
ಕೋಲಾರ, ೨೦ ಅಕ್ಟೋಬರ್ (ಹಿ.ಸ) : ಟೇಕಲ್ ಸುತ್ತಮುತ್ತಲಿನ ಬೆಟ್ಟ-ಗುಡ್ಡಗಳು ಹಾಗೂ ನೈಸರ್ಗಿಕ ಸಂಪತ್ತನ್ನು ರಕ್ಷಿಸುವ ನಿಟ್ಟಿನಲ್ಲಿ ಸೂಕ್ತ ಹಾಗೂ ಜನಪರ ಕಾಳಜಿಯುಳ್ಳ ಅಭ್ಯರ್ಥಿಯನ್ನು ಮುಂಬರುವ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆ ಮಾಡಿಕೊಳ್ಳಬೇಕು ಎಂದು ‘ಕೆಎಸ್ಆರ್ ಪಾರ್ಟಿ’ ಒತ್ತಾಯಿಸಿದೆ.
ಅಭಿವೃದ್ಧಿಯ ಹೆಸರಿನಲ್ಲಿ ಬೆಟ್ಟ-ಗುಡ್ಡಗಳು ಮತ್ತು ನೈಸರ್ಗಿಕ ಪರಿಸರಕ್ಕೆ ಧಕ್ಕೆಯಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಪಕ್ಷವು, ನೈಸರ್ಗಿಕ ನೀರಿನ ಮೂಲಗಳ ಸಂರಕ್ಷಣೆ, ಅಂತರ್ಜಲ ಮಟ್ಟ ವೃದ್ಧಿ ಹಾಗೂ ಹಸಿರು ಭೂಮಿಗೆ ಯೋಗ್ಯ ಬೆಂಬಲ ಬೆಲೆ ನೀಡುವಂತೆ ಸಂಬ0ಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಲ್ಲಿ ಒತ್ತಾಯಿಸಿದೆ.
ಅವು ಪರಿಸರದ ಸಮತೋಲನವನ್ನು ಕಾಪಾಡುವ ಹಾಗೂ ಮಳೆನೀರಿನ ಸಂಗ್ರಹಕ್ಕೆ ನೆರವಾಗುವ ಅಮೂಲ್ಯ ಸಂಪನ್ಮೂಲಗಳಾಗಿವೆ. ಇವುಗಳ ನಾಶದಿಂದ ನೀರಿನ ಅಭಾವ ಎದುರಾಗಲಿದ್ದು, ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಪರಿಸರ ರಕ್ಷಣೆಗೆ ಬದ್ಧರಾಗಿರುವ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುವ ಸೂಕ್ತ ಪ್ರತಿನಿಧಿಗಳನ್ನು ಸಾರ್ವಜನಿಕರು ಆರಿಸಬೇಕಾದ ಅಗತ್ಯವಿದೆ ಎಂದು ಪಕ್ಷವು ತಿಳಿಸಿದೆ.
ಪ್ರಕೃತಿಯನ್ನು ಉಳಿಸುವುದು ಕೇವಲ ಒಂದು ಪಕ್ಷದ ಜವಾಬ್ದಾರಿಯಲ್ಲ, ಅದು ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಆದ್ದರಿಂದ ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ತಕ್ಷಣವೇ ಜಾಗೃತರಾಗಿ ಟೇಕಲ್ ಭಾಗದ ನೈಸರ್ಗಿಕ ಸಂಪತ್ತಿನ ರಕ್ಷಣೆಗೆ ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕೆಂದು ‘ಕೆಎಸ್ಆರ್ ಪಾರ್ಟಿ’ಮನವಿ ಮಾಡಿದೆ.
ಬೆಂಗಳೂರಿನ ರಾಜಧಾನಿಯಲ್ಲಿ ಎಗ್ಗಿಲ್ಲದೆ ವರ್ಷಪೂರ್ತಿ ಬೃಹತ್ ಕಟ್ಟಡಗಳು ನಿರ್ಮಾಣವಾಗುತ್ತಿವೆ. ನಿರ್ಮಾಣಕ್ಕೆ ಅಗತ್ಯವಿರುವ ಮರಳು ಈ ಹಿಂದೆ ಸುತ್ತಮುತ್ತಲ ಜಿಲ್ಲೆಗಳಿಂದ ಸರಬರಾಜು ಆಗುತ್ತಿತ್ತು. ಆದರೆ, ನೈಸರ್ಗಿಕ ಮರಳಿನ ಸೆಲೆಗಳು ಬತ್ತಿ ಹೋಗಿವೆ. ಬೆಂಗಳೂರು ನಗರದ ಕಟ್ಟಡ ನಿರ್ಮಾಣಕ್ಕೆ ಒಂದು ಕಾಲದಲ್ಲಿ ದಿನಕ್ಕೆ ಸಾವಿರಾರು ಲೋಡ್ ಮರಳು ಸರಬರಾಜಾಗುತ್ತಿತ್ತು. ಮರಳು ಪೂರೈಕೆಯನ್ನು ನಿಯಂತ್ರಣ ಮಾಡುವ ರಾಜಕೀಯ ಪೊಲೀಸ್ ಹಾಗೂ ಪೂರೈಕೆದಾರರ ದೊಡ್ಡ ಮಾಫಿಯಾ ಇತ್ತು. ನೈಸರ್ಗಿಕ ಮರಳು ಬತ್ತಿಹೋಗುತ್ತಿದ್ದಂತೆ ಎಂ.ಸ್ಯಾ0ಡ್ ಬಳಕೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಮತಿ ನೀಡಿತು.
ಕಲ್ಲು ಗಣಿಗಾರಿಕೆ ನಡೆಸಿ ಎಂ.ಸ್ಯಾ0ಡ್ ತಯಾರು ಮಾಡುವ ಘಟಕಗಳನ್ನು ರಾಜಕೀಯವಾಗಿ ಬಲಾಡ್ಯರು ನಿಯಂತ್ರಿಸುತ್ತಿದ್ದಾರೆ. ಮಾಲೂರು ತಾಲ್ಲೂಕಿನ ಟೇಕಲ್ ಸುತ್ತಮುತ್ತಲು ಎಂ.ಸ್ಯಾ0ಡ್ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ದಿನೇ ದಿನೇ ಟೇಕಲ್ ಬೆಟ್ಟಗಳು ಕರಗುತ್ತಿವೆ. ಬೆಟ್ಟಗಳು ಕರಗುತ್ತಿದ್ದಂತೆ ಎಂ.ಸ್ಯಾ0ಡ್ ಘಟಕಗಳ ಮಾಲೀಕರ ತಿಜೋರಿ ದೊಡ್ಡದಾಗುತ್ತಿದೆ. ಬೆಟ್ಟಗಳು ಕರಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ದೊಡ್ಡ ನೈಸರ್ಗಿಕ ಆಪತ್ತು ಎದುರಾಗಲಿದೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್