
ಬೆಂಗಳೂರು, 02 ಅಕ್ಟೋಬರ್ (ಹಿ.ಸ.):
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಬಳಿಕ ಪಟ್ಟಿಯಿಂದ ಹೊರಗುಳಿದಿರುವ ಅರ್ಹ ಮತದಾರರನ್ನು ಗುರುತಿಸಿ, ಮರುಸೇರ್ಪಡೆಗೊಳಿಸಲು ವಿಶೇಷ ಅಭಿಯಾನ ಕೈಗೊಳ್ಳುವಂತೆ ಚುನಾವಣಾ ಆಯೋಗ ನೀಡಿರುವ ನಿರ್ದೇಶನವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ವಾಗತಿಸಿದ್ದಾರೆ.
ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾವು ಗುರುವಾರ ರಾಜ್ಯ ಚುನಾವಣಾ ಆಯೋಗದ ಎದುರು ನಡೆಸಿದ ಪ್ರತಿಭಟನೆಯ ಪರಿಣಾಮವಾಗಿ ಕೇಂದ್ರ ಚುನಾವಣಾ ಆಯೋಗ ಈ ನಿರ್ದೇಶನ ನೀಡಿದೆ.
ಇದು ಕಾಂಗ್ರೆಸ್ ಪಕ್ಷ ಅಥವಾ ಸರ್ಕಾರದ ಗೆಲುವಲ್ಲ. ಕರ್ನಾಟಕ ಸೇರಿದಂತೆ ಇಡೀ ದೇಶದ ಮತದಾರರ ಗೆಲುವು. ಅರ್ಹ ಮತದಾರರ ಹಕ್ಕು ರಕ್ಷಣೆಯ ಗೆಲುವು” ಎಂದು ಹೇಳಿದರು.
ಎಸ್ಐಆರ್ ಬಳಿಕ ಮತದಾರರ ಪಟ್ಟಿಯಿಂದ ಸಾಮೂಹಿಕವಾಗಿ ಹೆಸರುಗಳನ್ನು ತೆಗೆದುಹಾಕಿರುವ ಕುರಿತು ಬಂದಿರುವ ದೂರುಗಳ ಬಗ್ಗೆಯೂ ಗಮನಹರಿಸುವಂತೆ ಚುನಾವಣಾ ಆಯೋಗ ಸೂಚಿಸಿದೆ ಎಂದು ಅವರು ತಿಳಿಸಿದರು.
“ಫಾರ್ಮ್-7 ಮೂಲಕ ಯಾವುದೇ ಮತವನ್ನು ಡಿಲೀಟ್ ಮಾಡಬಾರದು ಎಂದು ಸೂಚಿಸಲಾಗಿದೆ. ಮೊದಲ ಬಾರಿಗೆ ಮತದಾರರಾಗುವ ಯುವಕರ ಹೆಸರು ಸೇರ್ಪಡೆಗೆ ವಿಶೇಷ ಶಿಬಿರಗಳನ್ನು ಆಯೋಜಿಸಬೇಕು.
ಬೂತ್ ಮಟ್ಟದಲ್ಲಿ ಅರ್ಜಿ ಸಲ್ಲಿಕೆಗೆ ಅನುಕೂಲವಾಗುವಂತೆ ಶಿಬಿರಗಳನ್ನು ನಡೆಸಬೇಕು. ರಾತ್ರಿ ಆಶ್ರಯ ತಾಣಗಳಲ್ಲಿ ವಾಸಿಸುವವರು, ಕಾರ್ಮಿಕರು ಹಾಗೂ ನಿರಾಶ್ರಿತರಿಗಾಗಿ ವಿಶೇಷ ಶಿಬಿರಗಳನ್ನು ಆಯೋಜಿಸುವಂತೆ ಸೂಚಿಸಲಾಗಿದೆ” ಎಂದು ಶಿವಕುಮಾರ್ ವಿವರಿಸಿದರು.
ಬಿಜೆಪಿ ವಿರುದ್ಧ ಆರೋಪ ಮಾಡಿದ ಅವರು, “ಸಮಾಜದ ದುರ್ಬಲ ವರ್ಗಗಳ ಮತಗಳನ್ನು ತೆಗೆದುಹಾಕಲು ಬಿಜೆಪಿಯವರು ಅರ್ಜಿ ಸಲ್ಲಿಸಿದ್ದಾರೆ.
ದಲಿತರು ಹಾಗೂ ಅಲ್ಪಸಂಖ್ಯಾತರ ಮತಗಳನ್ನು ತೆಗೆಸುವುದೇ ಅವರ ಉದ್ದೇಶ. ಸಮಾಜದ ವಿವಿಧ ಸಮುದಾಯಗಳ ನಡುವೆ ಕಂದಕ ಸೃಷ್ಟಿಸುವ ಇಂತಹ ಪ್ರಯತ್ನಗಳು ನಾಚಿಕೆಗೇಡಿನ ಸಂಗತಿ” ಎಂದು ಟೀಕಿಸಿದರು.
ಚುನಾವಣಾ ಆಯೋಗದ ಮುಂದೆ ಬಿಜೆಪಿ ನಡೆಸಿದ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಅವರು, “ಸುಮಾರು 25 ಸಾವಿರ ಅರ್ಜಿಗಳನ್ನು ನೀಡಿರುವುದಾಗಿ ಬಿಜೆಪಿಯವರೇ ಒಪ್ಪಿಕೊಂಡಿದ್ದಾರೆ. ಈ ಕುರಿತು ಚುನಾವಣಾ ಆಯೋಗ ರಾಷ್ಟ್ರಮಟ್ಟದಲ್ಲಿ ದೂರು ದಾಖಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ತಮ್ಮ ಹೋರಾಟದ ಹಿನ್ನೆಲೆ ಕುರಿತು ಮಾತನಾಡಿದ ಅವರು, ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ಬಗ್ಗೆ ಮಾಹಿತಿ ಬಂದ ಬಳಿಕ ಕಾಂಗ್ರೆಸ್ ಕಾರ್ಯಕರ್ತರ ಜತೆಗೆ ವಿಶೇಷ ತಂಡವನ್ನು ನೇಮಿಸಿ ದತ್ತಾಂಶ ಸಂಗ್ರಹಿಸಲಾಗಿದೆ.
‘ಸಿಟಿಜನ್ಸ್ ಫೋರಂ’ ಹಾಗೂ ಹೋರಾಟಗಾರರು ರಾಜ್ಯಾದ್ಯಂತ ಪ್ರವಾಸ ಮಾಡಿ ವರದಿ ನೀಡಿದ್ದಾರೆ. ಈ ಮಾಹಿತಿಯನ್ನು ತಮ್ಮ ಮೂಲಗಳಿಂದಲೂ ಪರಿಶೀಲಿಸಿರುವುದಾಗಿ ಹೇಳಿದರು.
“ಮತದಾನದ ಹಕ್ಕು ಈ ದೇಶದ ಜನರ ಬದುಕುವ ಹಕ್ಕಾಗಿದೆ. ಆದ್ದರಿಂದ ಇದು ಡಿ.ಕೆ. ಶಿವಕುಮಾರ್ ಅವರ ವಿಜಯವಲ್ಲ, ದೇಶದ ಮತದಾರರ ವಿಜಯ. ರಾಹುಲ್ ಗಾಂಧಿ ಅವರು ಕೈಗೊಂಡ ದೊಡ್ಡ ಆಂದೋಲನದ ಫಲವೂ ಇದಾಗಿದೆ” ಎಂದು ಅವರು ಹೇಳಿದರು.
ಚುನಾವಣಾ ಆಯೋಗವು ಪ್ರತಿಯೊಂದು ಪ್ರಕರಣವನ್ನೂ ಆಳವಾಗಿ ಪರಿಶೀಲಿಸುವಂತೆ ನಿರ್ದೇಶನ ನೀಡಿರುವುದು ಸ್ವಾಗತಾರ್ಹ ಎಂದು ಶಿವಕುಮಾರ್ ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R