
ಗದಗ, 02 ಅಕ್ಟೋಬರ್ (ಹಿ.ಸ.)
ದೇಶಕ್ಕೆ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಕೊಡುಗೆ ಅಪಾರವಾದದ್ದು. ಇಬ್ಬರೂ ವಿಭಿನ್ನ ಕಾಲಘಟ್ಟ ಹಾಗೂ ಶೈಲಿಯ ನಾಯಕರಾಗಿದ್ದರೂ, ಅವರ ಅಂತಿಮ ಧ್ಯೇಯ ಮತ್ತು ಉದ್ದೇಶ ಒಂದೇ ಆಗಿತ್ತು. ಎಲ್ಲರನ್ನೂ ಸಮಾನವಾಗಿ ಕಾಣುವುದು ಮತ್ತು ಇತರರ ನೋವನ್ನು ತನ್ನದೆಂದು ಭಾವಿಸುವುದು ಇಬ್ಬರ ಮುಖ್ಯ ತತ್ವವಾಗಿತ್ತು. ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ಆದರ್ಶಗಳು, ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ ತಿಳಿಸಿದರು.
ಗದಗ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ ದಲ್ಲಿಂದು ರಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರುಗಳ ಸಹಯೋಗದಲ್ಲಿ ಜರುಗಿದ ಮಹಾತ್ಮ ಗಾಂಧೀಜಿಯವರ 157 ನೇ ಜಯಂತಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 122ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜೀವನದಲ್ಲಿ ಸರಳ ಮತ್ತು ವಿನಮ್ರವಾಗಿರುವುದು ಅತ್ಯಂತ ಕಷ್ಟಕರವಾದ ವಿಷಯ. ಗಾಂಧೀಜಿ ಮತ್ತು ಶಾಸ್ತ್ರೀಜಿ ಇಬ್ಬರೂ ಸರಳತೆ ಹಾಗೂ ವಿನಮ್ರತೆಯ ಸಂಕೇತವಾಗಿದ್ದರು. ಜೀವನದ ಸಂಘರ್ಷದಲ್ಲಿ ಗೆಲ್ಲಲು ಹಾಗೂ ಸಮಾಜದಲ್ಲಿ ಸೋದರತ್ವ ಉಳಿಸಲು ವಿನಮ್ರತೆ ಅತ್ಯಗತ್ಯ.ಗಾಂಧೀಜಿ ಮತ್ತು ಶಾಸ್ತ್ರೀಜಿ ಅವರು ಅತ್ಯುನ್ನತ ಸ್ಥಾನದಲ್ಲಿದ್ದರೂ ಅತ್ಯಂತ ಸರಳತೆಯನ್ನೇ ತಮ್ಮ ಶಕ್ತಿಯನ್ನಾಗಿ ಮಾಡಿಕೊಂಡಿದ್ದರು. ದೇಶದ ಪ್ರಧಾನಿಯಾಗಿದ್ದರೂ ಶಾಸ್ತ್ರೀಜಿ ಅವರಿಗೆ ಸ್ವಂತದ್ದು ಎನ್ನಲು ಏನೂ ಇರಲಿಲ್ಲ; ಇಡೀ ದೇಶವೇ ಅವರ ಕರೆಗೆ ಓಗೊಡುತ್ತಿತ್ತು. ನಿಸ್ವಾರ್ಥ ಸರಳತೆಯಿಂದ ದೇಶದ ಬೃಹತ್ ಬದಲಾವಣೆಗಳನ್ನು ಸಾಧಿಸಬಹುದು ಎಂಬುದಕ್ಕೆ ಇವರೇ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ ಎಂದರು.
ಇಂದಿನ ಆಧುನಿಕ ಯುಗದಲ್ಲಿ ಜನರು 'ಸೆಲ್ಫಿ' ತೆಗೆದುಕೊಳ್ಳುವ ಭರದಲ್ಲಿ ಸ್ವಾರ್ಥಿಗಳಾಗುತ್ತಿದ್ದಾರೆ . 'ನಾನು', 'ನನ್ನದು' ಎಂಬ ಸಂಕುಚಿತ ಮನೋಭಾವ ಹೆಚ್ಚಾದಂತೆ ಸಮಾಜ ಕಠೋರವಾಗುತ್ತದೆ. ಆದ್ದರಿಂದ 'ನಾನು' ಎಂಬುದನ್ನು ಬಿಟ್ಟು 'ನಾವು', 'ನಮ್ಮದು' ಎನ್ನುವ ಸಾಮೂಹಿಕ ನಾಯಕತ್ವ ಹಾಗೂ ಒಗ್ಗಟ್ಟಿನ ಭಾವನೆಯನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಬೆಳೆಸಿಕೊಳ್ಳಬೇಕಿದೆ ಎಂದು ಹೇಳಿದರು.
ಸ್ವಾತಂತ್ರ್ಯ ಭಾರತಕ್ಕೆ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ನೀಡಿದ ಕೊಡುಗೆ, ಸಂದೇಶ ಹಾಗೂ ತತ್ವಗಳು ಅಂದಿಗೂ, ಇಂದಿಗೂ ಮತ್ತು ಮುಂದಿನ ಪೀಳಿಗೆಗೂ ಸದಾ ಪ್ರಸ್ತುತ ಹಾಗೂ ಚಿರಂತನ ಎಂದು ಪ್ರತಿಪಾದಿಸಿದರು. ಗಾಂಧೀಜಿ ಮತ್ತು ಶಾಸ್ತ್ರೀಜಿ ಅವರಿಬ್ಬರ ವಯಸ್ಸಿನಲ್ಲಿ 30 ವರ್ಷಗಳ ಅಂತರವಿತ್ತಾದರೂ, ಅವರಿಬ್ಬರ ವಿಚಾರಧಾರೆ ಹಾಗೂ ಅಂತಿಮ ಧೆಯ್ಯ ಒಂದೇ ಆಗಿತ್ತು. ಪ್ರತಿಯೊಬ್ಬರನ್ನೂ ಸಮಾನವಾಗಿ ಕಾಣುವುದು ಹಾಗೂ ಸಮಾಜದ ಪ್ರತಿಯೊಬ್ಬರ ನೋವು-ನಲಿವುಗಳನ್ನು ತಮ್ಮದೇ ನೋವೆಂದು ಭಾವಿಸಿ ಸ್ಪಂದಿಸುವುದು ಅವರಿಬ್ಬರ ಮುಖ್ಯ ಸಿದ್ಧಾಂತವಾಗಿತ್ತು. ಈ ಅನುಕರುಣೆಯ ಭಾವನೆಯಿದ್ದಲ್ಲಿ ಸಮಾಜದಿಂದ ಅನಿಷ್ಟತೆಗಳು ಸಂಪೂರ್ಣ ದೂರವಾಗುತ್ತವೆ ಎಂದರು.
ಸ್ವಾತಂತ್ರ್ಯ ಸಂಗ್ರಾಮ ಮತ್ತು ರಾಷ್ಟ್ರ ನಿರ್ಮಾಣಕ್ಕೆ
ಗಾಂಧೀಜಿಯವರು ಮಾಡೂ ಇಲ್ಲವೇ ಮಡಿ ಕರೆ ನೀಡುವ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರೆ, ಶಾಸ್ತ್ರೀಜಿಯವರು ಜೈ ಜವಾನ್, ಜೈ ಕಿಸಾನ್ ಘೋಷಣೆಯ ಮೂಲಕ ಸ್ವಾತಂತ್ರ್ಯೋತ್ತರ ಭಾರತದ ಭದ್ರತೆಗೆ ಹಾಗೂ ಅನ್ನದಾತನಿಗೆ ಹೊಸ ಶಕ್ತಿ ತುಂಬಿದರು. ಇಬ್ಬರೂ ದೇಶದ ಸರ್ವಾಂಗೀಣ ಪ್ರಗತಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಕುಲ್ ಜೈನ್ ಅವರು ಮಾತನಾಡಿ, ನಮ್ಮ ಸಾರ್ವಜನಿಕ ಜೀವನದಲ್ಲಿ ಕಾರ್ಯನಿರ್ವಹಿಸುವಾಗ ಗಾಂಧೀಜಿ ಹಾಗೂ ಶಾಸ್ತ್ರೀಜಿಯವರ ಸಿದ್ಧಾಂತಗಳು ಹಾಗೂ ಆದರ್ಶಗಳು ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಸಾರ್ವಜನಿಕ ಹಾಗೂ ವೃತ್ತಿಪರ ಜೀವನದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಅಥವಾ ಕೆಲಸದಲ್ಲಿ ಸಂಶಯ ಉಂಟಾದಾಗ, ನೀವು ಕಂಡ ಅತ್ಯಂತ ಬಡ ಹಾಗೂ ದುರ್ಬಲ ವ್ಯಕ್ತಿಯನ್ನು ನೆನಪಿಸಿಕೊಳ್ಳಿ. ನಿಮ್ಮ ಈ ಕಾರ್ಯ ಅಥವಾ ನಿರ್ಧಾರದಿಂದ ಆ ವ್ಯಕ್ತಿಗೆ ಹೇಗೆ ಸಹಾಯವಾಗುತ್ತದೆ ಎಂದು ಆಲೋಚಿಸಿ ಎಂಬ ಗಾಂಧೀಜಿಯವರ ತತ್ತ್ವವನ್ನು ನೆನಪಿಸಿದರು. ಈ ದಾರಿಯಲ್ಲಿ ಸಾಗಿದರೆ ನಾವು ಯಾವತ್ತೂ ಸರಿಯಾದ ಮಾರ್ಗದಲ್ಲೇ ಸಾಗುತ್ತೇವೆ ಎಂದು ಜಿ. ಪಂ.ಸಿಇಒ ಮುಕುಲ್ ಜೈನ್ ಅವರು ಹೇಳಿದರು.
ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕನಸಿನಂತೆ, ಪ್ರತಿಯೊಂದು ಗ್ರಾಮವೂ ಸ್ವಾವಲಂಬಿ ರಿಪಬ್ಲಿಕ್ ಆಗಿ ಬೆಳೆಯಬೇಕು. ಗ್ರಾಮಗಳ ಉದ್ಧಾರ ಹಾಗೂ ಪ್ರಗತಿಯೇ ದೇಶದ ಪ್ರಗತಿಗೆ ಮೂಲಾಧಾರವಾಗಿದೆ. ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜೀವನ ಶೈಲಿ ಬೇರೆ ಬೇರೆಯಾಗಿದ್ದರೂ, ಸಾರ್ವಜನಿಕರ ಸೇವೆಯಲ್ಲಿ ಅವರ ಮೂಲ ತತ್ವಗಳಾದ ಸರಳತೆ, ಸತ್ಯ ಮತ್ತು ಅಹಿಂಸೆ ಒಂದೇ ಆಗಿದ್ದವು. ಅವರ ಈ ಆದರ್ಶ ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಹಾಗೂ ಸಾರ್ವಜನಿಕ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಡಾ.ವೆಂಕಟೇಶ್ ಆಲ್ಕೋಡ ಹಾಗೂ ತಂಡದವರಿಂದ ರಾಷ್ಟ್ರೀಯ ಗೀಯೆ ವಂದೇ ಮಾತರಂ ಮತ್ತು ನಾಡಗೀತೆ ಪ್ರಸ್ತುತ ಪಡಿಸಿ ಮಹಾತ್ಮ ಗಾಂಧೀಜಿಯವರ ಪ್ರೀಯ ಭಜನೆ ಹಾಡಿದರು. ಪ್ರೊ. ಬಾಹುಬಲಿ ಜೈನರ್ ಕಾರ್ಯಕ್ರಮ ನಿರ್ವಹಿಸಿದರು.
ಎ.ಎಸ್.ಎಸ್. ಕಾಲೇಜಿನ ವಿದ್ಯಾರ್ಥಿಗಳಾದ ಅಕ್ಷಯ, ಸಾಧಿಯ, ಸುಚಿತ್ರ ಅವರಿಂದ ಭಗವದ್ಗೀತೆ, ಕುರಾನ್ , ಬೈಬಲ್ ನ ಆಯ್ದ ಚರಣ ಪಠಿಸಿ ವಿವರಿಸಿದರು. ನಂತರ ಅವರಿಗೆ ಜಿಲ್ಲಾಧಿಕಾರಿಗಳಿಂದ ಗೌರವಿಸಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರ 157 ನೇ ಜಯಂತಿ 2026 ರ ಅಂಗವಾಗಿವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಶಾಲಾ ಕಾಲೇಜುಗಳಲ್ಲಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ, ಸ್ಥಾನ ಪಡೆದು ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.
---------------
ಹಿಂದೂಸ್ತಾನ್ ಸಮಾಚಾರ್ / lalita MP