
ನವದೆಹಲಿ, 20 ಅಕ್ಟೋಬರ್ (ಹಿ.ಸ.):
ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಅವರು ತಮಗೆ 42 ವರ್ಷಗಳ ಹಿಂದೆ ವಿಮಾನ ಹಾರಾಟ ಕಲಿಸಿದ್ದ ನಿವೃತ್ತ ವಿಂಗ್ ಕಮಾಂಡರ್ ವಿ.ಎಸ್. ಕೊಚರ್ ಅವರೊಂದಿಗೆ ತೆಲಂಗಾಣದ ದುಂಡಿಗಲ್ನ ವಾಯುಪಡೆ ಅಕಾಡೆಮಿಯಲ್ಲಿ ತರಬೇತಿ ವಿಮಾನದಲ್ಲಿ 55 ನಿಮಿಷಗಳ ಕಾಲ ಹಾರಾಟ ನಡೆಸಿದರು.
ವಾಯುಪಡೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಅವಧಿಯಲ್ಲಿ ಎ.ಪಿ. ಸಿಂಗ್ ಅವರು ನಡೆಸಿದ ಕೊನೆಯ ಹಾರಾಟ ಇದಾಗಿದೆ. ಮಂಗಳವಾರ ಅವರು ತಮ್ಮ ಮೊದಲ ಹಾರಾಟದ ತರಬೇತುದಾರರಾದ ನಿವೃತ್ತ ವಿಂಗ್ ಕಮಾಂಡರ್ ವಿ.ಎಸ್. ಕೊಚರ್ ಅವರೊಂದಿಗೆ ಭಾರತೀಯ ವಾಯುಪಡೆಯ ಕಿರಣ್ ಮಾರ್ಕ್-1 ತರಬೇತಿ ವಿಮಾನವನ್ನು ಚಲಾಯಿಸಿದರು. ಈ ಮೂಲಕ ತಮ್ಮ ವಿಮಾನ ಹಾರಾಟದ ಪಯಣಕ್ಕೆ ಭಾವನಾತ್ಮಕವಾಗಿ ಪೂರ್ಣವಿರಾಮ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್, “ಇದು ನಿಜಕ್ಕೂ ಕನಸು ನನಸಾದ ಕ್ಷಣ. ಇದೇ ವಿಮಾನದ ಮೂಲಕ ನಾನು ನನ್ನ ಪಯಣ ಆರಂಭಿಸಿದ್ದೆ. ನಾನು ನಿವೃತ್ತಿಯಾಗುತ್ತಿರುವ ಈ ಸಂದರ್ಭದಲ್ಲಿ, ನನ್ನ ಆರಂಭಿಕ ತರಬೇತಿಗೆ ಬಳಸಿದ ಮೂಲ ವಿಮಾನ ಇನ್ನೂ ಕಾರ್ಯನಿರ್ವಹಿಸುತ್ತಿರುವುದು ವಿಶೇಷ. ಇದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ” ಎಂದು ಹೇಳಿದರು.
“ಆರಂಭದಲ್ಲಿ ಇದೇ ಸ್ಥಳದಲ್ಲಿ ನನಗೆ ವಿಮಾನ ಹಾರಾಟ ಕಲಿಸಿದ ನನ್ನ ತರಬೇತುದಾರ ವಿ.ಎಸ್. ಕೊಚರ್ ಅವರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ನನ್ನ ಹಾರಾಟದ ಪಯಣವನ್ನು ಪೂರ್ಣಗೊಳಿಸಬೇಕೆಂಬುದು ನನ್ನ ಆಶಯವಾಗಿತ್ತು. 1984ರ ಜನವರಿ 28ರಂದು ಇದೇ ಸ್ಥಳದಲ್ಲಿ ಅವರೊಂದಿಗೆ ನನ್ನ ಮೊದಲ ಹಾರಾಟ ನಡೆಸಿದ್ದೆ. ಇಂದು ಅದೇ ವಿಮಾನದಲ್ಲಿ ಅವರೊಂದಿಗೆ ಸಮವಸ್ತ್ರದಲ್ಲಿನ ನನ್ನ ಕೊನೆಯ ಹಾರಾಟವನ್ನು ಪೂರ್ಣಗೊಳಿಸಿದ್ದೇನೆ” ಎಂದು ಅವರು ಸ್ಮರಿಸಿದರು.
ಈ ಹಾರಾಟವು ತರಬೇತುದಾರ ಮತ್ತು ಅವರ ವಿದ್ಯಾರ್ಥಿಗಳ ನಡುವಿನ ಬಾಂಧವ್ಯವನ್ನು ಪ್ರತಿಬಿಂಬಿಸಿತು. ಅಲ್ಲದೆ, ವಾಯುಪಡೆಯ ಹಲವು ತಲೆಮಾರುಗಳ ಯೋಧರನ್ನು ರೂಪಿಸುವಲ್ಲಿ ತರಬೇತಿ, ಮಾರ್ಗದರ್ಶನ ಮತ್ತು ಶಿಸ್ತು ವಹಿಸುವ ಮಹತ್ವದ ಪಾತ್ರವನ್ನೂ ಎತ್ತಿಹಿಡಿಯಿತು.
ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಅವರು ಅಕ್ಟೋಬರ್ 31ರಂದು ನಿವೃತ್ತರಾಗಲಿದ್ದಾರೆ. ಅವರ ನಂತರ ಹಾಲಿ ಉಪ ವಾಯುಪಡೆ ಮುಖ್ಯಸ್ಥ ಏರ್ ಮಾರ್ಷಲ್ ಆಶುತೋಷ್ ದೀಕ್ಷಿತ್ ಅವರು ವಾಯುಪಡೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಇದಕ್ಕೂ ಮೊದಲು ಅಕ್ಟೋಬರ್ 13ರಂದು ಜೋಧ್ಪುರ ವಾಯುಪಡೆ ನೆಲೆಯಲ್ಲಿ ನಡೆದ ‘ತರಂಗ ಶಕ್ತಿ’ ಸಮರಾಭ್ಯಾಸದ ಸಂದರ್ಭದಲ್ಲಿ ಎ.ಪಿ. ಸಿಂಗ್ ಅವರು ಸ್ವದೇಶಿ ತೇಜಸ್ ಯುದ್ಧವಿಮಾನದಲ್ಲಿ ತಮ್ಮ ಅಧಿಕಾರಾವಧಿಯ ಕೊನೆಯ ಯುದ್ಧವಿಮಾನ ಹಾರಾಟ ನಡೆಸಿದ್ದರು. ಸ್ಥಿರ ರೆಕ್ಕೆ ಹಾಗೂ ತಿರುಗುವ ರೆಕ್ಕೆಗಳ ವಿಮಾನಗಳಲ್ಲಿ ಅವರು ಒಟ್ಟು 5,000 ಗಂಟೆಗಳಿಗೂ ಅಧಿಕ ಹಾರಾಟದ ಅನುಭವ ಹೊಂದಿದ್ದಾರೆ
---------
ಹಿಂದೂಸ್ತಾನ್ ಸಮಾಚಾರ್ / Rakesh.M.B.