ನೈಸ್ ಯೋಜನೆ: ರೈತರ ಜಮೀನು ವಾಪಸ್ ಕೊಡಿಸಲು ಹೋರಾಟ; ಸಿಎಂಗೆ ಕುಮಾರಸ್ವಾಮಿ ಸವಾಲು
ನೈಸ್ ಯೋಜನೆಯಿಂದ ಭೂಮಿ ಕಳೆದುಕೊಂಡ ರೈತರೊಂದಿಗೆ ಸಂವಾದ ನಡೆಸಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ರೈತರ ಜಮೀನು ವಾಪಸ್ ಕೊಡಿಸುವುದೇ ತಮ್ಮ ಹೋರಾಟ ಎಂದು ಹೇಳಿದರು. ತಮ್ಮ ಕುಟುಂಬ ಅಕ್ರಮವಾಗಿ ಭೂಮಿ ಪಡೆದಿರುವುದನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಸಿಎಂ ಡಿ.ಕೆ. ಶಿವಕುಮಾರ್ಗೆ ಸ
hd-kumaraswamy-nice-land-row-farmers-protest-challenges-cm-dk-shivakumar


ಬೆಂಗಳೂರು, 02 ಅಕ್ಟೋಬರ್ (ಹಿ.ಸ.):

ನೈಸ್ ಯೋಜನೆಯಿಂದ ಭೂಮಿ ಕಳೆದುಕೊಂಡಿರುವ ರೈತರ ಪರ ಹೋರಾಟವನ್ನು ತೀವ್ರಗೊಳಿಸಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ,

ಶುಕ್ರವಾರ ನೈಸ್ ರಸ್ತೆಯ ಮಾದವಾರ ಟೋಲ್ ಬಳಿ ಸಂತ್ರಸ್ತ ರೈತರೊಂದಿಗೆ ಸಂವಾದ ನಡೆಸಿ, ಅವರ ಅಹವಾಲುಗಳನ್ನು ಆಲಿಸಿದರು. ಬಳಿಕ ನೈಸ್ ರಸ್ತೆಗೆ ಹೊಂದಿಕೊಂಡಿರುವ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ನೇರವಾಗಿ ಆಲಿಸಿದರು.

ತೋಟದ ಗುಡ್ಡಹಳ್ಳಿ, ಅಂಚೆಪಾಳ್ಯ, ತಿರುಮಲಪುರ, ಕೆ.ಜಿ. ಶ್ರೀಕಂಠಪುರ, ಗಂಗನಹಳ್ಳಿ, ಕಾಚೋಹಳ್ಳಿ, ಹೊಸಹಳ್ಳಿ ಹಾಗೂ ಗೊಲ್ಲರಹಟ್ಟಿ ಸೇರಿದಂತೆ ಹಲವು ಗ್ರಾಮಗಳ ರೈತರಿಂದ ಕುಮಾರಸ್ವಾಮಿ ಅಹವಾಲು ಸ್ವೀಕರಿಸಿದರು.

ಬಳಿಕ ಮಾತನಾಡಿದ ಅವರು, ನೈಸ್ ಯೋಜನೆಯ ಹೆಸರಿನಲ್ಲಿ ರೈತರ ಭೂಮಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.

ಸಿಎಂಗೆ ಸವಾಲುನಾನು ಮತ್ತು ನನ್ನ ಕುಟುಂಬದವರು ಕಾನೂನುಬಾಹಿರವಾಗಿ ಒಂದು ಇಂಚು ಭೂಮಿಯನ್ನಾದರೂ ಪಡೆದಿರುವುದನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ.

ಸಾಬೀತುಪಡಿಸಿದರೆ ಸಾರ್ವಜನಿಕವಾಗಿ ನೇಣು ಹಾಕಿಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕುಮಾರಸ್ವಾಮಿ ಸವಾಲು ಹಾಕಿದರು.

ರಾಜಕೀಯಕ್ಕೆ ಬರುವ ಮುನ್ನವೇ ಬಿಡದಿಯಲ್ಲಿ 44 ಎಕರೆ ಜಮೀನು ಖರೀದಿಸಿದ್ದೇನೆ. ನಮ್ಮ ಆಸ್ತಿ, ಕುಟುಂಬದ ಬಗ್ಗೆ ಯಾವುದೇ ತನಿಖೆ ನಡೆಸಬಹುದು. ದೇವೇಗೌಡರು ಪ್ರಧಾನಿಯಾದ ಕಾಲದಿಂದ ಇಲ್ಲಿಯವರೆಗಿನ ಆಸ್ತಿಯ ಬಗ್ಗೆಯೂ ತನಿಖೆ ನಡೆಸಲಿ ಎಂದು ಅವರು ಹೇಳಿದರು.

ನನಗೆ ಸಿಎಂ ಡಿ.ಕೆ. ಶಿವಕುಮಾರ್ ಅವರ ಮೇಲೆ ಅಸೂಯೆ ಇಲ್ಲ. ಇನ್ನೂ ಹತ್ತು ವರ್ಷ ಅವರೇ ಮುಖ್ಯಮಂತ್ರಿಯಾಗಿರಲಿ ಎಂದು ಹೇಳುವುದಿಲ್ಲ. ಆದರೆ ರೈತರ ವಿಚಾರದಲ್ಲಿ ಯಾಕೆ ಚೆಲ್ಲಾಟ ಆಡುತ್ತಿದ್ದೀರಿ? ಎಂದು ಪ್ರಶ್ನಿಸಿದರು.

'ರೈತರ ಭೂಮಿ ವಾಪಸ್ ಕೊಡಿಸುವುದೇ ನನ್ನ ಹೋರಾಟ'ನನಗೆ ರಾಜಕೀಯ ಬೇಕಿಲ್ಲ. ರೈತರ ಭೂಮಿಯನ್ನು ವಾಪಸ್ ಕೊಡಿಸುವುದೇ ನನ್ನ ಹೋರಾಟ. ರೈತರು ಒಗ್ಗಟ್ಟಿನಿಂದ ಇರಬೇಕು. ನಿಮ್ಮ ಪರವಾಗಿ ನಾನು ಇರುತ್ತೇನೆ ಎಂದು ಕುಮಾರಸ್ವಾಮಿ ಭರವಸೆ ನೀಡಿದರು.

ತಮ್ಮ ಹೋರಾಟವನ್ನು ಕೈಬಿಡುವಂತೆ ಒತ್ತಡ ಬರುತ್ತಿದೆ ಎಂದು ಹೇಳಿದ ಅವರು, ಈ ಹೋರಾಟ ಕೈಬಿಡಿ, ಚುನಾವಣೆ ಖರ್ಚು ಸೇರಿದಂತೆ ಎಲ್ಲವನ್ನೂ ಕೊಡುತ್ತೇವೆ ಎಂಬ ಪ್ರಸ್ತಾಪಗಳು ಬರುತ್ತಿವೆ. ಆದರೆ ನಾನು ಸುಮ್ಮನಿದ್ದರೆ ರೈತರ ಜಮೀನು ಲೂಟಿಯಾಗುತ್ತದೆ. ಇದರ ವಿರುದ್ಧ ಜನಾಂದೋಲನ ನಡೆಯಬೇಕು ಎಂದರು.

ಮೊದಲು ಶಾಂತಿಯುತವಾಗಿ ಹೋರಾಟ ಮಾಡೋಣ. ಇದನ್ನು ನಮ್ಮ ದೌರ್ಬಲ್ಯ ಎಂದು ಭಾವಿಸಿದರೆ ದೊಡ್ಡ ಹೋರಾಟ ಮಾಡೋಣ. ನಾನೇ ಮುಂದೆ ನಿಲ್ಲುತ್ತೇನೆ. ರೈತರನ್ನು ಮುಂದೆ ಬಿಡುವುದಿಲ್ಲ. ಮುಂದಿನ ದಿನಗಳಲ್ಲಿ ಸಭೆ ಕರೆದು ಹೋರಾಟದ ರೂಪುರೇಷೆ ಸಿದ್ಧಪಡಿಸುತ್ತೇನೆ ಎಂದು ಹೇಳಿದರು.

'ಬ್ಲ್ಯಾಕ್ಮೇಲ್ ಮಾಡುತ್ತಿದ್ದೇನೆ ಎಂದರೆ ಪ್ರಕರಣ ದಾಖಲಿಸಿ'ತಾವು ಮುಖ್ಯಮಂತ್ರಿ ಅವರನ್ನು ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನಾನು ಬ್ಲ್ಯಾಕ್ಮೇಲ್ ಮಾಡುತ್ತಿದ್ದೇನೆ ಎಂದಾದರೆ ನನ್ನ ವಿರುದ್ಧ ಏಕೆ ಪ್ರಕರಣ ದಾಖಲಿಸಿಲ್ಲ? ನೈಸ್ಗೆ ಸಂಬಂಧಿಸಿದಂತೆ ಹಲವು ದಾಖಲೆಗಳು ನನ್ನ ಬಳಿ ಇವೆ ಎಂದು ಹೇಳಿದರು.

ನೈಸ್ ಯೋಜನೆಗೆ ಸಂಬಂಧಿಸಿದ ವಿಷಯಗಳ ಕುರಿತು ಇತ್ತೀಚೆಗೆ ‘ನಥಿಂಗ್ ನೈಸ್’ ಎಂಬ ವಿಡಿಯೋ ಪ್ರಸೆಂಟೇಷನ್ ಮೂಲಕ ಹಲವು ಆರೋಪಗಳನ್ನು ಮಾಡಿದ್ದ ಕುಮಾರಸ್ವಾಮಿ, ಅದರ ಮುಂದುವರಿದ ಭಾಗವಾಗಿ ರೈತರೊಂದಿಗೆ ನೇರ ಸಂವಾದ ನಡೆಸಿದರು.

ನಂತರ ನೈಸ್ ಟೋಲ್ ಪ್ಲಾಜಾ ಬಳಿಯ ದೊಡ್ಡತೊಗೂರು, ಚಿಕ್ಕತೊಗೂರು, ಎಲೆಕ್ಟ್ರಾನಿಕ್ ಸಿಟಿ, ಕೊನಪ್ಪನ ಅಗ್ರಹಾರ ಹಾಗೂ ಬೇಗೂರು ಭಾಗದ ರೈತರನ್ನೂ ಭೇಟಿಯಾಗಿ ಅಹವಾಲುಗಳನ್ನು ಸ್ವೀಕರಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande