ಸೌರಶಕ್ತಿ ಯೋಜನೆಗಳ ಅನುಷ್ಠಾನಕ್ಕೆ ಮೂರು ತಿಂಗಳ ಗಡುವು
ಚಿಕ್ಕಮಗಳೂರು, 20 ಅಕ್ಟೋಬರ್ (ಹಿ.ಸ.): ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಅನುಷ್ಠಾನಗೊಳ್ಳುತ್ತಿರುವ ಕುಸುಮ್‌-ಸಿ, ರೈತರ ಸೌರ ಪಂಪ್‌ಸೆಟ್‌ ಹಾಗೂ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಗಳನ್ನು ತ್ವರಿತವಾಗಿ ಜಾರಿಗೊಳಿಸುವಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜಿಲ್ಲಾಧಿಕ
ಸೌರಶಕ್ತಿ ಯೋಜನೆಗಳ ಅನುಷ್ಠಾನಕ್ಕೆ ಮೂರು ತಿಂಗಳ ಗಡುವು


ಚಿಕ್ಕಮಗಳೂರು, 20 ಅಕ್ಟೋಬರ್ (ಹಿ.ಸ.):

ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಅನುಷ್ಠಾನಗೊಳ್ಳುತ್ತಿರುವ ಕುಸುಮ್‌-ಸಿ, ರೈತರ ಸೌರ ಪಂಪ್‌ಸೆಟ್‌ ಹಾಗೂ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಗಳನ್ನು ತ್ವರಿತವಾಗಿ ಜಾರಿಗೊಳಿಸುವಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸೌರಶಕ್ತಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲಿಸಿದ ಅವರು, ರೈತರು ಪೂರ್ಣ ಪ್ರಮಾಣದ ಹಣ ಪಾವತಿಸಿದ್ದರೂ ಸೌರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ವರ್ಷಗಟ್ಟಲೆ ವಿಳಂಬ ಮಾಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

1,000ಕ್ಕೂ ಹೆಚ್ಚು ರೈತರಿಗೆ ಸಂಪರ್ಕ ಬಾಕಿ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಸೌರಶಕ್ತಿ ಆಧಾರಿತ ಕೃಷಿ ಪಂಪ್‌ಸೆಟ್‌ಗಳಿಗಾಗಿ ಸುಮಾರು 4,319 ರೈತರ ಅರ್ಜಿಗಳು ಅನುಮೋದನೆಗೊಂಡಿವೆ. ಈ ಪೈಕಿ 1,000ಕ್ಕೂ ಹೆಚ್ಚು ರೈತರಿಗೆ ಪಂಪ್‌ಸೆಟ್ ಸಂಪರ್ಕ ಕಲ್ಪಿಸುವುದು ಬಾಕಿ ಇದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಾಯಧನದ ನಿರೀಕ್ಷೆಯಲ್ಲಿ ರೈತರು ಶೇ.100ರಷ್ಟು ಹಣ ಪಾವತಿಸಿದ್ದರೂ ಸಂಪರ್ಕ ದೊರೆಯದೆ ವರ್ಷಗಟ್ಟಲೆ ಕಾಯುವಂತಾಗಿದೆ ಎಂಬ ದೂರುಗಳು ಕೇಳಿಬರುತ್ತಿವೆ. 3ರಿಂದ 10 ಅಶ್ವಶಕ್ತಿಯ ಸೌರ ಪಂಪ್‌ಸೆಟ್‌ಗಳಿಗೆ ತಲಾ 2ರಿಂದ 5 ಲಕ್ಷ ರೂ.ವರೆಗೆ ಸಹಾಯಧನದ ನೆರವು ದೊರೆಯಬೇಕಿದ್ದು, ಸಂಪರ್ಕ ಕಲ್ಪಿಸುವಲ್ಲಿನ ವಿಳಂಬದಿಂದ ರೈತರಿಗೆ ತೊಂದರೆಯಾಗುತ್ತಿದೆ ಎಂದು ಸಂಸದರು ಗಮನಸೆಳೆದರು.

ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಸಂಸ್ಥೆಗಳಿಗೆ ತಕ್ಷಣ ಸೂಚನೆ ನೀಡಿ, ಮುಂದಿನ ಮೂರು ತಿಂಗಳೊಳಗೆ ಬಾಕಿ ಇರುವ ಎಲ್ಲ ಪಂಪ್‌ಸೆಟ್‌ಗಳಿಗೆ ಸಂಪರ್ಕ ಕಲ್ಪಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ರೈತರ ಪಂಪ್‌ಸೆಟ್‌ಗಳ ಸಂಪರ್ಕ ಕಲ್ಪಿಸಲು ಸಹಕರಿಸದ ಗುತ್ತಿಗೆದಾರರು ಮತ್ತು ಪೂರೈಕೆದಾರ ಸಂಸ್ಥೆಗಳನ್ನು ಗುರುತಿಸಿ ತನಿಖೆ ನಡೆಸುವಂತೆಯೂ ಸಲಹೆ ನೀಡಿದರು.

ಸೌರ ಉದ್ಯಾನ ಸ್ಥಾಪನೆಗೆ ಒತ್ತು

ಕುಸುಮ್‌-ಸಿ ಯೋಜನೆಯಡಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಮಾರು ಏಳು ಪ್ರದೇಶಗಳಲ್ಲಿ ಸೌರ ವಿದ್ಯುತ್ ಉದ್ಯಾನಗಳನ್ನು ಸ್ಥಾಪಿಸಲು ಅವಕಾಶವಿದೆ. ಆದರೆ, ಯೋಜನೆಯ ಅನುಷ್ಠಾನದಲ್ಲಿ ವಿಳಂಬವಾಗುತ್ತಿರುವುದರಿಂದ ಕೇಂದ್ರ ಸರ್ಕಾರದ ಅನುದಾನ ಮರಳಿಹೋಗುವ ಆತಂಕ ಎದುರಾಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಈ ಯೋಜನೆಯಡಿ ಅಂದಾಜು 98 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಅವಕಾಶವಿದ್ದು, ಅದನ್ನು ಕೈತಪ್ಪದಂತೆ ನೋಡಿಕೊಳ್ಳಬೇಕು. ಆರಂಭಿಕ ಹಂತದಲ್ಲಿ ಯಾವುದೇ ವಿವಾದಗಳಿಲ್ಲದ ಭೂಮಿಯನ್ನು ಗುರುತಿಸಿ, ಸೌರ ವಿದ್ಯುತ್ ಉದ್ಯಾನಗಳ ಸ್ಥಾಪನೆಗೆ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಸೂಚಿಸಿದರು.

ಸೂರ್ಯ ಘರ್ ಯೋಜನೆಗೆ ಪ್ರಚಾರದ ಕೊರತೆ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯಡಿ ಈವರೆಗೆ 824 ಮನೆಗಳಲ್ಲಿ ಸೌರ ವಿದ್ಯುತ್ ವ್ಯವಸ್ಥೆ ಅಳವಡಿಸಲಾಗಿದೆ. ಮನೆಗಳ ಛಾವಣಿಗಳ ಮೇಲೆ ಸೌರ ಫಲಕಗಳನ್ನು ಅಳವಡಿಸಿದ ಬಳಿಕ ಎರಡು ವಾರಗಳಲ್ಲಿ ಕೇಂದ್ರ ಸರ್ಕಾರವು ಗೃಹ ಬಳಕೆಯ ವಿದ್ಯುತ್ ಸಂಪರ್ಕ ಹೊಂದಿರುವ ಫಲಾನುಭವಿಗಳಿಗೆ ಬ್ಯಾಂಕ್ ಮೂಲಕ 78,000 ರೂ.ವರೆಗೆ ಸಹಾಯಧನ ಪಾವತಿಸುತ್ತಿದೆ ಎಂದು ಸಂಸದರು ತಿಳಿಸಿದರು.

ಬ್ಯಾಂಕ್‌ಗಳು ಸಾಲ ಸೌಲಭ್ಯ ಒದಗಿಸಲು ಮುಂದಾಗಿದ್ದರೂ, ಯೋಜನೆಯ ಕುರಿತು ಸಾಕಷ್ಟು ಪ್ರಚಾರ ಇಲ್ಲದ ಕಾರಣ ಅನುಷ್ಠಾನ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ ಎಂದು ಅವರು ಹೇಳಿದರು.

ಈ ಹಿನ್ನೆಲೆಯಲ್ಲಿ ಮೆಸ್ಕಾಂ ವತಿಯಿಂದ ಸೂರ್ಯ ಘರ್ ಯೋಜನೆಯ ಕುರಿತು ಮಾಹಿತಿ ಶಿಬಿರಗಳನ್ನು ಆಯೋಜಿಸಿ, ಸಾರ್ವಜನಿಕರಿಗೆ ಯೋಜನೆಯ ಪ್ರಯೋಜನಗಳು, ಸಹಾಯಧನ ಮತ್ತು ಸಾಲ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.

ಕುಸುಮ್‌-ಸಿ ಸೌರ ವಿದ್ಯುತ್ ಉದ್ಯಾನ ಯೋಜನೆ, ಕುಸುಮ್‌-ಬಿ ರೈತರ ಸೌರ ಪಂಪ್‌ಸೆಟ್ ಯೋಜನೆ ಹಾಗೂ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಗಳ ಅನುಷ್ಠಾನವನ್ನು ತೀವ್ರಗೊಳಿಸಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಭೆಯಲ್ಲಿ ಒತ್ತಾಯಿಸಿದರು ಎಂದು ಸಂಸದರ ಮಾಧ್ಯಮ ಪ್ರಕಟಣೆ ತಿಳಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande