
ವಿಜಯಪುರ, 02 ಅಕ್ಟೋಬರ್ (ಹಿ.ಸ.)
ಸತ್ಯ, ಅಹಿಂಸೆ, ಸರಳತೆ, ದೇಶಪ್ರೇಮ ಹಾಗೂ ಸಾಮಾಜಿಕ ಸಾಮರಸ್ಯದ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ವಿಜಯಪುರ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಅಕ್ಟೋಬರ್ 2ರಂದು ನಗರದ ಜಿಲ್ಲಾ ಪಂಚಾಯತ್ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಶ್ರದ್ಧಾ-ಭಕ್ತಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಆಗಮಿಸಿದ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಂಗಾಧರ ಸಂಬಣ್ಣಿ, ಜಿಲ್ಲಾಧಿಕಾರಿ ಡಾ. ಆನಂದ ಕೆ., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ ಪ್ರಕಾಶ್ ಮೀನಾ, ವಿಜಯಪುರ ಉಪವಿಭಾಗಾಧಿಕಾರಿ ಜುಫಿಶಾನ್ ಹಕ್ ಸೇರಿದಂತೆ ಗಣ್ಯರು ಚರಕ ನೂಲುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷವಾಗಿ ಚಾಲನೆ ನೀಡಿದರು. ಚರಕವು ಗಾಂಧೀಜಿಯವರ ಸ್ವಾವಲಂಬನೆ, ಸ್ವದೇಶಿ ಚಿಂತನೆ ಹಾಗೂ ಸರಳ ಬದುಕಿನ ಪ್ರತೀಕವಾಗಿದ್ದು, ಕಾರ್ಯಕ್ರಮದ ಆರಂಭದಲ್ಲೇ ಚರಕ ನೂಲುವ ಮೂಲಕ ಅವರ ಆದರ್ಶಗಳನ್ನು ಸ್ಮರಿಸಲಾಯಿತು.
ನಂತರ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಗಣ್ಯರು ಗೌರವ ನಮನಗಳನ್ನು ಅರ್ಪಿಸಿದರು. ಈ ಸಂದರ್ಭದಲ್ಲಿ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಗಾಂಧೀಜಿಯವರ ಕೊಡುಗೆ ಹಾಗೂ ಸ್ವತಂತ್ರ ಭಾರತದ ನಿರ್ಮಾಣದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಸೇವೆಯನ್ನು ಸ್ಮರಿಸಲಾಯಿತು.
ಭಜನೆಗಳ ಮೂಲಕ ಗಾಂಧೀಜಿ ಸ್ಮರಣೆ
ಕಾರ್ಯಕ್ರಮದ ಆರಂಭದಲ್ಲಿ ಗಾಯಕ ವೀರೇಶ ವಾಲಿ ಹಾಗೂ ತಂಡದವರು 'ವಂದೇ ಮಾತರಂ' ಮತ್ತು ನಾಡಗೀತೆಯನ್ನು ಪ್ರಸ್ತುತಪಡಿಸಿದರು. ಬಳಿಕ ಮಹಾತ್ಮ ಗಾಂಧೀಜಿಯವರಿಗೆ ಅತ್ಯಂತ ಪ್ರಿಯವಾಗಿದ್ದ 'ರಘುಪತಿ ರಾಘವ ರಾಜಾರಾಮ್' ಹಾಗೂ 'ವೈಷ್ಣವ ಜನತೋ' ಭಜನೆಗಳನ್ನು ಭಕ್ತಿಪೂರ್ವಕವಾಗಿ ಗಾಯನದ ಮೂಲಕ ಪ್ರಸ್ತುತಪಡಿಸಲಾಯಿತು. ಭಜನೆಗಳ ಮೂಲಕ ಗಾಂಧೀಜಿಯವರ ಸರಳತೆ, ಆಧ್ಯಾತ್ಮಿಕತೆ, ಸತ್ಯ ಮತ್ತು ಅಹಿಂಸೆಯ ಸಂದೇಶವನ್ನು ಸ್ಮರಿಸಲಾಯಿತು.
ಸರ್ವಧರ್ಮ ಪ್ರಾರ್ಥನೆಗೆ ವಿಶೇಷ ಮೆರುಗು
ಸಮಾಜದಲ್ಲಿ ಸರ್ವಧರ್ಮ ಸಮಭಾವ, ಶಾಂತಿ, ಸಹಬಾಳ್ವೆ ಹಾಗೂ ಭಾವೈಕ್ಯತೆಯ ಸಂದೇಶ ಸಾರುವ ಉದ್ದೇಶದಿಂದ ಆಯೋಜಿಸಿದ್ದ ಸರ್ವಧರ್ಮ ಪ್ರಾರ್ಥನೆ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.
ಈ ಸಂದರ್ಭದಲ್ಲಿ ಶ ರಘೋತ್ತಮ ಅರ್ಜುಣಗಿ ಅವರಿಂದ ಭಗವದ್ಗೀತೆ ಪಠಣ, ಹಜರತ್ ಸೂಫಿ ಡಾ. ಹಯಾತ್ ರೋಜಿನದಾರ್ ಸಾಹೇಬರಿಂದ ಕುರಾನ್ ಪಠಣ, ಸಿಯೋನ್ ಮಿನಿಸ್ಟ್ರೀಸ್ನ ರೆವರೆಂಡ್ ಡಾ. ಎಸ್. ವಿಲಾಸ ಅವರಿಂದ ಬೈಬಲ್ ಪಠಣ, ಅಭಯ ಪೋರ್ವಾಲ್ ಅವರಿಂದ ಜೈನ ಧರ್ಮದ ಪ್ರಾರ್ಥನೆ ಹಾಗೂ ಬುದ್ಧ ವಿಹಾರ ನಿರ್ಮಾಣ ಸಮಿತಿಯ ಪ್ರತಾಪ ಚಿಕ್ಕಲಕಿ ಅವರಿಂದ ಬೌದ್ಧ ಧರ್ಮದ ಪ್ರಾರ್ಥನೆ ನೆರವೇರಿತು.
ವಿವಿಧ ಧರ್ಮಗಳ ಪ್ರಾರ್ಥನೆಗಳು ಒಂದೇ ವೇದಿಕೆಯಲ್ಲಿ ಮೊಳಗುವ ಮೂಲಕ ವಿಜಯಪುರ ಜಿಲ್ಲಾಡಳಿತದ ಕಾರ್ಯಕ್ರಮವು ಧಾರ್ಮಿಕ ಸಾಮರಸ್ಯ ಹಾಗೂ ಭಾವೈಕ್ಯತೆಯ ಸಂದೇಶವನ್ನು ಸಾರಿತು.
ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ
ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಸ್ನಾತಕ–ಸ್ನಾತಕೋತ್ತರ ಪದವಿ ವಿಭಾಗದ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು.
ಈ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಗಣ್ಯರು ಬಹುಮಾನ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಿ ಅಭಿನಂದಿಸಿದರು. ವಿದ್ಯಾರ್ಥಿಗಳು ಗಾಂಧೀಜಿ ಮತ್ತು ಶಾಸ್ತ್ರಿಯವರ ಜೀವನ, ಆದರ್ಶಗಳು ಹಾಗೂ ದೇಶ ನಿರ್ಮಾಣಕ್ಕೆ ನೀಡಿದ ಕೊಡುಗೆಗಳ ಕುರಿತು ತಮ್ಮ ವಿಚಾರಗಳನ್ನು ಪ್ರಬಂಧಗಳ ಮೂಲಕ ವ್ಯಕ್ತಪಡಿಸಿದ್ದರು.
ಗಾಂಧೀಜಿ–ಶಾಸ್ತ್ರಿ ಆದರ್ಶಗಳ ಕುರಿತು ವಿಶೇಷ ಉಪನ್ಯಾಸ
ಕಾರ್ಯಕ್ರಮದಲ್ಲಿ ಡಾ. ಮಾಧವ ಎಚ್. ಗುಡಿ ಅವರು ‘ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಜಿ’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಇಬ್ಬರು ಮಹನೀಯರ ಜೀವನ, ಹೋರಾಟ, ಸರಳತೆ, ದೇಶಪ್ರೇಮ ಹಾಗೂ ಸಮಾಜಕ್ಕೆ ಅವರು ನೀಡಿದ ಮೌಲ್ಯಗಳ ಕುರಿತು ಅವರು ವಿವರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಆನಂದ ಕೆ., ಮಹಾತ್ಮ ಗಾಂಧೀಜಿಯವರ ಅಹಿಂಸಾ ತತ್ವ, ಸತ್ಯಾಗ್ರಹ ಹಾಗೂ ಸತ್ಯದ ಮಾರ್ಗ ಇಂದಿಗೂ ಸಮಾಜಕ್ಕೆ ಪ್ರಸ್ತುತವಾಗಿವೆ. ಅದೇ ರೀತಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಸರಳ ಜೀವನ, ಪ್ರಾಮಾಣಿಕತೆ ಹಾಗೂ ‘ಜೈ ಜವಾನ್, ಜೈ ಕಿಸಾನ್’ ಎಂಬ ಘೋಷಣೆ ದೇಶದ ಸೈನಿಕರು ಮತ್ತು ರೈತರ ಮಹತ್ವವನ್ನು ಸಾರುತ್ತದೆ. ಈ ಇಬ್ಬರು ಮಹನೀಯರ ಆದರ್ಶಗಳು ಇಂದಿನ ಯುವ ಪೀಳಿಗೆಗೆ ದಾರಿದೀಪವಾಗಬೇಕು ಎಂದು ಹೇಳಿದರು.
ಯುವಜನರು ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲಿ
ಗಾಂಧೀಜಿ ಹಾಗೂ ಶಾಸ್ತ್ರಿಯವರ ಜಯಂತಿ ಕೇವಲ ಆಚರಣೆಗೆ ಸೀಮಿತವಾಗದೆ, ಅವರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪದ ದಿನವಾಗಬೇಕು. ಸತ್ಯ, ಅಹಿಂಸೆ, ಸರಳತೆ, ಸ್ವಚ್ಛತೆ, ದೇಶಪ್ರೇಮ, ಸಾಮಾಜಿಕ ಸಾಮರಸ್ಯ ಹಾಗೂ ಕರ್ತವ್ಯನಿಷ್ಠೆಯಂತಹ ಮೌಲ್ಯಗಳನ್ನು ಯುವಜನರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದ ಅಭಿವೃದ್ಧಿಗೆ ಮತ್ತಷ್ಟು ಬಲ ಸಿಗಲಿದೆ ಎಂಬ ಸಂದೇಶ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande