ಆರ್.ಎಸ್.ಎಸ್. ಶತಮಾನೋತ್ಸವ:ಪ್ರಧಾನಿ ಮೋದಿ, ಅಮಿತ್ ಶಾ ಶುಭಾಶಯ
ನವದೆಹಲಿ, 20 ಅಕ್ಟೋಬರ್ (ಹಿ.ಸ.): ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪನಾ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಮಂಗಳವಾರ ಸಂಘದ ಎಲ್ಲ ಸ್ವಯಂಸೇವಕರಿಗೆ ಶುಭಾಶಯ ಕೋರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಂ
प्रतीकात्मक


ನವದೆಹಲಿ, 20 ಅಕ್ಟೋಬರ್ (ಹಿ.ಸ.):

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪನಾ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಮಂಗಳವಾರ ಸಂಘದ ಎಲ್ಲ ಸ್ವಯಂಸೇವಕರಿಗೆ ಶುಭಾಶಯ ಕೋರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಂದೇಶ ಪ್ರಕಟಿಸಿ, ಸಂಘವನ್ನು ತಮ್ಮ ನಿರಂತರ ಪರಿಶ್ರಮ ಮತ್ತು ಸೇವಾ ಮನೋಭಾವದಿಂದ ಬೆಳೆಸಿದ ಮಹನೀಯರಿಗೆ ನಮನ ಸಲ್ಲಿಸಿದ್ದಾರೆ. ಸೇವೆ, ರಾಷ್ಟ್ರ ನಿರ್ಮಾಣ ಮತ್ತು ಸಾಮಾಜಿಕ ಬದ್ಧತೆಯೊಂದಿಗೆ ಸಂಘವು ಶತಮಾನದ ಪಯಣವನ್ನು ಪೂರ್ಣಗೊಳಿಸಿದೆ ಎಂದು ಅವರು ತಿಳಿಸಿದ್ದಾರೆ.

ಸಂಘದ ಅಸಂಖ್ಯಾತ ಸ್ವಯಂಸೇವಕರು ತಮ್ಮ ಸಮರ್ಪಣೆ, ಕರ್ತವ್ಯನಿಷ್ಠೆ ಮತ್ತು ರಾಷ್ಟ್ರವೇ ಮೊದಲು ಎಂಬ ಮನೋಭಾವದೊಂದಿಗೆ ಸಮಾಜದ ಉನ್ನತಿಗಾಗಿ ನಿರಂತರವಾಗಿ ಶ್ರಮಿಸಿದ್ದಾರೆ. ಈ ಮನೋಭಾವ ಮುಂದಿನ ದಿನಗಳಲ್ಲಿಯೂ ದೇಶವನ್ನು ಮತ್ತಷ್ಟು ಬಲಿಷ್ಠಗೊಳಿಸಲಿದೆ ಎಂಬ ವಿಶ್ವಾಸವಿದೆ ಎಂದು ಮೋದಿ ಹೇಳಿದ್ದಾರೆ.

ನಾಗಪುರದಲ್ಲಿ ನಡೆದ ಶತಮಾನೋತ್ಸವ ವಿಜಯದಶಮಿ ಕಾರ್ಯಕ್ರಮದಲ್ಲಿ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಮಾಡಿದ ಭಾಷಣವನ್ನು ಪ್ರಧಾನಿ ಪ್ರೇರಣಾದಾಯಕ ಎಂದು ಬಣ್ಣಿಸಿದ್ದಾರೆ. ರಾಷ್ಟ್ರೀಯ ಪ್ರಗತಿ, ಸಾಮಾಜಿಕ ಏಕತೆ, ಸ್ವಾವಲಂಬನೆಯ ಅಗತ್ಯ ಮತ್ತು ಸಮಾಜದ ಚಾರಿತ್ರ್ಯವನ್ನು ಬಲಪಡಿಸುವ ಕುರಿತು ಭಾಗವತ್ ವಿಸ್ತೃತವಾಗಿ ಮಾತನಾಡಿದ್ದಾರೆ ಎಂದು ತಿಳಿಸಿದ್ದಾರೆ.

ವಿಶೇಷವಾಗಿ ಸೇವೆ ಮತ್ತು ರಾಷ್ಟ್ರ ನಿರ್ಮಾಣದ ಬದ್ಧತೆಯನ್ನು ಅವರು ಒತ್ತಿಹೇಳಿದ್ದು, ಇದು ಪ್ರತಿಯೊಬ್ಬ ಸಂಘದ ಸ್ವಯಂಸೇವಕನ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ಮೋದಿ ಹೇಳಿದ್ದಾರೆ. ಅಲ್ಲದೆ, ಪಂಚ ಪರಿವರ್ತನೆಯ ಕುರಿತು ಪ್ರಸ್ತಾಪಿಸಿದ ಭಾಗವತ್, ಅವು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲು ಹೇಗೆ ನೆರವಾಗಬಲ್ಲವು ಎಂಬುದನ್ನು ವಿವರಿಸಿದ್ದಾರೆ ಎಂದು ತಿಳಿಸಿದ್ದಾರೆ.

ದೇಶಭಕ್ತಿಯ ಜಾಗೃತಿಯಲ್ಲಿ ಸಂಘದ ಪಾತ್ರ: ಅಮಿತ್ ಶಾ

ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರು ಸಂಘದ ಸ್ಥಾಪನಾ ದಿನದ ಶುಭಾಶಯ ಕೋರಿ, ಭಾರತೀಯ ಸಂಸ್ಕೃತಿಯ ಬೇರುಗಳನ್ನು ಪೋಷಿಸುವುದು, ಸಮಾಜದಲ್ಲಿ ದೇಶಭಕ್ತಿಯ ಜ್ಯೋತಿಯನ್ನು ಬೆಳಗಿಸುವುದು ಮತ್ತು ಯುವಜನರನ್ನು ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ತೊಡಗಿಸುವ ಮಹತ್ವದ ಕಾರ್ಯದಲ್ಲಿ ಸಂಘ ನಿರತವಾಗಿದೆ ಎಂದು ಹೇಳಿದ್ದಾರೆ.

ದೇಶಾದ್ಯಂತ ಸಂಘದ ಸ್ವಯಂಸೇವಕರು ಕೈಗೊಳ್ಳುತ್ತಿರುವ ಸೇವಾ ಕಾರ್ಯಗಳು ಬಲಿಷ್ಠ, ಸಮೃದ್ಧ ಮತ್ತು ಸ್ವಾವಲಂಬಿ ಭಾರತ ನಿರ್ಮಾಣದ ಸಂಕಲ್ಪವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿವೆ ಎಂದು ತಿಳಿಸಿದ್ದಾರೆ.

ಸೇವೆ, ಮೌಲ್ಯಗಳು ಮತ್ತು ದೇಶಭಕ್ತಿಯ ಈ ನಿರಂತರ ಧಾರೆ ಮುಂದಿನ ಪೀಳಿಗೆಗಳಲ್ಲಿಯೂ ಮಾತೃಭೂಮಿಯ ಮೇಲಿನ ಪ್ರೀತಿಯ ಜ್ಯೋತಿಯನ್ನು ಯುಗಯುಗಾಂತರಗಳವರೆಗೆ ಬೆಳಗಿಸುತ್ತಿರಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

ನಾಗಪುರದಲ್ಲಿ 101ನೇ ಸ್ಥಾಪನಾ ದಿನಾಚರಣೆ

ರಾಷ್ಟ್ರೀಯ ಸ್ವಯಂಸೇವಕ ಸಂಘವು ವಿಜಯದಶಮಿ ಅಂಗವಾಗಿ ಮಂಗಳವಾರ ನಾಗಪುರದ ರೇಶಿಂಬಾಗ್ ಮೈದಾನದಲ್ಲಿ ತನ್ನ 101ನೇ ಸ್ಥಾಪನಾ ದಿನವನ್ನು ಆಚರಿಸಿತು. ಈ ಸಂದರ್ಭದಲ್ಲಿ ಸಂಘದ ಮುಖ್ಯಸ್ಥ ಡಾ. ಮೋಹನ್ ಭಾಗವತ್ ಅವರು ಆಯುಧಗಳು ಮತ್ತು ಗುರಾಣಿಗಳಿಗೆ ಸಾಂಪ್ರದಾಯಿಕ ಶಸ್ತ್ರಪೂಜೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಸಂಸ್ಥಾಪಕ ಡಾ. ಕೇಶವ ಬಲಿರಾಮ ಹೆಡಗೆವಾರ್ ಅವರಿಗೆ ಪುಷ್ಪನಮನ ಸಲ್ಲಿಸಲಾಯಿತು. ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಗಣ್ಯರು ರಾಷ್ಟ್ರದ ಸೇವೆಯಲ್ಲಿ ಸಂಘದ ಸ್ವಯಂಸೇವಕರು ತೋರುತ್ತಿರುವ ಸಮರ್ಪಣಾ ಮನೋಭಾವವನ್ನು ಶ್ಲಾಘಿಸಿದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande