ವಿಜಯಪುರ ವಿಮಾನ ನಿಲ್ದಾಣದಲ್ಲಿ ವಿಮಾನ ಚಾಲನಾ ತರಬೇತಿ ಕೇಂದ್ರ ಸ್ಥಾಪನೆಗೆ ಸಿದ್ಧತೆ
ವಿಜಯಪುರ, 02 ಅಕ್ಟೋಬರ್ (ಹಿ.ಸ.) ಉದ್ಘಾಟನೆಗೆ ಸಜ್ಜಾಗುತ್ತಿರುವ ವಿಜಯಪುರ ವಿಮಾನ ನಿಲ್ದಾಣವನ್ನು ಕೇವಲ ವೈಮಾನಿಕ ಸಂಪರ್ಕದ ಕೇಂದ್ರವನ್ನಾಗಿ ಮಾತ್ರವಲ್ಲದೆ, ವೈಮಾನಿಕ ಶಿಕ್ಷಣ, ಪೈಲಟ್ ತರಬೇತಿ ಹಾಗೂ ಉದ್ಯೋಗಾವಕಾಶಗಳ ಪ್ರಮುಖ ತಾಣವನ್ನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರಿದಿವೆ
ವಿಮಾನ ತರಬೇತಿ ಕೇಂದ್ರೆ


ವಿಜಯಪುರ, 02 ಅಕ್ಟೋಬರ್ (ಹಿ.ಸ.)

ಉದ್ಘಾಟನೆಗೆ ಸಜ್ಜಾಗುತ್ತಿರುವ ವಿಜಯಪುರ ವಿಮಾನ ನಿಲ್ದಾಣವನ್ನು ಕೇವಲ ವೈಮಾನಿಕ ಸಂಪರ್ಕದ ಕೇಂದ್ರವನ್ನಾಗಿ ಮಾತ್ರವಲ್ಲದೆ, ವೈಮಾನಿಕ ಶಿಕ್ಷಣ, ಪೈಲಟ್ ತರಬೇತಿ ಹಾಗೂ ಉದ್ಯೋಗಾವಕಾಶಗಳ ಪ್ರಮುಖ ತಾಣವನ್ನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರಿದಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ಮಹಾರಾಷ್ಟ್ರದ ಬಾರಾಮತಿ ಮೂಲದ ಕಾರ್ವರ್ ಏವಿಯೇಷನ್ ಸಂಸ್ಥೆಯ ಹಿರಿಯ ಅಧಿಕಾರಿಗಳು ಇತ್ತೀಚೆಗೆ ಸಚಿವ ಎಂ.ಬಿ. ಪಾಟೀಲ್ ಅವರನ್ನು ಭೇಟಿ ಮಾಡಿ ವಿಜಯಪುರದಲ್ಲಿ ವಿಮಾನ ಚಾಲನಾ ತರಬೇತಿ ಕೇಂದ್ರ ಸ್ಥಾಪಿಸುವ ಕುರಿತು ಮಾತುಕತೆ ನಡೆಸಿದ್ದರು. ಆ ಮಾತುಕತೆಯ ಮುಂದುವರಿದ ಭಾಗವಾಗಿ ಸಂಸ್ಥೆಯ ಅಧಿಕಾರಿಗಳು ಶುಕ್ರವಾರ ವಿಜಯಪುರ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ, ಅಲ್ಲಿನ ವಿವಿಧ ಸೌಲಭ್ಯಗಳು ಹಾಗೂ ಪೈಲಟ್ ತರಬೇತಿ ಕೇಂದ್ರ ಆರಂಭಿಸಲು ಅಗತ್ಯವಿರುವ ಮೂಲಸೌಕರ್ಯಗಳನ್ನು ಪರಿಶೀಲಿಸಿದರು.

ವಿಮಾನ ನಿಲ್ದಾಣದ ರನ್ವೇ, ಟರ್ಮಿನಲ್ ಸೇರಿದಂತೆ ಲಭ್ಯವಿರುವ ಮೂಲಸೌಕರ್ಯ ಹಾಗೂ ತರಬೇತಿ ಚಟುವಟಿಕೆಗಳಿಗೆ ಅನುಕೂಲವಾಗುವ ವ್ಯವಸ್ಥೆಗಳ ಕುರಿತು ಅಧಿಕಾರಿಗಳು ಮಾಹಿತಿ ಪಡೆದುಕೊಂಡರು. ವಿಜಯಪುರದಲ್ಲಿ ವಿಮಾನ ಚಾಲನಾ ತರಬೇತಿ ಕೇಂದ್ರ ಸ್ಥಾಪಿಸುವ ಸಾಧ್ಯತೆಗಳ ಬಗ್ಗೆ ಸ್ಥಳ ಪರಿಶೀಲನೆ ನಡೆಸಿರುವುದು ಈ ಯೋಜನೆಯತ್ತ ಮಹತ್ವದ ಹೆಜ್ಜೆಯಾಗಿದೆ.

ಕಾರ್ವರ್ ಏವಿಯೇಷನ್ ಸಂಸ್ಥೆಯಂತಹ ಅನುಭವ ಹೊಂದಿರುವ ಸಂಸ್ಥೆ ವಿಜಯಪುರದಲ್ಲಿ ತರಬೇತಿ ಕೇಂದ್ರ ಸ್ಥಾಪಿಸಲು ಮುಂದಾಗಿರುವುದು ಸಂತಸದ ವಿಚಾರವಾಗಿದೆ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ. ಕೇಂದ್ರ ಕಾರ್ಯಾರಂಭ ಮಾಡಿದಲ್ಲಿ ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ಹಾಗೂ ಯುವಜನರು ಪೈಲಟ್ ತರಬೇತಿಗಾಗಿ ಬೆಂಗಳೂರು, ಮುಂಬೈ, ಪುಣೆ ಸೇರಿದಂತೆ ದೂರದ ನಗರಗಳಿಗೆ ತೆರಳುವ ಅವಶ್ಯಕತೆ ಕಡಿಮೆಯಾಗಲಿದ್ದು, ತಮ್ಮದೇ ಭಾಗದಲ್ಲಿ ಗುಣಮಟ್ಟದ ವೈಮಾನಿಕ ತರಬೇತಿ ಪಡೆಯಲು ಅವಕಾಶ ಸಿಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ವಿಮಾನ ಚಾಲಕರಾಗಬೇಕು ಎಂಬ ಕನಸು ಕಾಣುತ್ತಿರುವ ಉತ್ತರ ಕರ್ನಾಟಕದ ಗ್ರಾಮೀಣ ಹಾಗೂ ಪ್ರತಿಭಾವಂತ ಮಕ್ಕಳಿಗೆ ಇಂತಹ ತರಬೇತಿ ಕೇಂದ್ರಗಳು ಹೊಸ ಅವಕಾಶಗಳನ್ನು ತೆರೆದಿಡಲಿವೆ. ವೈಮಾನಿಕ ಕ್ಷೇತ್ರದಲ್ಲಿ ತರಬೇತಿ ಪಡೆದು ವೃತ್ತಿ ರೂಪಿಸಿಕೊಳ್ಳಲು ಬಯಸುವ ಯುವಜನರಿಗೆ ಸ್ಥಳೀಯವಾಗಿ ತರಬೇತಿ ಸೌಲಭ್ಯ ದೊರೆಯುವುದರಿಂದ ಈ ಭಾಗದ ವೈಮಾನಿಕ ಶಿಕ್ಷಣದ ಬೆಳವಣಿಗೆಗೂ ಉತ್ತೇಜನ ಸಿಗುವ ಸಾಧ್ಯತೆ ಇದೆ.

ವಿಜಯಪುರ ವಿಮಾನ ನಿಲ್ದಾಣವನ್ನು ವೈಮಾನಿಕ ಸಂಪರ್ಕಕ್ಕೆ ಸೀಮಿತಗೊಳಿಸದೆ, ವೈಮಾನಿಕ ಶಿಕ್ಷಣ, ತರಬೇತಿ, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಯ ಕೇಂದ್ರವನ್ನಾಗಿ ರೂಪಿಸುವ ಉದ್ದೇಶ ಹೊಂದಲಾಗಿದೆ. ಅದರ ಭಾಗವಾಗಿ ಪೈಲಟ್ ತರಬೇತಿ ಕೇಂದ್ರ ಸ್ಥಾಪನೆಯ ಪ್ರಸ್ತಾವನೆ ಮುಂದುವರಿದಿರುವುದು ವಿಜಯಪುರ ಸೇರಿದಂತೆ ಇಡೀ ಉತ್ತರ ಕರ್ನಾಟಕದ ಪಾಲಿಗೆ ಮಹತ್ವದ ಬೆಳವಣಿಗೆಯಾಗಿದೆ.

“ವಿಮಾನ ಚಾಲಕರಾಗಬೇಕು ಎಂಬ ಉತ್ತರ ಕರ್ನಾಟಕದ ಅನೇಕ ಪ್ರತಿಭಾವಂತ ಮಕ್ಕಳ ಕನಸಿಗೆ ರೆಕ್ಕೆ ನೀಡುವ ನಿಟ್ಟಿನಲ್ಲಿ ವಿಜಯಪುರದಲ್ಲಿ ವಿಮಾನ ಚಾಲನಾ ತರಬೇತಿ ಕೇಂದ್ರ ಸ್ಥಾಪನೆಯ ಪ್ರಯತ್ನ ಮಹತ್ವದ ಹೆಜ್ಜೆಯಾಗಲಿದೆ. ವಿಮಾನ ನಿಲ್ದಾಣವನ್ನು ವೈಮಾನಿಕ ಸಂಪರ್ಕದ ಜೊತೆಗೆ ಶಿಕ್ಷಣ ಮತ್ತು ಉದ್ಯೋಗದ ಹೊಸ ತಾಣವನ್ನಾಗಿ ಅಭಿವೃದ್ಧಿಪಡಿಸುವ ಕಾರ್ಯ ಮುಂದುವರಿಯಲಿದೆ,” ಎಂದು ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande