ಮುಚ್ಚಿದ ಕಲ್ಲಿದ್ದಲು ಗಣಿಗಳ ಮರುಬಳಕೆಗೆ ರೂಪಿಸಿದ ‘ಸುವಿಕಲ್ಪ’ ಯೋಜನೆಗೆ ಸ್ಕಾಚ್ ಚಿನ್ನದ ಪ್ರಶಸ್ತಿ
ನವದೆಹಲಿ, 21 ಅಕ್ಟೋಬರ್ (ಹಿ.ಸ.): ಮುಚ್ಚಿದ ಕಲ್ಲಿದ್ದಲು ಗಣಿಗಳ ಭೂಮಿಯನ್ನು ವೈಜ್ಞಾನಿಕವಾಗಿ ಮರುಬಳಕೆ ಮಾಡಿ, ಪರಿಸರ ಸಂರಕ್ಷಣೆ, ಜೀವನೋಪಾಯ ಸೃಷ್ಟಿ ಮತ್ತು ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಸಂಪನ್ಮೂಲಗಳನ್ನಾಗಿ ಪರಿವರ್ತಿಸುವ ಕೇಂದ್ರ ಸರ್ಕಾರದ ಉಪಕ್ರಮದಡಿ ಅಭಿವೃದ್ಧಿಪಡಿಸಲಾದ ‘ಸುವಿಕಲ್ಪ’ ಎಂಬ ಡಿ
कोयला नियंत्रक संगठन (सीसीओ) ने ‘सुविकल्प’


ನವದೆಹಲಿ, 21 ಅಕ್ಟೋಬರ್ (ಹಿ.ಸ.):

ಮುಚ್ಚಿದ ಕಲ್ಲಿದ್ದಲು ಗಣಿಗಳ ಭೂಮಿಯನ್ನು ವೈಜ್ಞಾನಿಕವಾಗಿ ಮರುಬಳಕೆ ಮಾಡಿ, ಪರಿಸರ ಸಂರಕ್ಷಣೆ, ಜೀವನೋಪಾಯ ಸೃಷ್ಟಿ ಮತ್ತು ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಸಂಪನ್ಮೂಲಗಳನ್ನಾಗಿ ಪರಿವರ್ತಿಸುವ ಕೇಂದ್ರ ಸರ್ಕಾರದ ಉಪಕ್ರಮದಡಿ ಅಭಿವೃದ್ಧಿಪಡಿಸಲಾದ ‘ಸುವಿಕಲ್ಪ’ ಎಂಬ ಡಿಜಿಟಲ್ ಸಾಧನಕ್ಕೆ 2026ನೇ ಸಾಲಿನ ಸ್ಕಾಚ್ ಚಿನ್ನದ ಪ್ರಶಸ್ತಿ ಲಭಿಸಿದೆ.

ಡಿಜಿಟಲ್ ಕಾರ್ಯನಿರ್ವಹಣಾ ದಕ್ಷತೆ ಮತ್ತು ದತ್ತಾಂಶ ಆಧಾರಿತ ನಿರ್ಧಾರ’ ವಿಭಾಗದಲ್ಲಿ ಈ ಪ್ರಶಸ್ತಿ ನೀಡಲಾಗಿದೆ. ಕೇಂದ್ರ ಕಲ್ಲಿದ್ದಲು ಸಚಿವಾಲಯದ ಅಧೀನದಲ್ಲಿರುವ ಕಲ್ಲಿದ್ದಲು ನಿಯಂತ್ರಣ ಸಂಸ್ಥೆಯು ಈ ಡಿಜಿಟಲ್ ಸಾಧನವನ್ನು ಅಭಿವೃದ್ಧಿಪಡಿಸಿದೆ.

ಮುಚ್ಚಿದ ಕಲ್ಲಿದ್ದಲು ಗಣಿಗಳನ್ನು ಮರುಬಳಕೆ ಮಾಡುವುದಕ್ಕೆ ಸಂಬಂಧಿಸಿದ ಯೋಜನೆಗಳನ್ನು ತಾಂತ್ರಿಕ, ಪರಿಸರ, ಸಾಮಾಜಿಕ ಮತ್ತು ಆರ್ಥಿಕ ಮಾನದಂಡಗಳ ಆಧಾರದಲ್ಲಿ ಮೌಲ್ಯಮಾಪನ ಮಾಡಲು ಹಾಗೂ ಅವುಗಳಿಗೆ ಆದ್ಯತೆ ನಿಗದಿಪಡಿಸಲು ‘ಸುವಿಕಲ್ಪ’ ನೆರವಾಗುತ್ತದೆ.

ಯೋಜನೆ ಆಯ್ಕೆಯಾದ ಬಳಿಕ ಅದರ ಅನುಷ್ಠಾನದ ರೂಪುರೇಷೆ ಸಿದ್ಧಪಡಿಸಲು ‘ಪ್ರಿಸಂ’ ಎಂಬ ಗಣಿಗಾರಿಕೆ ನಂತರದ ಮರುಬಳಕೆ ಅನುಷ್ಠಾನ ಕಾರ್ಯತಂತ್ರ ಮಾದರಿಯನ್ನು ಬಳಸಬಹುದು. ಇದರಲ್ಲಿ ಯೋಜನೆಯ ಪರಿಕಲ್ಪನೆ, ಅನುಷ್ಠಾನದ ವಿಧಾನಗಳು, ಮಾದರಿ ಯೋಜನೆಗಳು, ವಿವರವಾದ ಯೋಜನಾ ವರದಿಯ ಮಾದರಿಗಳು, ಟೆಂಡರ್ ದಾಖಲೆಗಳು ಹಾಗೂ ಸಂಬಂಧಿತ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಗಳ ಮಾಹಿತಿ ಲಭ್ಯವಿದೆ.

ಮುಚ್ಚಿದ ಗಣಿಗಳ ನಿರ್ವಹಣೆ ಮತ್ತು ಮರುಬಳಕೆಗೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಳ್ಳಲು ಕಲ್ಲಿದ್ದಲು ನಿಯಂತ್ರಣ ಸಂಸ್ಥೆಯು ‘ಸುವಿಕಲ್ಪ ಸಂವಾದ’ ಎಂಬ ಅಂತರ್ಜಾಲ ವಿಚಾರ ಸಂಕಿರಣ ಸರಣಿಯನ್ನೂ ಆಯೋಜಿಸಿದೆ. ಇದರಡಿ ಒಟ್ಟು 12 ವಿಷಯಾಧಾರಿತ ವಿಚಾರ ಸಂಕಿರಣಗಳು ನಡೆದಿವೆ.

ಈ ವಿಚಾರ ಸಂಕಿರಣಗಳಲ್ಲಿ ಗಣಿ ಪ್ರದೇಶಗಳ ಪುನಶ್ಚೇತನ ಮತ್ತು ಜೀವನೋಪಾಯ ಸೃಷ್ಟಿಯ ರೂಪುರೇಷೆ, ಸುವಿಕಲ್ಪ ಡಿಜಿಟಲ್ ಸಾಧನ, ಯೋಜನಾ ನಿರ್ವಹಣಾ ಘಟಕದ ಸ್ಥಾಪನೆ, ಸಮುದಾಯದ ಪಾಲ್ಗೊಳ್ಳುವಿಕೆ, ಪ್ರವಾಸೋದ್ಯಮ ಮತ್ತು ಪ್ರವಾಸಿ ತಾಣಗಳ ಅಭಿವೃದ್ಧಿ, ಜೀವನೋಪಾಯದ ಅವಕಾಶಗಳು ಹಾಗೂ ಹಣಕಾಸು ವ್ಯವಸ್ಥೆಗಳ ಕುರಿತು ಚರ್ಚಿಸಲಾಗಿದೆ.

ಇದರ ಜೊತೆಗೆ, ಬಳಕೆಯಲ್ಲಿಲ್ಲದ ಗಣಿಗಳಲ್ಲಿ ನೀರು ತುಂಬಿರುವ ಪ್ರದೇಶಗಳನ್ನು ನವೀನ ರೀತಿಯಲ್ಲಿ ಬಳಸಿಕೊಳ್ಳುವುದು ಮತ್ತು ಈ ಕ್ಷೇತ್ರದಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಅನುಸರಿಸಲಾದ ವಿಧಾನಗಳ ಬಗ್ಗೆಯೂ ವಿಚಾರ ಸಂಕಿರಣಗಳಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.

ಈ ಉಪಕ್ರಮದಿಂದ ಕಲ್ಲಿದ್ದಲು ಕಂಪನಿಗಳು ಗಣಿ ಮುಚ್ಚುವ ಪ್ರಕ್ರಿಯೆಯನ್ನು ಕೇವಲ ನಿಯಮಗಳ ಪಾಲನೆಗೆ ಸೀಮಿತಗೊಳಿಸದೆ, ಪರಿಸರ ಪುನಶ್ಚೇತನ, ಜೀವನೋಪಾಯ ಸೃಷ್ಟಿ, ಸಮುದಾಯದ ಅಭಿವೃದ್ಧಿ ಮತ್ತು ಆರ್ಥಿಕ ಚಟುವಟಿಕೆಗಳ ವೈವಿಧ್ಯೀಕರಣದೊಂದಿಗೆ ಜೋಡಿಸಲು ಸಾಧ್ಯವಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಮುಚ್ಚಿದ ಕಲ್ಲಿದ್ದಲು ಗಣಿಗಳನ್ನು ಉತ್ಪಾದಕ ಸಂಪನ್ಮೂಲಗಳನ್ನಾಗಿ ಪರಿವರ್ತಿಸುವುದು ಹಾಗೂ ಅವುಗಳಿಗೆ ಸಂಬಂಧಿಸಿದ ಪ್ರದೇಶಗಳ ಸುಸ್ಥಿರ ಅಭಿವೃದ್ಧಿಗೆ ಉತ್ತೇಜನ ನೀಡುವುದು ಈ ಉಪಕ್ರಮದ ಪ್ರಮುಖ ಉದ್ದೇಶವಾಗಿದೆ.

ಡಿಜಿಟಲ್ ಸಾಧನ ‘ಸುವಿಕಲ್ಪ’ಕ್ಕೆ 2026ನೇ ಸಾಲಿನ ಸ್ಕಾಚ್ ಚಿನ್ನದ ಪ್ರಶಸ್ತಿ ನೀಡುವ ಕುರಿತು ಸೆಪ್ಟೆಂಬರ್ 26ರಂದು ಘೋಷಿಸಲಾಗಿತ್ತು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande