ್ (ಹಿ.ಸ.):
2029ರ ಡಿಸೆಂಬರ್ 31ರೊಳಗೆ ದೇಶವನ್ನು ಮಾದಕವಸ್ತು ಸಮಸ್ಯೆಯಿಂದ ಮುಕ್ತಗೊಳಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಈ ಉದ್ದೇಶದಿಂದ 2026ರ ಉಳಿದ ಅವಧಿ ಹಾಗೂ 2027, 2028 ಮತ್ತು 2029ರ ಅವಧಿಯಲ್ಲಿ ಮಾದಕವಸ್ತುಗಳ ವಿರುದ್ಧ ಸಂಘಟಿತ ಹೋರಾಟ ನಡೆಸಲಾಗುವುದು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಹೇಳಿದರು.
ಬುಧವಾರ ಪೊಲೀಸ್ ಸ್ಮರಣ ದಿನದ ಅಂಗವಾಗಿ ನವದೆಹಲಿಯ ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿ ಹುತಾತ್ಮ ಪೊಲೀಸ್ ಸಿಬ್ಬಂದಿಗೆ ಗೌರವ ನಮನ ಸಲ್ಲಿಸಿದ ಬಳಿಕ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಮಾದಕವಸ್ತುಗಳ ವಿರುದ್ಧ ಜಾಗೃತಿ ಮೂಡಿಸುವ ದೇಶವ್ಯಾಪಿ ಮೋಟಾರ್ಸೈಕಲ್ ರ್ಯಾಲಿಗೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
ಸ್ವಾತಂತ್ರ್ಯಾನಂತರದ ಸುಮಾರು ಎಂಟು ದಶಕಗಳಲ್ಲಿ ಭಾರತ ವಿಶ್ವದಲ್ಲಿ ಗೌರವಯುತ ಸ್ಥಾನ ಗಳಿಸಿದೆ. ಈ ಸಾಧನೆಯ ಹಿಂದೆ ನಮ್ಮ ವೀರ ಯೋಧರ ತ್ಯಾಗ ಮತ್ತು ಬಲಿದಾನವಿದೆ. ಆಂತರಿಕ ಭದ್ರತೆ ಹಾಗೂ ದೇಶದ ಗಡಿಗಳ ರಕ್ಷಣೆಗಾಗಿ ಯೋಧರು ತಮ್ಮ ಪ್ರಾಣವನ್ನೇ ಅರ್ಪಿಸದಿದ್ದರೆ ಇಂದು ದೇಶ ಯಾವ ಸ್ಥಿತಿಯಲ್ಲಿರುತ್ತಿತ್ತು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ ಎಂದು ಹೇಳಿದರು.
ನಕ್ಸಲಿಸಂ ವಿರುದ್ಧದ ಹೋರಾಟದಲ್ಲಿ 3,600ಕ್ಕೂ ಹೆಚ್ಚು ಯೋಧರ ಬಲಿದಾನ
2026ನೇ ವರ್ಷ ಭಾರತೀಯ ಪೊಲೀಸರಿಗೆ ಅತ್ಯಂತ ಮಹತ್ವದ್ದಾಗಿದೆ ಎಂದು ಅಮಿತ್ ಶಾ ಹೇಳಿದರು. ದಶಕಗಳಿಂದ ದೇಶವನ್ನು ಕಾಡುತ್ತಿದ್ದ ನಕ್ಸಲಿಸಂನಿಂದ 2026ರ ಮಾರ್ಚ್ 31ರಂದು ದೇಶ ಮುಕ್ತಿ ಪಡೆದಿದೆ ಎಂದು ಅವರು ತಿಳಿಸಿದರು.
1981ರಿಂದ 2026ರ ಮಾರ್ಚ್ವರೆಗಿನ ಅವಧಿಯಲ್ಲಿ ನಕ್ಸಲಿಸಂನಿಂದಾಗಿ ದೇಶವು ಅನೇಕ ಸಂಕಷ್ಟಗಳನ್ನು ಎದುರಿಸಿದೆ. ಈ ಅವಧಿಯಲ್ಲಿ 3,600ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದು, ಸುಮಾರು 13,700 ನಿರಪರಾಧ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿದರು.
ಐದು ದಶಕಗಳಷ್ಟು ಹಳೆಯದಾದ ಈ ಸಮಸ್ಯೆಯಿಂದ ದೇಶ ಹೊರಬಂದು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯುತ್ತಿದ್ದರೆ, ಅದರ ಹಿಂದೆ ಹುತಾತ್ಮರಾದ 3,600ಕ್ಕೂ ಹೆಚ್ಚು ಯೋಧರ ತ್ಯಾಗವಿದೆ ಎಂದು ಹುತಾತ್ಮರ ಕುಟುಂಬಗಳಿಗೆ ತಿಳಿಸಲು ಬಯಸುತ್ತೇನೆ ಎಂದರು.
ಹುತಾತ್ಮರ ಕುಟುಂಬಗಳಿಗೆ ಅವರ ನಷ್ಟವನ್ನು ತುಂಬಿಕೊಡಲು ಸಾಧ್ಯವಿಲ್ಲ. ಆದರೆ 140 ಕೋಟಿ ಜನಸಂಖ್ಯೆಯ ಇಡೀ ದೇಶವು ಅವರ ಕುಟುಂಬಗಳ ಸಮರ್ಪಣೆ ಮತ್ತು ತ್ಯಾಗಕ್ಕೆ ಕೃತಜ್ಞವಾಗಿದೆ ಎಂದು ಅಮಿತ್ ಶಾ ಹೇಳಿದರು.
1959ರ ಅ.21ರಂದು ಹತ್ತು ಯೋಧರ ಬಲಿದಾನ
ಪೊಲೀಸ್ ಸ್ಮರಣ ದಿನದ ಇತಿಹಾಸವನ್ನು ವಿವರಿಸಿದ ಗೃಹ ಸಚಿವರು, 1959ರ ಅಕ್ಟೋಬರ್ 21ರಂದು ಲಡಾಖ್ನ ದುರ್ಗಮ ಹಾಟ್ ಸ್ಪ್ರಿಂಗ್ಸ್ ಪ್ರದೇಶದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ ಹತ್ತು ಯೋಧರು ಚೀನಾ ಸೇನೆಯ ದಾಳಿಯನ್ನು ಧೈರ್ಯದಿಂದ ಎದುರಿಸಿ ಪ್ರಾಣಾರ್ಪಣೆ ಮಾಡಿದ್ದರು ಎಂದು ಸ್ಮರಿಸಿದರು.
ಎತ್ತರದ ಪರ್ವತ ಪ್ರದೇಶದಲ್ಲಿ ನಡೆದ ಆ ಸಂಘರ್ಷದಲ್ಲಿ ಪರಿಸ್ಥಿತಿ ಪ್ರತಿಕೂಲವಾಗಿದ್ದರೂ, ದೇಶದ ಒಂದು ಇಂಚು ಭೂಮಿಯೂ ವಿದೇಶಿ ಶಕ್ತಿಗಳ ಪಾಲಾಗಬಾರದು ಎಂಬ ಸಂಕಲ್ಪದೊಂದಿಗೆ ಆ ಯೋಧರು ಕೊನೆಯ ಕ್ಷಣದವರೆಗೂ ಹೋರಾಡಿ ಅಮರ ಬಲಿದಾನಗೈದರು. ಅವರ ಸ್ಮರಣಾರ್ಥ ಪ್ರತಿ ವರ್ಷ ಅಕ್ಟೋಬರ್ 21ರಂದು ಪೊಲೀಸ್ ಸ್ಮರಣ ದಿನವನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಕಾಶ್ಮೀರ, ಈಶಾನ್ಯ ಭಾರತದಲ್ಲಿ ಶಾಂತಿ ಮತ್ತು ಅಭಿವೃದ್ಧಿ
ಕಳೆದ ಕೆಲವು ವರ್ಷಗಳಲ್ಲಿ ದೇಶವು ದಶಕಗಳಿಂದ ಎದುರಿಸುತ್ತಿದ್ದ ಮೂರು ಪ್ರಮುಖ ಸಮಸ್ಯೆಗಳಾದ ಕಾಶ್ಮೀರದ ಪರಿಸ್ಥಿತಿ, ಈಶಾನ್ಯ ಭಾರತದ ಸಮಸ್ಯೆಗಳು ಮತ್ತು ಎಡಪಂಥೀಯ ಉಗ್ರವಾದದ ಸವಾಲುಗಳನ್ನು ಎದುರಿಸುವಲ್ಲಿ ಪ್ರಗತಿ ಸಾಧಿಸಿದೆ ಎಂದು ಅಮಿತ್ ಶಾ ಹೇಳಿದರು.
ಈ ಮೂರು ಪ್ರದೇಶಗಳಲ್ಲಿ ಈಗ ಶಾಂತಿ ನೆಲೆಸಿದ್ದು, ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಾಣವಾಗಿದೆ. ಈ ಪ್ರದೇಶಗಳು ದೇಶದ ಇತರ ಭಾಗಗಳೊಂದಿಗೆ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಲು ಸಿದ್ಧವಾಗಿವೆ ಎಂದು ಅವರು ತಿಳಿಸಿದರು.
ಆದರೆ ದೇಶವು ಎಲ್ಲ ಸಮಸ್ಯೆಗಳಿಂದ ಸಂಪೂರ್ಣವಾಗಿ ಮುಕ್ತವಾಗಿಲ್ಲ. ಇನ್ನೂ ಹಲವು ಸವಾಲುಗಳು ಎದುರಿದ್ದು, ಅವುಗಳಲ್ಲಿ ಮಾದಕವಸ್ತುಗಳ ಸಮಸ್ಯೆ ಪ್ರಮುಖವಾಗಿದೆ ಎಂದು ಹೇಳಿದರು.
ಮಾದಕವಸ್ತುಗಳು ಯುವಪೀಳಿಗೆಯ ಭವಿಷ್ಯಕ್ಕೆ ಅಪಾಯ
ಮಾದಕವಸ್ತುಗಳ ಸಮಸ್ಯೆಯು ಮುಂದಿನ ಪೀಳಿಗೆಯನ್ನು ದುರ್ಬಲಗೊಳಿಸುವುದರ ಜೊತೆಗೆ ದೇಶದ ಆರ್ಥಿಕತೆಯ ಮೇಲೆಯೂ ಅನಗತ್ಯ ಹೊರೆ ಉಂಟುಮಾಡುತ್ತದೆ. ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಸಂಘಟನೆಗಳಿಗೆ ಮಾದಕವಸ್ತು ಕಳ್ಳಸಾಗಣೆಯಿಂದ ಹಣಕಾಸಿನ ನೆರವು ದೊರೆಯುತ್ತದೆ ಎಂದು ಅಮಿತ್ ಶಾ ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ರೂಪಿಸಿರುವ ಮಾದಕವಸ್ತು ಮುಕ್ತ ಭಾರತದ ಕಾರ್ಯಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ದೇಶದ ಎಲ್ಲ ಪೊಲೀಸ್ ಪಡೆಗಳು ಸಂಪೂರ್ಣ ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು. ಮುಂದಿನ ಪೀಳಿಗೆಯ ಭವಿಷ್ಯವನ್ನು ಸುರಕ್ಷಿತಗೊಳಿಸಲು ಸಂಘಟಿತ ಪ್ರಯತ್ನ ಅಗತ್ಯ ಎಂದು ಕರೆ ನೀಡಿದರು.
ಸುಮಾರು 90 ಸವಾರರಿಂದ ದೇಶವ್ಯಾಪಿ ರ್ಯಾಲಿ
ಗೃಹ ಸಚಿವರು ಚಾಲನೆ ನೀಡಿದ ಮೋಟಾರ್ಸೈಕಲ್ ರ್ಯಾಲಿಯಲ್ಲಿ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ಚಂಡೀಗಢ ಮತ್ತು ದೆಹಲಿಯ ಸವಾರರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ.
ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಾದ ಕೇಂದ್ರ ಮೀಸಲು ಪೊಲೀಸ್ ಪಡೆ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ಗಡಿ ಭದ್ರತಾ ಪಡೆ, ಸಶಸ್ತ್ರ ಸೀಮಾ ಬಲ, ಭಾರತ–ಟಿಬೆಟ್ ಗಡಿ ಪೊಲೀಸ್ ಪಡೆ ಮತ್ತು ರಾಷ್ಟ್ರೀಯ ಭದ್ರತಾ ಪಡೆಯ ಸದಸ್ಯರು ಭಾಗವಹಿಸಿದ್ದಾರೆ. ರೈಲ್ವೆ ರಕ್ಷಣಾ ಪಡೆ, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆಯ ಪ್ರತಿನಿಧಿಗಳೂ ಸೇರಿದಂತೆ ಸುಮಾರು 90 ಸವಾರರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಸಂಸದರಾದ ಕೃಷ್ಣ ಪ್ರಸಾದ್ ತೆನ್ನೇಟಿ ಮತ್ತು ರಾಜೀವ್ ಕುಮಾರ್, ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ ಮೋಹನ್, ಗುಪ್ತಚರ ಇಲಾಖೆಯ ನಿರ್ದೇಶಕ ಮಹೇಶ್ ದೀಕ್ಷಿತ್, ಭಾರತ–ಟಿಬೆಟ್ ಗಡಿ ಪೊಲೀಸ್ ಮಹಾನಿರ್ದೇಶಕ ಶತ್ರುಜೀತ್ ಕಪೂರ್ ಸೇರಿದಂತೆ ವಿವಿಧ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಮಹಾನಿರ್ದೇಶಕರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.