
ನಾಗಮಂಗಲ, 02 ಅಕ್ಟೋಬರ್ (ಹಿ.ಸ.):
ಬಗರ್ಹುಕುಂ ಸಾಗುವಳಿದಾರರಿಗೆ ನೀಡಿರುವ ನೋಟಿಸ್ ಹಾಗೂ ಅರ್ಜಿಗಳ ವಜಾ ವಿಚಾರವಾಗಿ ಮಾಜಿ ಶಾಸಕ ಸುರೇಶ್ಗೌಡ ಅವರು ಸಚಿವ ಎನ್. ಚಲುವರಾಯಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರೈತರಿಗೆ ನ್ಯಾಯ ಒದಗಿಸದಿದ್ದರೆ 10 ದಿನಗಳ ಬಳಿಕ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ನಾಗಮಂಗಲದಲ್ಲಿ ಮಾತನಾಡಿದ ಅವರು, ಬಗರ್ಹುಕುಂ ಸಾಗುವಳಿದಾರರಿಗೆ ಏಕಾಏಕಿ ನೋಟಿಸ್ ನೀಡಲಾಗಿದ್ದು, ಉಪವಿಭಾಗಾಧಿಕಾರಿ (ಎಸಿ) ಅವರು ರೈತರ 203 ಅರ್ಜಿಗಳನ್ನು ವಜಾಗೊಳಿಸಿದ್ದಾರೆ ಎಂದು ಆರೋಪಿಸಿದರು.
ರೈತರಿಗೆ ತಮ್ಮ ಅಹವಾಲು ಸಲ್ಲಿಸಲು ಸೂಕ್ತ ಅವಕಾಶ ನೀಡದೆ ಅರ್ಜಿಗಳನ್ನು ವಜಾಗೊಳಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಅರ್ಜಿಗಳನ್ನು ಯಾವ ಕಾರಣಕ್ಕೆ ತಿರಸ್ಕರಿಸಲಾಗಿದೆ ಎಂಬುದನ್ನು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
“ರೈತರಿಗೆ ಅನ್ಯಾಯ ಮಾಡಬಾರದು. ತಕ್ಷಣವೇ ಅಕ್ರಮವಾಗಿ ನೀಡಿರುವ ಹಕ್ಕುಪತ್ರಗಳನ್ನು ರದ್ದುಪಡಿಸಬೇಕು. ರೈತರ ಸಮಸ್ಯೆ ಬಗೆಹರಿಸಲು 10 ದಿನಗಳ ಕಾಲಾವಕಾಶ ನೀಡುತ್ತೇವೆ.
ಇಲ್ಲವಾದರೆ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ. ರೈತರಿಗಾಗಿ ಪ್ರಾಣತ್ಯಾಗಕ್ಕೂ ಸಿದ್ಧನಿದ್ದೇನೆ, ಜೈಲಿಗೆ ಹೋಗಲು ಕೂಡ ಸಿದ್ಧ,” ಎಂದು ಸುರೇಶ್ಗೌಡ ಹೇಳಿದರು.
ತಮ್ಮ ವಿರುದ್ಧ ಯಾವುದೇ ತಪ್ಪಿನ ಆರೋಪವಿದ್ದರೆ ಕಾನೂನು ಕ್ರಮ ಕೈಗೊಳ್ಳಲಿ ಎಂದು ಸವಾಲು ಹಾಕಿದ ಅವರು, “ನಾನು ತಪ್ಪು ಮಾಡಿದ್ದರೆ ಜೈಲಿಗೆ ಕಳುಹಿಸಿ.
ಹೈಕೋರ್ಟ್ ನ್ಯಾಯಮೂರ್ತಿಗಳ ಮೂಲಕ ಸಮಗ್ರ ತನಿಖೆ ನಡೆಸಲಿ. ನಾನು ರೈತರಿಗೆ ಅನ್ಯಾಯ ಮಾಡಿರುವುದನ್ನು ಸಾಬೀತುಪಡಿಸಿದರೆ ಯಾವುದೇ ಕ್ರಮಕ್ಕೂ ಸಿದ್ಧ,” ಎಂದು ಹೇಳಿದರು.
ಸಚಿವ ಚಲುವರಾಯಸ್ವಾಮಿ ಅವರಿಗೆ ಸವಾಲು ಹಾಕಿದ ಸುರೇಶ್ಗೌಡ, “ನಾನು ರೈತರಿಗೆ ಅನ್ಯಾಯ ಮಾಡಿಲ್ಲ ಎಂದು ಅಜ್ಜಯ್ಯನ ಮೇಲೆ ಪ್ರಮಾಣ ಮಾಡಿ ಹೇಳಲಿ,” ಎಂದು ಆಗ್ರಹಿಸಿದರು.
ತಮ್ಮ ಅವಧಿಯಲ್ಲಿ ಅರ್ಹರಿಗೆ ಮಂಜೂರು ಮಾಡಿರುವ ವಿಚಾರದಲ್ಲಿ ತಪ್ಪಿದ್ದರೆ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಹೇಳಿದರು.ನಾಗಮಂಗಲದಲ್ಲಿ ಭೂಮಿ ಹಾಗೂ ಲೇಔಟ್ ವಿಚಾರವಾಗಿಯೂ ಸುರೇಶ್ಗೌಡ ಹಲವು ಆರೋಪಗಳನ್ನು ಮಾಡಿದರು.
ಸಚಿವರಿಗೆ ಸಂಬಂಧಿಸಿದ ಭೂಮಿ ಕುರಿತು ಕೇಳಿಬರುತ್ತಿರುವ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಡಳಿತದ ಕಾರ್ಯವೈಖರಿಯ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದ ಅವರು, ಅಕ್ರಮ ಗಣಿಗಾರಿಕೆ ಸೇರಿದಂತೆ ಹಲವು ವಿಚಾರಗಳಲ್ಲಿ ಕ್ರಮ ಕೈಗೊಳ್ಳದಿರುವುದಕ್ಕೆ ಕಾರಣವೇನು ಎಂದು ಪ್ರಶ್ನಿಸಿದರು.
“ಜಿಲ್ಲಾಧಿಕಾರಿಗಳು ಜನರ ಸೇವೆ ಮಾಡಲು ಬಂದಿದ್ದಾರೆಯೇ ಅಥವಾ ಸಚಿವರ ಸೇವೆ ಮಾಡಲು ಬಂದಿದ್ದಾರೆಯೇ?” ಎಂದು ಪ್ರಶ್ನಿಸಿದ ಸುರೇಶ್ಗೌಡ, ರೈತರ ಸಮಸ್ಯೆಗಳ ಕುರಿತು ತಾವು ನೀಡಿರುವ ಅರ್ಜಿಗಳ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಚಿವ ಚಲುವರಾಯಸ್ವಾಮಿ ಅವರು ತಮ್ಮ ವಿರುದ್ಧದ ಆರೋಪಗಳಿಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿದ ಮಾಜಿ ಶಾಸಕ, ತಮ್ಮ ಮೇಲಿನ ಆರೋಪಗಳು ಸಾಬೀತಾದರೆ ಕಾನೂನು ಕ್ರಮ ಕೈಗೊಳ್ಳುವಂತೆ ಪುನರುಚ್ಚರಿಸಿದರು.
ಅಲ್ಲದೆ, ರೈತರ ಸಮಸ್ಯೆಗಳನ್ನು ತಕ್ಷಣ ಪರಿಹರಿಸದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R