
ಬೆಂಗಳೂರು, 20 ಅಕ್ಟೋಬರ್ (ಹಿ.ಸ.):
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪನಾ ದಿನ ಹಾಗೂ ವಿಜಯದಶಮಿ ಅಂಗವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್. ಅಶೋಕ ಹಾಗೂ ಬಿಜೆಪಿ ನಾಯಕ ಸಿ.ಟಿ. ರವಿ ಅವರು ಸಂಘದ ಸ್ವಯಂಸೇವಕರಿಗೆ ಶುಭಾಶಯ ಕೋರಿದ್ದಾರೆ.
ರಾಷ್ಟ್ರಸೇವೆಯಲ್ಲಿ ತೊಡಗಿರುವ ಸ್ವಯಂಸೇವಕರಿಗೆ ಶುಭಾಶಯ: ಯಡಿಯೂರಪ್ಪ
ರಾಷ್ಟ್ರಸೇವೆ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಎಲ್ಲ ಸ್ವಯಂಸೇವಕರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪನಾ ದಿನದ ಹಾರ್ದಿಕ ಶುಭಾಶಯಗಳು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಸಾಮಾಜಿಕ ಜಾಲತಾಣದ ಸಂದೇಶದಲ್ಲಿ ತಿಳಿಸಿದ್ದಾರೆ.
ಕೋಟ್ಯಂತರ ಮನಸ್ಸುಗಳಲ್ಲಿ ರಾಷ್ಟ್ರೀಯ ಪ್ರಜ್ಞೆ ಜಾಗೃತ: ವಿಜಯೇಂದ್ರ
ಪರಮಪೂಜ್ಯ ಡಾ. ಕೇಶವ ಬಲಿರಾಮ್ ಹೆಡಗೆವಾರ್ ಅವರು 1925ರ ವಿಜಯದಶಮಿಯ ಪವಿತ್ರ ದಿನದಂದು ಆರಂಭಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘವು ಇಂದು ವಿಶ್ವವ್ಯಾಪಿಯಾಗಿ ಬೆಳೆದು, ರಾಷ್ಟ್ರಸೇವೆ ಹಾಗೂ ಭಾರತೀಯ ಸಂಸ್ಕೃತಿಯ ರಕ್ಷಣೆಯಲ್ಲಿ ಏಕನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಶಿಸ್ತು, ದೇಶಭಕ್ತಿ, ತ್ಯಾಗ ಮತ್ತು ನಿಸ್ವಾರ್ಥ ಸಮಾಜಸೇವೆಯ ಸಂಸ್ಕಾರವನ್ನು ಕೋಟ್ಯಂತರ ಜನರ ಮನಸ್ಸಿನಲ್ಲಿ ಬಿತ್ತುವ ಮೂಲಕ ರಾಷ್ಟ್ರೀಯ ಪ್ರಜ್ಞೆಯನ್ನು ಜಾಗೃತಗೊಳಿಸುತ್ತಿರುವ ಸಂಘದ ಸ್ವಯಂಸೇವಕರು, ಹಿತೈಷಿಗಳು, ಅಭಿಮಾನಿಗಳು ಹಾಗೂ ರಾಷ್ಟ್ರನಿಷ್ಠ ನಾಗರಿಕರಿಗೆ ಸ್ಥಾಪನಾ ದಿನದ ಶುಭಾಶಯಗಳನ್ನು ಅವರು ತಿಳಿಸಿದ್ದಾರೆ.
ರಾಷ್ಟ್ರಭಕ್ತಿ, ಶಿಸ್ತು ಮತ್ತು ಸೇವಾ ಮನೋಭಾವ ಬಲಗೊಳ್ಳಲಿ: ಅಶೋಕ
ರಾಷ್ಟ್ರಸೇವೆ, ಸಮಾಜಸೇವೆ ಹಾಗೂ ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಸಮರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಎಲ್ಲ ಸ್ವಯಂಸೇವಕರಿಗೆ ಸಂಘದ ಸ್ಥಾಪನಾ ದಿನ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ತಿಳಿಸಿದ್ದಾರೆ.
ರಾಷ್ಟ್ರಭಕ್ತಿ, ಶಿಸ್ತು ಮತ್ತು ಸೇವಾ ಮನೋಭಾವದ ಮೌಲ್ಯಗಳು ಸಮಾಜದಲ್ಲಿ ಮತ್ತಷ್ಟು ಬಲಗೊಳ್ಳಲಿ ಎಂದು ಅವರು ಹಾರೈಸಿದ್ದಾರೆ.
ಸಂಘ ಕೇವಲ ಸಂಘಟನೆಯಲ್ಲ, ಅದೊಂದು ಜೀವನಪದ್ಧತಿ: ಸಿ.ಟಿ. ರವಿ
“ರಾಷ್ಟ್ರಾಯ ಸ್ವಾಹಾ, ರಾಷ್ಟ್ರಾಯ, ಇದಂ ನ ಮಮ” ಎಂಬ ಧ್ಯೇಯವಾಕ್ಯವನ್ನು ಉಲ್ಲೇಖಿಸಿರುವ ಬಿಜೆಪಿ ನಾಯಕ ಸಿ.ಟಿ. ರವಿ, ರಾಷ್ಟ್ರೀಯ ಸ್ವಯಂಸೇವಕ ಸಂಘ ಕೇವಲ ಒಂದು ಸಂಘಟನೆಯಲ್ಲ; ಅದೊಂದು ಜೀವನಪದ್ಧತಿ ಮತ್ತು ಸಂಸ್ಕಾರದ ಮನೆ ಎಂದು ಹೇಳಿದ್ದಾರೆ.
ಸಂಘದ ಶಾಖೆಯಲ್ಲಿ ಕಲಿತ ಶಿಸ್ತು, ಮಾತೃಭೂಮಿಯ ಮೇಲಿನ ನಿಷ್ಠೆ ಹಾಗೂ ನಿಸ್ವಾರ್ಥ ಸೇವೆಯ ಮೌಲ್ಯಗಳು ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ದಾರಿದೀಪವಾಗಿವೆ ಎಂದು ತಿಳಿಸಿದ್ದಾರೆ.
ಡಾ. ಕೇಶವ ಬಲಿರಾಮ್ ಹೆಡಗೆವಾರ್ ಅವರು 1925ರ ವಿಜಯದಶಮಿಯಂದು ಹಚ್ಚಿದ ವಿಚಾರದ ಹಣತೆ ಇಂದು ಕೋಟ್ಯಂತರ ಮನಸ್ಸುಗಳಲ್ಲಿ ರಾಷ್ಟ್ರೀಯ ಪ್ರಜ್ಞೆಯನ್ನು ಜಾಗೃತಗೊಳಿಸುವ ಬೃಹತ್ ವಟವೃಕ್ಷವಾಗಿ ಬೆಳೆದಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಂಘದ ಶಾಖೆಯಲ್ಲಿ ಕಲಿತ ಸಂಸ್ಕಾರ ಹಾಗೂ “ರಾಷ್ಟ್ರವೇ ಮೊದಲು” ಎಂಬ ತತ್ತ್ವವು ತಮ್ಮ ಸಾರ್ವಜನಿಕ ಜೀವನದ ಪ್ರತಿಯೊಂದು ಹೆಜ್ಜೆಗೂ ಶಕ್ತಿ ನೀಡಿದೆ ಎಂದು ಸಿ.ಟಿ. ರವಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.