ಕೋಲಾರದ ಕಾಂಗ್ರೆಸ್ ಭವನದಲ್ಲಿ ಮಹಾತ್ಮಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ
ಕೋಲಾರದ ಕಾಂಗ್ರೆಸ್ ಭವನದಲ್ಲಿ ಮಹಾತ್ಮಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತಿç ಜಯಂತಿ ಆಚರಣೆ
ಕೋಲಾರ ಕಾಂಗ್ರೆಸ್ ಭವನದಲ್ಲಿ ಮಹಾತ್ಮಾಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತಿç ಜಯಂತಿ ಆಚರಿಸಲಾಯಿತು.


ಕೋಲಾರ, ೦೨ ಅಕ್ಟೋಬರ್ (ಹಿ.ಸ) ಮಹಾತ್ಮ ಗಾಂಧೀಜಿ ಅವರು ಅಹಿಂಸೆ, ಸತ್ಯ ಮತ್ತು ಸಮಾನತೆಯ ಹೋರಾಟದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮ್ಯಾಕಲ ನಾರಾಯಣಸ್ವಾಮಿ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ೧೫೭ನೇ ಹಾಗೂ ಮಾಜಿ ಪ್ರಧಾನಿ ಲಾಲ್ಬಹದ್ದೂರ್ ಶಾಸ್ತ್ರಿ ಅವರ ೧೨೨ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ವಾತಂತ್ರ್ಯಪೂರ್ವದಲ್ಲಿ ಮಾತ್ರವಲ್ಲದೆ ಸ್ವಾತಂತ್ರ್ಯಾನ0ತರವೂ ಕಾಂಗ್ರೆಸ್ ದೇಶದ ಅಭಿವೃದ್ಧಿಗಾಗಿ ಹಲವು ಹೋರಾಟಗಳನ್ನು ನಡೆಸಿದೆ. ಕಾಂಗ್ರೆಸ್ ನಾಯಕರ ಪರಿಶ್ರಮದಿಂದ ದೇಶ ವಿವಿಧ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದೆ. ಗಾಂಧೀಜಿ ಅವರು ಅಹಿಂಸೆಯ ಮಾರ್ಗದ ಮೂಲಕ ಸ್ವಾತಂತ್ರ್ಯ ಚಳವಳಿಗೆ ಹೊಸ ದಿಕ್ಕು ನೀಡಿದ್ದರು. ಅವರ ಸತ್ಯ, ಶಾಂತಿ ಮತ್ತು ಸಮಾನತೆಯ ತತ್ವಗಳನ್ನು ಪಾಲಿಸಬೇಕು ಎಂದರು.

ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಪಂಗಡ ಘಟಕದ ಅಧ್ಯಕ್ಷ ಎನ್. ಅಂಬರೀಶ್ ಮಾತನಾಡಿ, ಕ್ವಿಟ್ ಇಂಡಿಯಾ ಸೇರಿದಂತೆ ಹಲವು ಸ್ವಾತಂತ್ರ್ಯ ಹೋರಾಟಗಳಲ್ಲಿ ಗಾಂಧೀಜಿ ಭಾಗವಹಿಸಿ ಜೈಲು ಸೇರಿದ್ದರು. ಅವರು ಪ್ರಾಮಾಣಿಕ ವ್ಯಕ್ತಿಯಾಗಿದ್ದರು. ಗಾಂಧೀಜಿ ಅವರನ್ನು ಹತ್ಯೆ ಮಾಡಿದ ಗೋಡ್ಸೆಯನ್ನು ಬಿಜೆಪಿ ಬೆಂಬಲಿಗರು ಪೂಜಿಸುತ್ತಾರೆ ಎಂದು ಟೀಕಿಸಿದರು. ಗಾಂಧೀಜಿ ಅವರ ಸತ್ಯ ಮತ್ತು ತತ್ವಗಳು ಇಂದಿಗೂ ಪ್ರಸ್ತುತವಾಗಿವೆ. ಕಾಂಗ್ರೆಸ್ ಇತಿಹಾಸವೇ ದೇಶದ ಇತಿಹಾಸವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಉಪಾಧ್ಯಕ್ಷ ಊರಬಾಗಿಲು ಶ್ರೀನಿವಾಸ್, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ. ಶಿವಕುಮಾರ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಆಪ್ಸರ್, ಗ್ರಾಮಾಂತರ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಕುಡಾ ಅಧ್ಯಕ್ಷ ಹನೀಫ್, ಮುಖಂಡರಾದ ಬೆಳಗಾನಹಳ್ಳಿ ಮುನಿವೆಂಕಟಪ್ಪ, ಖಾದ್ರಿಪುರ ಬಾಬು, ಸಂಗೀತಾ, ರಫೀಕ್, ಷಫೀ, ಷಂಷೀರ್, ಜಯದೇವ್, ವೆಂಕಟಪತಿಯಪ್ಪ, ಚಿನ್ನಾಪುರ ನಾರಾಯಣಸ್ವಾಮಿ, ಕೋಟೆ ಬಿ.ಟಿ. ಚಂದ್ರಶೇಖರ್, ನವೀನ್, ವಿಜಯನಗರ ಮಂಜುನಾಥ್, ಟೈಲರ್ ಶಿವಕುಮಾರ್, ಆರೋಗ್ಯನಾಥನ್ ಮತ್ತಿತರರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande