
ಶಿವಮೊಗ್ಗ, 20 ಅಕ್ಟೋಬರ್ (ಹಿ.ಸ.):
ಶಾಲಾ ಶಿಕ್ಷಣ ಇಲಾಖೆಯ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ 2026–27ನೇ ಸಾಲಿಗೆ ಶಿವಮೊಗ್ಗ ಜಿಲ್ಲೆಯ ಏಳು ಬ್ಲಾಕ್ ಸಂಪನ್ಮೂಲ ಕೇಂದ್ರಗಳಲ್ಲಿ ತಲಾ ಒಬ್ಬರಂತೆ ಮಾನಸಿಕ ಆರೋಗ್ಯ ಸಲಹೆಗಾರರು ಅಥವಾ ಸಮಾಲೋಚಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ತಾತ್ಕಾಲಿಕವಾಗಿ ಫೆಬ್ರವರಿ 2027ರವರೆಗೆ ನೇಮಕ ಮಾಡಿಕೊಳ್ಳಲಾಗುವುದು. ಈ ಹಿಂದೆ ನಿಗದಿಪಡಿಸಲಾಗಿದ್ದ ಅಭ್ಯರ್ಥಿಗಳ ವಯೋಮಿತಿಯನ್ನು ಇದೀಗ 26ರಿಂದ 50 ವರ್ಷಕ್ಕೆ ಮರುನಿಗದಿಪಡಿಸಲಾಗಿದೆ.
ಮನೋವಿಜ್ಞಾನ, ವೈದ್ಯಕೀಯ ಮನೋವಿಜ್ಞಾನ ಅಥವಾ ಸಮಾಲೋಚನಾ ಮನೋವಿಜ್ಞಾನ ಸಂಬಂಧಿತ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಹಾಗೂ ಸೇವಾನುಭವ ಹೊಂದಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಆಸಕ್ತರು ಶಿವಮೊಗ್ಗದ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ (ಆಡಳಿತ) ಕಚೇರಿಯಿಂದ ಅರ್ಜಿ ನಮೂನೆ ಪಡೆದು, ಅಗತ್ಯ ದಾಖಲೆಗಳೊಂದಿಗೆ ಅಕ್ಟೋಬರ್ 27, 2026ರೊಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ 9480695460, 9480695461 ದೂರವಾಣಿ ಸಂಖ್ಯೆಗಳನ್ನು ಅಥವಾ egovshimoga@gmail.com ಇ-ಮೇಲ್ ವಿಳಾಸವನ್ನು ಸಂಪರ್ಕಿಸಬಹುದು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಸಮಗ್ರ ಶಿಕ್ಷಣ ಕರ್ನಾಟಕದ ಯೋಜನಾ ಸಮನ್ವಯಾಧಿಕಾರಿಗಳು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.