ಆಸ್ತಿ ತೆರಿಗೆ ವಂಚನೆಗೆ ಕಡಿವಾಣ: ಬೆಂಗಳೂರಿನಲ್ಲಿ ಲೇಸರ್ಮೀಟರ್ ಮೂಲಕ ಕಟ್ಟಡಗಳ ಅಳತೆ
ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ವಂಚನೆ ತಡೆಯಲು ಲೇಸರ್ಮೀಟರ್, ಮೊಬೈಲ್ ಆಯಪ್ ಹಾಗೂ ಉಪಗ್ರಹ ಚಿತ್ರಗಳ ಮೂಲಕ ಕಟ್ಟಡಗಳ ನೈಜ ವಿಸ್ತೀರ್ಣ ಅಳೆಯುವ ಪ್ರಾಯೋಗಿಕ ಯೋಜನೆಯನ್ನು ಪಾಲಿಕೆ ಪರಿಶೀಲಿಸುತ್ತಿದೆ.
bengaluru-property-tax-evasion-laser-meter-building-survey


ಬೆಂಗಳೂರು, 20 ಅಕ್ಟೋಬರ್ (ಹಿ.ಸ.):

ರಾಜಧಾನಿ ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ವಂಚನೆಗೆ ಕಡಿವಾಣ ಹಾಕಲು ಹಾಗೂ ಕಟ್ಟಡಗಳ ನೈಜ ವಿಸ್ತೀರ್ಣವನ್ನು ನಿಖರವಾಗಿ ಪತ್ತೆಹಚ್ಚಲು ಬೆಂಗಳೂರು ದಕ್ಷಿಣ ನಗರ ಪಾಲಿಕೆ ಹೊಸ ತಂತ್ರಜ್ಞಾನದ ಮೊರೆ ಹೋಗಿದೆ.

ಕಟ್ಟಡಗಳ ವಿಸ್ತೀರ್ಣವನ್ನು ಕಡಿಮೆ ತೋರಿಸಿ ತೆರಿಗೆ ಪಾವತಿಸುವುದನ್ನು ತಡೆಯುವ ಉದ್ದೇಶದಿಂದ ಲೇಸರ್ಮೀಟರ್ ಹಾಗೂ ಉಪಗ್ರಹ ಚಿತ್ರಗಳ ಆಧಾರದಲ್ಲಿ ಅಳತೆ ಮಾಡುವ ಪ್ರಾಯೋಗಿಕ ಯೋಜನೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ತಿಳಿಸಿದ್ದಾರೆ.

ಲೇಸರ್ಮೀಟರ್ ಮೂಲಕ ನಿಖರ ಅಳತೆ

ಸಾಮಾನ್ಯವಾಗಿ ಕಟ್ಟಡಗಳ ವಿಸ್ತೀರ್ಣವನ್ನು ಮೆಟ್ರಿಕ್ ಟೇಪ್ ಬಳಸಿ ಅಳೆಯಲಾಗುತ್ತದೆ. ಆದರೆ, ಹೊಸ ವ್ಯವಸ್ಥೆಯಲ್ಲಿ ಲೇಸರ್ಮೀಟರ್ ಉಪಕರಣದ ಮೂಲಕ ಕಟ್ಟಡದ ಗೋಡೆಗಳ ನಡುವಿನ ಅಂತರವನ್ನು ನಿಖರವಾಗಿ ಗುರುತಿಸಿ ಅಳತೆ ಮಾಡಲಾಗುತ್ತದೆ.

ಉಪಕರಣದ ಲೇಸರ್ನ್ನು ನಿರ್ದಿಷ್ಟ ಬಿಂದುಗಳ ಮೇಲೆ ಕೇಂದ್ರೀಕರಿಸಿ ಅಳತೆ ದಾಖಲಿಸುವುದರಿಂದ ಕಟ್ಟಡದ ವಿಸ್ತೀರ್ಣ ಲೆಕ್ಕಾಚಾರವನ್ನು ಸುಲಭಗೊಳಿಸಬಹುದು.

ಇದರೊಂದಿಗೆ ಮೊಬೈಲ್ ಆಯಪ್ ಹಾಗೂ ಗೂಗಲ್ ಸ್ಯಾಟಲೈಟ್ ಚಿತ್ರಗಳನ್ನೂ ಬಳಸಿಕೊಳ್ಳಲಾಗುತ್ತಿದೆ. ಉಪಗ್ರಹ ಚಿತ್ರಗಳಲ್ಲಿ ಕಟ್ಟಡದ ಹೊರಭಾಗವನ್ನು ಡಿಜಿಟಲ್ ಪಾಲಿಗಾನ್ ಗುರುತುಗಳ ಮೂಲಕ ಗುರುತಿಸಿ ವಿಸ್ತೀರ್ಣ ಲೆಕ್ಕಹಾಕಲಾಗುತ್ತದೆ.

ಬಳಿಕ ಲೇಸರ್ಮೀಟರ್ ನೆರವಿನಿಂದ ಕಟ್ಟಡದ ಒಳಗಿನ ಕೊಠಡಿಗಳು ಹಾಗೂ ವಿವಿಧ ಮಹಡಿಗಳ ವಿಸ್ತೀರ್ಣವನ್ನು ಅಳೆಯಲಾಗುತ್ತದೆ.

ಈ ಎರಡೂ ವಿಧಾನಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ತುಲನೆ ಮಾಡಿ ಕಟ್ಟಡದ ಒಟ್ಟು ವಿಸ್ತೀರ್ಣವನ್ನು ನಿಖರವಾಗಿ ದಾಖಲಿಸುವುದು ಯೋಜನೆಯ ಉದ್ದೇಶವಾಗಿದೆ.

ಇದರಿಂದ ಕಟ್ಟಡದ ನೈಜ ಅಳತೆ ಮತ್ತು ಆಸ್ತಿ ತೆರಿಗೆ ದಾಖಲೆಗಳ ನಡುವಿನ ವ್ಯತ್ಯಾಸವನ್ನು ಪತ್ತೆಹಚ್ಚಲು ಸಾಧ್ಯವಾಗಲಿದೆ ಎಂಬ ನಿರೀಕ್ಷೆಯಿದೆ.

ಕಡಿಮೆ ವೆಚ್ಚದಲ್ಲಿ ಸರ್ವೆ ನಡೆಸುವ ಉದ್ದೇಶ

ಈ ಹಿಂದೆ ಪಾಲಿಕೆಯು ಕಟ್ಟಡಗಳ ವಿಸ್ತೀರ್ಣ ಪತ್ತೆಹಚ್ಚಲು ಡ್ರೋನ್ ಸರ್ವೆ ನಡೆಸಿತ್ತು. ಇದೀಗ ಲೇಸರ್ಮೀಟರ್ ಹಾಗೂ ಮೊಬೈಲ್ ಆಯಪ್ ಆಧಾರಿತ ವ್ಯವಸ್ಥೆಯನ್ನು ಬಳಸಿಕೊಂಡು ಕಡಿಮೆ ವೆಚ್ಚದಲ್ಲಿ ಹೆಚ್ಚು ನಿಖರವಾದ ಅಳತೆ ನಡೆಸುವ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ.

ಆಸ್ತಿ ಮಾಲೀಕರು ಕಟ್ಟಡದ ನೈಜ ವಿಸ್ತೀರ್ಣವನ್ನು ಮರೆಮಾಚಿ ಅಥವಾ ಕಡಿಮೆ ವಿಸ್ತೀರ್ಣ ದಾಖಲಿಸಿ ತೆರಿಗೆ ಪಾವತಿಸುವುದರಿಂದ ಪಾಲಿಕೆಗೆ ಆಗಬಹುದಾದ ಆದಾಯ ನಷ್ಟವನ್ನು ತಡೆಯಲು ಈ ತಂತ್ರಜ್ಞಾನ ಸಹಕಾರಿಯಾಗುವ ನಿರೀಕ್ಷೆಯಿದೆ.

ಸದ್ಯ ಪ್ರಾಯೋಗಿಕ ಹಂತದಲ್ಲಷ್ಟೇ

ಲೇಸರ್ಮೀಟರ್ ಮತ್ತು ಉಪಗ್ರಹ ಚಿತ್ರ ಆಧಾರಿತ ಸರ್ವೆ ಇನ್ನೂ ಪ್ರಾಯೋಗಿಕ ಹಂತದಲ್ಲಿದೆ ಎಂದು ಆಯುಕ್ತ ಕೆ.ಎನ್. ರಮೇಶ್ ಸ್ಪಷ್ಟಪಡಿಸಿದ್ದಾರೆ. ಈ ತಂತ್ರಜ್ಞಾನವನ್ನು ಪಾಲಿಕೆ ವ್ಯಾಪ್ತಿಯಲ್ಲಿ ಕಾಯಂ ಆಗಿ ಜಾರಿಗೊಳಿಸುವ ಕುರಿತು ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಪ್ರಾಯೋಗಿಕ ಪರೀಕ್ಷೆಯ ಫಲಿತಾಂಶಗಳನ್ನು ಪರಿಶೀಲಿಸಿದ ಬಳಿಕ ಮುಂದಿನ ಕ್ರಮಗಳ ಬಗ್ಗೆ ನಿರ್ಧರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande