




ಬಳ್ಳಾರಿ, 02 ಅಕ್ಟೋಬರ್ (ಹಿ.ಸ.)
ಬಳ್ಳಾರಿಯ ರೈಲ್ವೆ ನಿಲ್ದಾಣದಲ್ಲಿ ಮಹಾತ್ಮಾ ಗಾಂಧೀಜಿ ಅವರು ತಂಗಿದ್ದ ಸ್ಥಳದಲ್ಲಿ ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಮಹಾತ್ಮಾ ಗಾಂಧೀಜಿ ಅವರ ಭಾವಚಿತ್ರವನ್ನು ಇರಿಸಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಸಲ್ಲಿಸಿ ರೈಲ್ವೆ ನಿಲ್ದಾಣದ ಆವರಣದಲ್ಲಿ ಕಸಗೂಡಿಸುವ ಮೂಲಕ `ಶ್ರಮದಾನ'ವನ್ನು ನೆರವೇರಿಸಿ ಗಾಂಧಿಜಯಂತಿಯನ್ನು ಶುಕ್ರವಾರ ಆಚರಿಸಲಾಯಿತು.
ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ಅಧ್ಯಕ್ಷರಾದ ಕೆ.ಎಂ. ಮಹೇಶ್ವರಸ್ವಾಮಿ ಅವರು, ಸ್ವಾತಂತ್ರ ಹೋರಾಟದಲ್ಲಿ ಬಳ್ಳಾರಿ ಜನತೆಯು ಸಕ್ರಿಯವಾಗಿ ಪಾಲ್ಗೊಳ್ಳಲು ಕೋರಿ ಹೋರಾಟದ ಸ್ಫೂರ್ತಿಯನ್ನು ನೀಡಲು 1.10.1921 ರಂದು ಮಹಾತ್ಮಾಗಾಂಧೀಜಿ ಅವರು ಬಳ್ಳಾರಿಗೆ ಬಂದಿದ್ದರು. ಆಗ, ಬಳ್ಳಾರಿಯ ರೈಲ್ವೆ ನಿಲ್ದಾಣದಲ್ಲಿ ರಾತ್ರಿ ಎಂಟು ಗಂಟೆಗಳ ಕಾಲ ನಿದ್ರಿಸಿದ್ದರು. ಗಾಂಧೀಜಿ ಅವರು ವಿಶ್ರಾಂತಿ ಪಡೆದ ಸ್ಥಳದಲ್ಲಿ ಅವರ 157 ನೇ ಜಯಂತಿಯನ್ನು ಆಚರಿಸಲಾಗಿದೆ ಎಂದರು.
ಮಹಾತ್ಮಾ ಗಾಂಧೀಜಿ ಅವರ ಆದರ್ಶ ಹಾಗೂ ಹೋರಾಟ ಮನೋಭಾವನೆಯ ಸ್ಫೂರ್ತಿಯಿಂದಾಗಿ ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯು 188 ದಿನಗಳ ಐತಿಹಾಸಿಕ ಚಳವಳಿಯನ್ನು ಯಶಸ್ವಿಯಾಗಿ ನಡೆಸಿದೆ ಎಂದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್