
ಕೋಲಾರ, ೨೦ ಅಕ್ಟೋಬರ್ (ಹಿ.ಸ) ವಿಶ್ವ ಪ್ರಸಿದ್ಧ ಕರ್ನಾಟಕದ ಮೈಸೂರಿನ ಐತಿಹಾಸಿಕ ದಸರಾ ಮಹೋತ್ಸವದ ಅಂಗವಾಗಿ ಮೈಸೂರಿನ ಕಲಾಮಂದಿರದ ಹತ್ತಿರವಿರುವ ಕಿರು ರಂಗಮ0ದಿರದಲ್ಲಿ ಅದ್ಧೂರಿ ಜಾನಪದ ಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಕೋಲಾರ ಜಿಲ್ಲೆಯ ಕಲಾವಿದರು ಭಾಗಿಯಾಗಿದ್ದರು.
ಬಂಗಾರಪೇಟೆ ತಾಲ್ಲೂಕಿನ ಹಿರೇಕರಪನಹಳ್ಳಿಯ ಖ್ಯಾತ ಜಾನಪದ ಗಾಯಕ ಮಾರುತಿ ಪ್ರಸಾದ್ ಹಾಗೂ ಅವರ ಸಾಂಸ್ಕೃತಿಕ ಕಲಾ ತಂಡದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ತಮ್ಮ ಗಾಯನ ಹಾಗೂ ವಾದನದ ಮೂಲಕ ಪ್ರೇಕ್ಷಕರ ಮನಸೂರೆಗೊಂಡರು. ನಾಡಿನ ಶ್ರೀಮಂತ ಜನಪದ ಸಂಸ್ಕೃತಿಯನ್ನು ಬಿಂಬಿಸುವ ಹಲವು ಗೀತೆಗಳನ್ನು ಪ್ರಸ್ತುತಪಡಿಸುವ ಮೂಲಕ ದಸರಾ ಸಾಂಸ್ಕೃತಿಕ ಹಬ್ಬದ ಕಳೆಯನ್ನು ಕಲಾವಿದರು ಹೆಚ್ಚಿಸಿದರು.
ಮಾರುತಿ ಪ್ರಸಾದ್ ಅವರ ನೇತೃತ್ವದ ತಂಡದಲ್ಲಿದ್ದ ಪ್ರಮುಖ ಗಾಯಕಿ ಸವಿತಾ ತಮ್ಮ ಮಧುರ ಕಂಠದಿ0ದ ಜಾನಪದ ಹಾಡುಗಳನ್ನು ಹಾಡಿ ಸಭಿಕರನ್ನು ರಂಜಿಸಿದರು. ಅವರೊಂದಿಗೆ ತಂಡದ ಸದಸ್ಯರಾದ ಕೀಲುಕೊಪ್ಪ ಯಲ್ಲಪ್ಪ, ಮಂಜುನಾಥ್, ಮಾಗುಂದಿ ಮುನಿರಾಜು, ಲಕ್ಷ್ಮಿ ಹಾಗೂ ರಾಮ್ ಅವರು ಗಾಯನದಲ್ಲಿ ಸಾಥ್ ನೀಡಿದರು. ಸಂಗೀತ ವಿಭಾಗದಲ್ಲಿ ಶಿವ ಕೀಬೋರ್ಡ್, ತಬಲ ನಾಗಾರಾಜ, ರಿದಮ್ ಪ್ಯಾಡ್ ಅರುಣ್ ವೃಂದವನ್ನು ಮುನ್ನಡೆಸಿ, ಗೀತೆಗಳಿಗೆ ಸೂಕ್ತ ಹಾಗೂ ಸುಮಧುರ ಸಂಗೀತದ ಹಿನ್ನೆಲೆ ಒದಗಿಸುವ ಮೂಲಕ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.
ವಿಶ್ವವಿಖ್ಯಾತ ದಸರಾ ಉತ್ಸವದ ಸಾಂಸ್ಕೃತಿಕ ವೇದಿಕೆಯಲ್ಲಿ ಬಂಗಾರಪೇಟೆ ತಾಲ್ಲೂಕಿನ ಕಲಾವಿದರು ಭಾಗವಹಿಸಿ ಕಲೆ ಪ್ರದರ್ಶಿಸಿರುವುದು ಇಡೀ ತಾಲ್ಲೂಕಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಸ್ಥಳೀಯ ಕಲಾಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ದಸರಾ ವೀಕ್ಷಿಸಲು ಬಂದಿದ್ದ ಅಪಾರ ಸಂಖ್ಯೆಯ ಕಲಾ ರಸಿಕರು ಹಾಗೂ ಸಾರ್ವಜನಿಕರು ಕಾರ್ಯಕ್ರಮವನ್ನು ಆಸ್ವಾದಿಸಿ, ಕಲಾವಿದರ ಪ್ರತಿಭೆಯನ್ನು ಮುಕ್ತಕಂಠದಿ0ದ ಶ್ಲಾಘಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್