
ನವದೆಹಲಿ, 21 ಅಕ್ಟೋಬರ್ (ಹಿ.ಸ.):
ಭಾರತದಲ್ಲಿ ಪ್ರಗತಿಯನ್ನು ತಡೆಯಲು, ಸಮಾಜದಲ್ಲಿ ವಿಭಜನೆ ಸೃಷ್ಟಿಸಲು ಹಾಗೂ ಭಾರತೀಯ ಸಂಸ್ಕೃತಿ ಮತ್ತು ಧರ್ಮದ ವಿರುದ್ಧ ದ್ವೇಷ ಹರಡಲು ಕೆಲವು ಶಕ್ತಿಗಳು ಕಾರ್ಯನಿರ್ವಹಿಸುತ್ತಿವೆ ಎಂದು ಬಿಜೆಪಿ ಆರೋಪಿಸಿದೆ. ರಾಷ್ಟ್ರದ ವಿರುದ್ಧ ಇಂತಹ ಯಾವುದೇ ಸಂಚುಗಳನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯಶಸ್ವಿಯಾಗಲು ಬಿಡುವುದಿಲ್ಲ ಎಂದು ಪಕ್ಷದ ರಾಷ್ಟ್ರೀಯ ವಕ್ತಾರ ಹಾಗೂ ರಾಜ್ಯಸಭಾ ಸದಸ್ಯ ಡಾ. ಸುಧಾಂಶು ತ್ರಿವೇದಿ ಹೇಳಿದ್ದಾರೆ.
ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಜಯದಶಮಿ ಸಂದರ್ಭದಲ್ಲಿ ಪ್ರಧಾನಿ ಮೋದಿ ದೇಶದ ಜನರಿಗೆ ಇಂತಹ ಶಕ್ತಿಗಳ ಬಗ್ಗೆ ಎಚ್ಚರಿಕೆ ನೀಡಿದ್ದರು ಎಂದು ತಿಳಿಸಿದರು. ಈ ಶಕ್ತಿಗಳ ಪ್ರಮುಖ ಉದ್ದೇಶಗಳು ಅಧಿಕಾರವನ್ನು ವೈಯಕ್ತಿಕ ಲಾಭ ಮತ್ತು ಲೂಟಿಗಾಗಿ ಬಳಸಿಕೊಳ್ಳುವುದು, ಸಮಾಜದಲ್ಲಿ ಪರಸ್ಪರ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸುವುದು ಹಾಗೂ ಭಾರತೀಯ ಸಂಸ್ಕೃತಿ ಮತ್ತು ಧರ್ಮದ ವಿರುದ್ಧ ದ್ವೇಷ ಹರಡುವುದಾಗಿದೆ ಎಂದು ಆರೋಪಿಸಿದರು.
ಕೆಲವು ಗುಂಪುಗಳು ಸನಾತನ ಧರ್ಮ ಮತ್ತು ಹಿಂದುತ್ವವನ್ನು ನಾಶಪಡಿಸುವ ಅಭಿಯಾನಗಳನ್ನು ನಡೆಸುತ್ತಿವೆ. ಭಾರತೀಯ ಸಂಸ್ಥೆಗಳ ಕುರಿತು ತಪ್ಪು ನಿರೂಪಣೆಗಳನ್ನು ಹರಡುವ ಮೂಲಕ ದೇಶದ ಪ್ರಗತಿಗೆ ಅಡ್ಡಿಪಡಿಸಲು ಪ್ರಯತ್ನಿಸುತ್ತಿವೆ ಎಂದು ತ್ರಿವೇದಿ ದೂರಿದರು.
ಈ ಗುಂಪುಗಳ ಬೇಡಿಕೆಗಳು ನಿರಂತರವಾಗಿ ಬದಲಾಗುತ್ತಿರುತ್ತವೆ ಎಂದು ಆರೋಪಿಸಿದ ಅವರು, ಭಾರತೀಯ ಜೀವ ವಿಮಾ ನಿಗಮ, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ ಕಾರ್ಯವೈಖರಿ ಕುರಿತು ಕೆಲವೊಮ್ಮೆ ಪ್ರಶ್ನೆಗಳನ್ನು ಎತ್ತಲಾಗುತ್ತದೆ. ಮತ್ತೊಮ್ಮೆ ಲಸಿಕೆಗಳು, ವಿದ್ಯುನ್ಮಾನ ಮತಯಂತ್ರಗಳು ಮತ್ತು ಮತದಾರರ ಪಟ್ಟಿಗಳ ಬಗ್ಗೆ ಆಕ್ಷೇಪಗಳನ್ನು ವ್ಯಕ್ತಪಡಿಸಲಾಗುತ್ತದೆ. ಒಂದು ಬೇಡಿಕೆಯ ನಂತರ ಮತ್ತೊಂದು ಬೇಡಿಕೆಯನ್ನು ಮುಂದಿಡಲಾಗುತ್ತದೆ ಎಂದು ಹೇಳಿದರು.
ಇದನ್ನು ರಾಮಾಯಣದಲ್ಲಿನ ರಾವಣನ ಹತ್ತು ತಲೆಗಳಿಗೆ ಹೋಲಿಸಿದ ತ್ರಿವೇದಿ, ಒಂದು ತಲೆಯನ್ನು ಕತ್ತರಿಸಿದಾಗ ಮತ್ತೊಂದು ತಲೆ ಕಾಣಿಸಿಕೊಳ್ಳುವಂತೆ ಒಂದೊಂದು ವಿಷಯದ ಬಳಿಕ ಮತ್ತೊಂದು ವಿಷಯವನ್ನು ಮುನ್ನೆಲೆಗೆ ತರಲಾಗುತ್ತಿದೆ ಎಂದು ಹೇಳಿದರು. ವಿವಿಧ ಪ್ರತಿಭಟನೆಗಳಲ್ಲಿ ಪದೇಪದೇ ಒಂದೇ ರೀತಿಯ ಪದಪ್ರಯೋಗಗಳು ಕಂಡುಬರುತ್ತಿರುವುದು ಅವುಗಳ ಹಿಂದೆ ಸಾಮಾನ್ಯ ಉದ್ದೇಶವಿರಬಹುದೆಂಬ ಸೂಚನೆ ನೀಡುತ್ತದೆ ಎಂದು ಆರೋಪಿಸಿದರು.
ವಿದೇಶ ಪ್ರವಾಸಗಳ ಬಳಿಕ ಕೆಲವು ರಾಜಕೀಯ ನಾಯಕರು ನೀಡುವ ಹೇಳಿಕೆಗಳನ್ನು ಉಲ್ಲೇಖಿಸಿದ ಅವರು, ಕೆಲವರು ವಿದೇಶದಿಂದ ಮರಳಿದ ಬಳಿಕ 'ಹೈಡ್ರೋಜನ್ ಬಾಂಬ್ ಸಿಡಿಸುತ್ತೇವೆ' ಅಥವಾ 'ಸುನಾಮಿ ಬರಲಿದೆ' ಎಂಬ ಹೇಳಿಕೆಗಳನ್ನು ನೀಡುತ್ತಾರೆ ಎಂದು ಟೀಕಿಸಿದರು. ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಬಣದ ನಾಯಕ ಸಂಜಯ್ ರಾವತ್ ಅವರ ಹೇಳಿಕೆಗಳನ್ನೂ ಇದೇ ಹಿನ್ನೆಲೆಯಲ್ಲಿ ಉಲ್ಲೇಖಿಸಿದರು. ಇಂತಹ ಹೇಳಿಕೆಗಳ ಹಿಂದೆ ಗಡಿಯಾಚೆಯಿಂದ ಭಾರತದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿರುವ ಅಪರಿಚಿತ ಮತ್ತು ಅನುಮಾನಾಸ್ಪದ ಶಕ್ತಿಗಳು ಇರಬಹುದೆಂದು ಅವರು ಶಂಕೆ ವ್ಯಕ್ತಪಡಿಸಿದರು.
ರಾಮಾಯಣದ ಪ್ರಸಂಗವನ್ನು ಉಲ್ಲೇಖಿಸಿದ ತ್ರಿವೇದಿ, ರಾವಣನು ಸೀತೆಯನ್ನು ಅಪಹರಿಸಲು ಸಾಧುವಿನ ವೇಷ ಧರಿಸಿ ಬಂದಿದ್ದನು ಎಂದು ಹೇಳಿದರು. ಅದೇ ರೀತಿ ಕೆಲವು ಶಕ್ತಿಗಳು ತಮ್ಮ ನೈಜ ಉದ್ದೇಶಗಳನ್ನು ಮರೆಮಾಚಿಕೊಂಡು ವಿವಿಧ ರೂಪಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂಬುದು ಅವರ ಆರೋಪವಾಗಿತ್ತು.
ಇಂತಹ ಶಕ್ತಿಗಳ ಉದ್ದೇಶ ಸಾರ್ವಜನಿಕವಾಗಿ ಕೆಲವು ವಿಷಯಗಳನ್ನು ಪ್ರಸ್ತಾಪಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಹಿಂಸಾತ್ಮಕ ಸಂಘರ್ಷ ಮತ್ತು ವ್ಯವಸ್ಥಿತ ಸಂಚಿನ ಮೂಲಕ ಸರ್ಕಾರವನ್ನು ಬದಲಾಯಿಸುವ ಪ್ರಯತ್ನಗಳೂ ಇದರ ಹಿಂದೆ ಇರಬಹುದು ಎಂದು ತ್ರಿವೇದಿ ಆರೋಪಿಸಿದರು. ಇಂತಹ ಪ್ರಯತ್ನಗಳ ಹಿಂದೆ ಇರುವ ನೈಜ ಉದ್ದೇಶಗಳನ್ನು ದೇಶದ ಜನರು ಅರ್ಥಮಾಡಿಕೊಳ್ಳಬೇಕು ಎಂದು ಅವರು ಹೇಳಿದರು
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.